H D Kumaraswamy: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲು
H D Kumaraswamy: ಎಡಿಜಿಪಿ ಚಂದ್ರಶೇಖರ್ ಅವರು ನೀಡಿದ ದೂರಿನನ್ವಯ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಮಂಗಳವಾರ (ನ.5) ಇಂದು ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ಮುಖಂಡರು ನನ್ನ ವಿರುದ್ಧ ದುರುದ್ದೇಶಪೂರ್ವಕ ಆರೋಪ, ಬೆದರಿಕೆ ಮಾಡಿರುವುದಾಗಿ ಚಂದ್ರಶೇಖರ್ ಅವರು ದೂರಿನಲ್ಲಿ ಆರೋಪ ಮಾಡಿದ್ದಾರೆ. ಈ ಕಾರಣದಿಂದ ಕುಮಾರಸ್ವಾಮಿ ಸೇರಿ ಮೂವರ ವಿರುದ್ಧ 42 ನೇ ಎಸಿಎಂಎಂ ನ್ಯಾಯಾಲಯದ ಆದೇಶದಂತೆ ಎಫ್‌ಐಆರ್ ದಾಖಲಾಗಿದೆ.
ಈ ಪ್ರಕರಣದಲ್ಲಿ ಎಚ್ ಡಿ ಕುಮಾರಸ್ವಾಮಿ ಆರೋಪಿ ಎ1, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿ 2, ಆರೋಪಿ 3 ಜೆಡಿಎಸ್ ಮುಖಂಡ ಸುರೇದ್ ಬಾಬು ಎಂದು ಎಫ್‌ಐಆರ್ನಲ್ಲಿ ದಾಖಲಾಗಿದೆ. ಬಿಎನ್‌ಎಸ್ ಸೆಕ್ಷನ್ 224 ರ ಅಡಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
ಪ್ರಕರಣದ ವಿವರ: ಸಾಯಿ ಮಿನರಲ್ಸ್ ಕಂಪನಿಗೆ ಗಣಿ ಗುತ್ತಿಗೆ ಮಂಜೂರನ್ನು ನಿಯಮ ಉಲ್ಲಂಘನೆ ಮಾಡಿದ ಆರೋಪದಡಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಎಡಿಜಿಪಿ ಚಂದ್ರಶೇಖರ್ ಗವರ್ನರ್ ಗೆಹ್ಲೋಟ್‌ಗೆ ಪತ್ರವನ್ನು ಬರೆದಿದ್ದರು. ಅನಂತರ ಈ ಪತ್ರದ ಮಾಹಿತಿ ಸೋರಿಕೆಯಾಗಿತ್ತು. ನಂತರ ಕುಮಾರಸ್ವಾಮಿ, ಎಡಿಜಿಪಿ ವಿರುದ್ಧ ವಾಗ್ದಾಳಿ ಮಾಡಿದರು. ʼನಿಮ್ಮ ವಿರುದ್ಧವೇ ಕೇಸ್ ಇದೆ. ಆರೋಪಿ ನಂ.2 ಹೈಕೋರ್ಟ್‌ನಲ್ಲಿ ಅಧಿಕಾರಿ ತಡೆಯಾಜ್ಞೆ ತಗೊಂಡಿದ್ದಾರೆʼ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಎಡಿಜಿಪಿ ಚಂದ್ರಶೇಖರ್, ಹಂದಿಗಳೊಂದಿಗೆ ಎಂದಿಗೂ ಜಗಳಕ್ಕೆ ಇಳಿಯಬೇಡಿ, ಇಳಿದರೆ ನಾವು ಗಲೀಜಾಗುತ್ತೇವೆ. ಏಕೆಂದರೆ ಹಂದಿಗಳು ಕೊಳಕನ್ನೇ ಇಷ್ಟಪಡುತ್ತದೆ ಎಂದು ಜಾರ್ಜ್ ಬರ್ನಾಡ್ ಶಾ ಅವರ ಹೇಳಿಕೆಯನ್ನು ಉಲ್ಲೇಖ ಮಾಡಿದ್ದರು.