Weather Forecast: ಕರ್ನಾಟಕದ ಹವಾಮಾನ ವರದಿ: ಅ. 30ರ ತನಕ ಮಳೆ ಕಡಿಮೆಯಾದರೂ ಬಿಸಿಲು-ಮೋಡದ ಆಟ

Weather Forecast: ಕಾಸರಗೋಡು(Kasargodu) ಸೇರಿದಂತೆ ಕರ್ನಾಟಕದ ಕರಾವಳಿ(Coastal) ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ(Cloudy) ವಾತಾವರಣದ ಮುನ್ಸೂಚನೆ ಇದೆ. ದಕ್ಷಿಣ ಕನ್ನಡದ ಸುಳ್ಯ, ಸುಬ್ರಮಣ್ಯ ಸುತ್ತಮುತ್ತ ಪ್ರದೇಶಗಳಲ್ಲಿ ಒಂದೆರಡು ಕಡೆ ಗುಡುಗು ಸಹಿತ ತುಂತುರು ಮಳೆಯ(Tunder and Rain) ಸಾಧ್ಯತೆ ಇದೆ.
ಈಗಿನಂತೆ, ಒಕ್ಟೊಬರ್ 30ರ ತನಕ ಮಳೆ ಕಡಿಮೆಯಾದರೂ ಬಿಸಿಲು ಹಾಗೂ ಮೋಡದ ವಾತಾವರಣ ಮುಂದುವರಿಯಲಿದ್ದು, ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅನಿರೀಕ್ಷಿತವಾಗಿ ಸೀಮಿತ ಪ್ರದೇಶಗಳಲ್ಲಿ ಒಂದೆರಡು ಕಡೆ ಸಾಮಾನ್ಯ ಅಥವಾ ತುಂತುರು ಮಳೆಯ ಸಾಧ್ಯತೆ ಇದೆ. ನಂತರ ಮತ್ತೆ ಗುಡುಗು ಮಳೆ ಪ್ರಾರಂಭವಾಗುವ ಮುನ್ಸೂಚೆನೆ ಇದೆ.

ಮಲೆನಾಡು : ಕೊಡಗಿನ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಒಂದೆರಡು ಕಡೆ ಮಧ್ಯಾಹ್ನ ನಂತರ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳ ಅಲ್ಲಲ್ಲಿ ಮಧ್ಯಾಹ್ನ ನಂತರ ಮೋಡ ಹಾಗೂ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ಅ. 28ರಿಂದ ಮೋಡ ಹಾಗೂ ಮಧ್ಯಾಹ್ನ ನಂತರ ಅಲ್ಲಲ್ಲಿ ಸಾಮಾನ್ಯ ಮಳೆಯ ಪ್ರಾರಂಭವಾಗಿ ಅ.31ರಿಂದ ಮಳೆ ಹೆಚ್ಚಾಗುವ ಲಕ್ಷಣಗಳಿವೆ.

ಒಳನಾಡು : ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಬಿಸಿಲಿನ ವಾತಾವರಣದ ಮುನ್ಸೂಚೆನೆ ಇದೆ. ದಕ್ಷಿಣ ಒಳನಾಡಿನ ಮೈಸೂರಿನ ದಕ್ಷಿಣ ಭಾಗಗಳಲ್ಲಿ ಹಾಗೂ ಚಾಮರಾಜನಗರದ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಡಾನಾ ಚಂಡಮಾರುತದ ಪ್ರಭಾವದಿಂದ ಈಗ ಉತ್ತರ ಭಾರತ ಕಡೆಯಿಂದ ಬೀಸುತ್ತಿರುವ ಶುಷ್ಕ ಗಾಳಿಯ ಕಾರಣದಿಂದ ಉತ್ತರ ಒಳನಾಡಿನಲ್ಲಿ ಒಣ ಹವೆ ಉಂಟಾಗಿದ್ದು, ಇದು ತಾತ್ಕಾಲಿಕವಾಗಿರಬಹುದು.

ಈ ಚಂಡಮಾರುತವು ಸಂಪೂರ್ಣ ಶಿಥಿಲಗೊಳ್ಳುತ್ತಿದ್ದಂತೆಯೆ, ಅಂದರೆ ಸುಮಾರು ಅ. 30ರಿಂದ ಅಧಿಕ ತಾಪಮಾನ ಹಾಗೂ ಅಲ್ಪ ಪ್ರಮಾಣದಲ್ಲಿ ಹಿಂಗಾರು ಚುರುಕಾಗುವ ಕಾರಣದಿಂದ ರಾಜ್ಯದಲ್ಲಿ ಮತ್ತೆ ಮಳೆ ಪ್ರಾರಂಭವಾಗುವ ಸೂಚನೆಗಳಿವೆ.

Leave A Reply

Your email address will not be published.