B K Hariprasad: ‘ಕಾವಿ ಹಾಕಿ ಪುಡಿ ರಾಜಕಾರಣಿಯಂತೆ ಮಾತಾಡ್ಬೇಡಿ, ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತೆ’ – ಪೇಜಾವರ ಶ್ರೀಗಳ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ
B K Hariprasad: ಪೇಜಾವರ ಶ್ರೀ(Pejavara Shri) ಗಳ ವಿರುದ್ಧ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್(B K Hariprasad) ತೀವ್ರ ವಾಗ್ದಾಳಿ ನಡೆಸಿದ್ದು ‘ಕಾವಿ ಬಟ್ಟೆ ಧರಿಸಿ ಪುಡಿ ರಾಜಕಾರಣಿಯಂತೆ ಮಾತಾಡುವುದನ್ನು ಮೊದಲು ಬಿಡಲಿ. ಅವರು ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತೆ’ ಎಂದು ಕಿಡಿಕಾರಿದ್ದಾರೆ.
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ಇತ್ತೀಚೆಗೆ ಜಾತಿಗಣತಿ ವರದಿ ವಿರುದ್ಧ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ ಕೆ ಹರಿಪ್ರಸಾದ್ ಅವರು ‘ಜಾತಿ ಗಣತಿ ವಿರೋಧಿಸುವ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು, ‘ತಮ್ಮ ಮಠದಲ್ಲಿನ ಶ್ರೇಣಿಕೃತ ಜಾತಿ ಪದ್ಧತಿಯ ಆಚರಣೆ ಬಗ್ಗೆ ಮೊದಲು ಮಾತಾಡಲಿ. ಅನಿಷ್ಠ ಪಂಕ್ತಿಭೇದ, ಮಡೆಸ್ನಾನ ಪೋಷಿಸಿಕೊಂಡು ಬರುತ್ತಿದ್ದಾರೆ. ಕಾವಿ ಬಟ್ಟೆಯನ್ನು ಹಾಕಿಕೊಂಡು ಪುಡಿ ರಾಜಕಾರಣಿಯಂತೆ ಮಾತಾಡುವುದನ್ನು ಬಿಡಲಿ’ ಎಂದು ಹೇಳಿದ್ದಾರೆ.
ಅಲ್ಲದೆ ‘ಪೇಜಾವರ ಶ್ರೀಗಳು ಜಾತ್ಯತೀತತೆ ಬಗ್ಗೆ ಮಾತಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ. ‘ಭಾರತ ಜಾತ್ಯತೀತ ರಾಷ್ಟ್ರ, ಜಾತಿ ಗಣತಿ ಯಾಕೆ ಮಾಡಬೇಕು’ ಎಂದು ಶ್ರೀಗಳು ಹೇಳಿದ್ದಾರೆ. ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಗಳು ಹೇಳಿಕೆಗಳು ಕೊಟ್ಟಾಗ ನಾವ್ಯಾರು ಮಾತನಾಡುತ್ತಿರಲಿಲ್ಲ. ಅವರಿಗೆ ವಯಸ್ಸಾಗಿತ್ತು. ಈಗಿರುವಂತಹ ಸ್ವಾಮೀಜಿ ಅಯೋಧ್ಯೆಯ ರಾಮಮಂದಿರದಿಂದ ಹಿಡಿದು ಎಲ್ಲ ವಿಚಾರದಲ್ಲೂ ಪುಡಿ ರಾಜಕಾರಣಿಯಂತೆ ಮಾತನಾಡುತ್ತಿದ್ದಾರೆ. ಈ ವಿಚಾರಗಳು ಮಾತನಾಡಬೇಕೆಂದರೆ, ಅವರು ಮೊದಲು ಕಾವಿ ಬಟ್ಟೆ ಬಿಚ್ಚಿಟ್ಟು, ಬೇರೆ ಬಟ್ಟೆ ಹಾಕಿಕೊಂಡು ಮಾತನಾಡಿದಾಗ ನಾವು ಸರಿಯಾದ ಉತ್ತರ ನಾವು ಕೊಡಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟೇ ಅಲ್ಲದೆ ‘ಜಾತಿ ಗಣತಿ ಕುರಿತು ಮಾತನಾಡುವ ಮೊದಲು ತಮ್ಮ ಮಠದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡಲಿ. ಸ್ವಾಮೀಜಿ ಅವರು ಪಂಕ್ತಿಭೋಜನ ಹಾಗೂ ಮಡೆಸ್ನಾನಕ್ಕೆ ಉತ್ತೇಜನ ನೀಡುತ್ತಾರೆ. ಸ್ವಾಮೀಜಿಗಳು ಸರ್ವ ಸಂಘ ಪರಿತ್ಯಾಗಿಗಳು ಎಂಬ ಮಾತಿದೆ. ಆದರೆ, ಈಗ ಸ್ವಾಮೀಜಿಗಳು ಬದಲಾಗಿದ್ದಾರೆ. ಮೊದಲು ಇವರ ಮಠಗಳಲ್ಲಿ ಏನು ನಡೆಯುತ್ತಿದೆ ಎಂದು ನೋಡಿ, ಜಾತ್ಯತೀತ, ಜಾತಿಗಣತಿ ಬಗ್ಗೆ ಮಾತನಾಡುವುದು ಉತ್ತಮ ಎಂದು ಕಾಣುತ್ತದೆ. ಬಹಳಷ್ಟು ಜನ ನಂಬಿಕೆ ಇಟ್ಟುಕೊಂಡಿರುವ ಸ್ವಾಮೀಜಿ ಇವರು. ಪುಡಿ ರಾಜಕಾರಣಿಯ ರೀತಿಯಲ್ಲಿ ಮಾತನಾಡಬಾರದು ಎಂದು ಬಿ.ಕೆ.ಹರಿಪ್ರಸಾದ್ ಸಲಹೆ ನೀಡಿದರು.
https://x.com/HariprasadBK2/status/1849064754616086686?t=e6oGhmY-19Zhrslkwmk8Yg&s=08