Udupi: ಆರೋಪಿ ದಿಲೀಪ್ ಜೂನ್‌ನಲ್ಲೇ ವಿಷ ಪದಾರ್ಥ ಖರೀದಿ; ವೈದ್ಯಕೀಯ ವಿದ್ಯಾರ್ಥಿಯೆಂದು ನಂಬಿಸಿ ಖರೀದಿ
Udupi: ಅಜೆಕಾರು ದೆಪ್ಪುತ್ತೆ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ದಿಲೀಪ್ ಹೆಗ್ಡೆ ವಿಷ ಪದಾರ್ಥವನ್ನು ಜೂನ್‌ನಲ್ಲಿ ಉಡುಪಿಯ ಒಳಕಾಡಿನ ರಾಮನ್ಸ್ ಲ್ಯಾಬ್‌ನಲ್ಲಿ ಖರೀದಿ ಮಾಡಿದ್ದಾನೆ ಎಂಬ ಸಂಗತಿ ಇದೀಗ ಪೊಲೀಸ್ ತನಿಖೆಯಲ್ಲಿ ಹೊರಬಿದ್ದಿದೆ.
ಬಾಲಕೃಷ್ಣ ಅವರನ್ನು ಕೊಲೆ ಮಾಡಲು ಐದು ತಿಂಗಳ ಹಿಂದೆಯೇ ಸಂಚು ಹೆಣೆಯಲಾಗಿತ್ತು. ತಾನು ವೈದ್ಯಕೀಯ ವಿದ್ಯಾರ್ಥಿ ತನ್ನ ಲ್ಯಾಬ್‌ನ ಬಳಕೆಗೆ ಬೇಕು ಎಂದು ಲ್ಯಾಬ್‌ನವರನ್ನು ನಂಬಿಸಿದ್ದ ಈತ ನಂತರ “ಆರ್ಸೆನಿಕ್ ಟ್ರೈ ಆಕ್ಸೈಡ್ʼ ನ್ನು ಖರೀದಿ ಮಾಡಿದ್ದ. ಈ ಮೂಲಕ ಬಾಲಕೃಷ್ಣ ಕೊಲೆಗೆ ಆರೋಪಿಗಳು ಐದು ತಿಂಗಳ ಹಿಂದೆಯೇ ಪ್ಲ್ಯಾನಿಂಗ್ ಮಾಡಿದ್ದರು ಎನ್ನಲಾಗಿದೆ.
ರಾಮನ್ಸ್ ಲ್ಯಾಬ್‌ನ ಮಾಲಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಲ್ಯಾಬ್ ಮಾಲಕರು ಮಾಹಿತಿ ನೀಡಿದ್ದು, ಅಗತ್ಯ ಬಿದ್ದ ಸಂದರ್ಭದಲ್ಲಿ ಮತ್ತೆ ವಿಚಾರಣೆಗೆ ಒಳಪಡಿಸುವುದಾಗಿ ಪೊಲೀಸರು ಹೇಳಿದ್ದಾರೆ.
ಆರೋಪಿ ದಿಲೀಪ್ ಮುಂಬಯಿಯಲ್ಲಿ ಶಿಕ್ಷಣ ಪಡೆದಿದ್ದರೂ ಸಾಮಾಜಿಕವಾಗಿ ಯಾರೊಂದಿಗೂ ಬೆರೆತವನಲ್ಲ. ತನ್ನ ಪಾಡಿಗೆ ತಾನು ಇದ್ದವನು. ಕಾರ್ಕಳದಲ್ಲಿ ಕೆಲ ವರ್ಷಗಳ ಹಿಂದೆ ಈತನ ಕುಟುಂಬ ಹೊಸ ಉದ್ದಿಮೆ ಪ್ರಾರಂಭ ಮಾಡಿದರು. ಅದರಲ್ಲಿ ತೊಡಗಿಸಿಕೊಂಡಿದ್ದ ಈತನಿಗೆ ಜನ ಸಂಪರ್ಕವೂ ಕಡಿಮೆ. ಅಂಥವನು ಕಿಲ್ಲರ್ ಹೇಗಾದ? ಎನ್ನುವುದು ಇದೀಗ ಪ್ರಶ್ನೆ.
ಈತ ಆರ್ಸೆನಿಕ್ ಟ್ರೈ ಆಕ್ಸೈಡ್ ಬಗ್ಗೆ ಮಾಹಿತಿ ಪಡೆದಿದ್ದೇ ಗೂಗಲ್ ಸರ್ಚ್‌ನಿಂದ. ಸ್ಲೋ ಪಾಯ್ಸನ್ ಕುರಿತು ವ್ಯವಸ್ಥಿತ ಅಧ್ಯಯನ ಮಾಡಲು ಈ ಕೊಲೆಯ ಸಂಚನ್ನು ರೂಪಿಸಲಾಗಿತ್ತು. ಈ ವಿಷ ಪದಾರ್ಥ ಮನುಷ್ಯನ ದೇಹಕ್ಕೆ ಹೊಕ್ಕ ನಂತರ ಮನುಷ್ಯ ಅನಾರೋಗ್ಯಕ್ಕೀಡಾಗಿ ಎಷ್ಟು ದಿನದಲ್ಲಿ ಸಾಯುತ್ತಾನೆ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು. ಹಾಗಾಗಿ ಈ ಮಾರ್ಗವನ್ನು ಅನುಸರಿಸಿದ ಸಾಧ್ಯತೆ ಹೆಚ್ಚಿದೆ.