B Y Vijayendra: ಯಡಿಯೂರಪ್ಪ ಪತ್ನಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಕೈವಾಡ ವಿಚಾರ – ವಿಜಯೇಂದ್ರ ಭಾರೀ ಆಕ್ರೋಶ !!
B Y Vijayendra: : ಬಿ.ಎಸ್. ಯಡಿಯೂರಪ್ಪ(BS Yadiyurappa) ಅವರ ಪತ್ನಿ ಮೈತ್ರಾದೇವಿ ಅವರ ಸಾವಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha karandlaje) ಅವರ ಪಾತ್ರವಿದೆ ಎಂದು ಸಚಿವ ಭೈರತಿ ಸುರೇಶ್ ಅವರು ಗಂಭೀರ ಆರೋಪ ಮಾಡಿದ್ದು, ಈ ಕುರಿತು ಯಡಿಯೂರಪ್ಪರ ಪುತ್ರ ಬಿವೈ ವಿಜಯೇಂದ್ರ(B Y Vijayendra)ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು, ಬೈರತಿ ಸುರೇಶ್ ವಿರುದ್ಧ ಕೆಂಡಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನಮ್ಮ ತಾಯಿಯವರ ಆಕಸ್ಮಿಕ ಸಾವಿನ ವಿಚಾರಗಳನ್ನು ಮುಂದೆ ತಂದು ಮಾತನಾಡುತ್ತಿರುವುದು ನಿಮ್ಮ ಅಸಭ್ಯ ಹಾಗೂ ಸಂಸ್ಕೃತಿ ಹೀನ ನಡವಳಿಕೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಸುರೇಶ್ (Byrathi Suresh) ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಅವರು ‘ಮಿಸ್ಟರ್ ಭೈರತಿ ಸುರೇಶ್ ಅವರೇ, ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎನ್ನುವುದು ಗಾದೆ ಮಾತು, ಆದರೆ ನೀವು ಹಾಗೂ ನಿಮ್ಮ ಮುಖ್ಯಮಂತ್ರಿಗಳ ಮೈಯೆಲ್ಲಾ ಭ್ರಷ್ಟತೆಯ ಹುಣ್ಣು ತುಂಬಿಕೊಂಡು ನಾರುತ್ತಿದೆ. ಒಂದರ ಮೇಲೊಂದು ತನಿಖೆಗಳು ನಡೆಯುತ್ತಲೇ ಇವೆ, ಕರ್ನಾಟಕದ ಇತಿಹಾಸದಲ್ಲಿ ಅನೈತಿಕತೆಯನ್ನು ಕತ್ತಿಗೆ ಕಟ್ಟಿಕೊಂಡು ಸರ್ಕಾರ ನಡೆಸುತ್ತಿರುವ ಇತಿಹಾಸ ನಿರ್ಮಿಸಿದ ದಾಖಲೆ ನಿಮಗೆ ಹಾಗೂ ನಿಮ್ಮ ಮುಖ್ಯಮಂತ್ರಿಗೇ ಸಲ್ಲುತ್ತದೆ’ ಎಂದು ವಾಗ್ದಾಳಿ ಮಾಡಿದ್ದಾರೆ.
ಅಲ್ಲದೆ ‘ನೀವು ನಡೆಸಿದ ಕಡು ಭ್ರಷ್ಟ ಹಗರಣಗಳಿಗೆ ಕನಸು ಮನಸ್ಸಿನಲ್ಲೂ ಎಣಿಸದ ರೀತಿಯಲ್ಲಿ ತನಿಖೆಗಳು ನಿಮ್ಮ ಕೊರಳು ಸುತ್ತಿ ಕೊಳ್ಳುತ್ತಿವೆ ಇದರಿಂದ ತೀವ್ರ ಹತಾಶಗೊಂಡಿದ್ದೀರಿ. ಮಾನ್ಯ ಶೋಭಾ ಕರಂದ್ಲಾಜೆ ಅವರು ಮಾಡಿರುವ ಆರೋಪಗಳಿಗೆ ಉತ್ತರಿಸಲಾಗದ ನೀವು ಹೇಡಿಯಂತೆ ಕಪೋಲ ಕಲ್ಪಿತ ಆರೋಪಗಳನ್ನು ಮಾಡಿ ವಿಷಯಾಂತರ ಮಾಡಲು ಹೊರಟಿರುವ ನಿಮ್ಮ ನಡೆ “ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಗುಣವ ಬಿಡು ನಾಲಿಗೆ” ಎಂಬ ದಾಸರ ಪದವನ್ನು ನಿಮಗೆ ನೆನಪಿಸಿ ಹೇಳಬೇಕಾಗಿದೆ. ಮಾಡಿದ್ದುಣ್ಣೋ ಮಹರಾಯ ಎಂಬ ಮಾತಿನಂತೆ ಅತೀ ಶೀಘ್ರದಲ್ಲೇ ನಿಮ್ಮ ಹಾದಿ ಕೃಷ್ಣನ ಜನ್ಮಸ್ಥಾನದತ್ತ ಸಾಗಲಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಶಾಸಕಿ ಭಾರತಿ ಶೆಟ್ಟಿ ಆಕ್ರೋಶ:
ಈ ವಿಚಾರವಾಗಿ ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ತೀವ್ರವಾಗಿ ಖಂಡಿಸಿದ್ದು, ಸುರೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸಚಿವ ಸ್ಥಾನದಲ್ಲಿರುವ ಭೈರತಿ ಸುರೇಶ್ ಅವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ನಾನು ಶಿವಮೊಗ್ಗ ಜಿಲ್ಲೆಯವಳು. ಯಡಿಯೂರಪ್ಪಜೀ ಮತ್ತು ಮೈತ್ರಾದೇವಿ ಹಾಗೂ ಶೋಭಾ ಕರಂದ್ಲಾಜೆ ಅವರನ್ನು ಹತ್ತಿರದಿಂದ ಬಲ್ಲವಳು. ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದನ್ನು ಖಂಡಿಸುತ್ತೇನೆ. ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ತಿಳಿಸಿದ್ದಾರೆ.
ಏನಿದು ಪ್ರಕರಣ?
ಮುಡಾ ಹಗರಣ(Muda Scam) ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ನಡೆಯುತ್ತಿದ್ದ ವೇಳೆ ಈ ಕುರಿತಂತೆ ‘ಬೈರತಿ ಸುರೇಶ್ ಬಂಧನವಾದರೆ ಹಗರಣದ ಸತ್ಯಾಂಶ ಬಯಲಾಗಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ’ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಸಚಿವೆ ವಿರುದ್ಧ ಸಚಿವ ಬೈರತಿ ಸುರೇಶ್ ಗಂಭೀರ ಆರೋಪ ಮಾಡಿದ್ದು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರ ಇದೆ ಎಂದು ನನಗೆ ಅನುಮಾನ ಇದೆ. ರಾಜ್ಯ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಳ್ಳೆಯವರು. ಅವರ ಮಕ್ಕಳು ಕೂಡ ಒಳ್ಳೆಯವರು. ಹಾಗಾದರೆ, ಯಡಿಯೂರಪ್ಪನವರ ಪತ್ನಿ ಮೈತ್ರಾ ದೇವಿ ಅವರ ಸಾವು ಹೇಗಾಯ್ತು. ಆ ಸಾವಿನಲ್ಲಿ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಪಾತ್ರ ಇರುವ ಬಗ್ಗೆ ನನಗೆ ಅನುಮಾನ ಇದೆ. ಅವರ ಸಾವಿನ ಬಗ್ಗೆ ತನಿಖೆ ಆಗಬೇಕು ಎಂದಿದ್ದರು.