Navratri Festival: ಆಯುಧ ಪೂಜೆ ಮಾಡೋರು ಮತ್ತು ಮಾಡದವರು ಈ ವಿಚಾರ ಖಂಡಿತಾ ತಿಳಿದುಕೊಳ್ಳಿ!
Navratri Festival: ನವರಾತ್ರಿ ಹಬ್ಬವನ್ನು (Navratri Festival) ಹಿಂದೂಗಳು ಪ್ರತಿ ವರ್ಷ ಆಶ್ವಯುಜ ಮಾಸದಲ್ಲಿ ಅದ್ದೂರಿಯಾಗಿ ಆಚರಿಸುತ್ತಾರೆ. ಒಂಬತ್ತು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಪ್ರತಿ ದಿನವೂ ವಿಶೇಷ ಪೂಜೆಗಳನ್ನು ಕೈಗೊಳ್ಳಲಾಗುತ್ತದೆ. ಅವುಗಳಲ್ಲಿ ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಗೆ (Ayudha Puja) ವಿಶೇಷ ಮಹತ್ವವಿದೆ.
ಆಯುಧಗಳನ್ನು ಪೂಜಿಸುವ ಮತ್ತು ಅವುಗಳಿಗೆ ಕೃತಜ್ಞರಾಗಿರುವ ದಿನವೇ ಆಯುಧ ಪೂಜೆ. ಹಿಂದೆ ರಾಜರಿಗೆ ಆಯುಧಗಳ ಬಹಳ ಮುಖ್ಯವಾಗಿದ್ದವು. ಈ ಕಾರಣಕ್ಕೆ ನಮ್ಮನ್ನು ರಕ್ಷಿಸುವ ಕತ್ತಿ, ಖಡ್ಗಗದಂತಹ ಆಯುಧಗಳಿಗೆ ಒಂದು ದಿನ ವಿರಾಮ ನೀಡಿ ಅವುಗಳಿಗೆ ಕೃತಜ್ಞತೆ ಅರ್ಪಿಸಲು ಆಯುಧ ಪೂಜೆ ದಿನದಂದು ವಿಶೇಷ ಪೂಜೆ ಮಾಡಲಾಗುತ್ತದೆ.
ಇನ್ನು ಹಿಂದೂ ಸಂಸ್ಕೃತಿಯ ಪ್ರಕಾರ ಯಂತ್ರಗಳಿಗೂ ದೈವೀಕ ಶಕ್ತಿ ಇದೆ. ಇದರಿಂದಾಗಿ ಆಯುಧ ಪೂಜೆಯಂದು ವಾಹನಗಳಿಗೆ ಪೂಜೆ ಸಲ್ಲಿಸಿದರೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಎಂಬ ನಂಬಿಕೆ ಇದೆ. ಅಂತೆಯೇ,ರೈತರು ನೇಗಿಲು ಕೃಷಿಗೆ ಬಳಸುವ ವಸ್ತುಗಳಿಗೆ ಪೂಜೆ ಮಾಡಿದರೆ ಸೈನಿಕರು ಬಂದೂಕು, ಫಿರಂಗಿ, ಯುದ್ಧ ಪರಿಕರಗಳಿಗೆ, ವಾಹನಗಳಿಗೆ ಪೂಜೆ ಮಾಡುತ್ತಾರೆ. ಇನ್ನು ಮನೆಯಲ್ಲಿರುವ ಪುಟಾಣಿಯ ಸೈಕಲಿನಿಂದ ಹಿಡಿದು ದೊಡ್ಡ ವಾಹನಗಳಿಗೆ ಪೂಜೆ ನಡೆದರೆ ಕಚೇರಿಗಳಲ್ಲಿ ಕಂಪ್ಯೂಟರ್, ಉತ್ಪಾದನಾ ಯಂತ್ರಗಳಿಗೆ ಪೂಜೆ ನಡೆಯುತ್ತದೆ. ಕುಶಲಕರ್ಮಿಗಳು ತಮ್ಮ ಉಪಕರಣಗಳನ್ನು ಪೂಜಿಸುತ್ತಾರೆ, ಕಲೆಗೆ ಸಂಬಂಧಿಸಿದ ಜನರು ತಮ್ಮ ವಾದ್ಯಗಳನ್ನು ಪೂಜಿಸುತ್ತಾರೆ.
ಇನ್ನು ರಾಜರ ಆಡಳಿತ ಅವಧಿಯಲ್ಲಿ ನವಮಿಯಂದು ಆಯುಧಗಳಿಗೆ ಪೂಜೆ ಮಾಡಿ ದಶಮಿಯಂದು ಯುದ್ಧಕ್ಕೆ ಹೊರಟರೆ ಹೊರಟರೆ ವಿಜಯ ಸಿದ್ಧಿ ಎನ್ನುವ ನಂಬಿಕೆ ಇತ್ತು. ಈ ಕಾರಣಕ್ಕೆ ನವಮಿಯಂದೇ ಪೂಜೆ ಸಲ್ಲಿಸಿ ಜೈತ್ರಯಾತ್ರೆಗೆ ತೆರಳುತ್ತಿದ್ದರು. ಈ ಪದ್ದತಿ ಈಗಲೂ ಉಳಿದುಕೊಂಡಿದೆ.
ಪೌರಾಣಿಕ ಕಥೆಯ ಪ್ರಕಾರ, ದ್ವಾಪರ ಯುಗದಲ್ಲಿ ಪಾಂಡವರು (Pandavas) 12 ವರ್ಷಗಳ ವನವಾಸ, ಒಂದು ವರ್ಷ ಅಜ್ಞಾತವಾಸ ಮಾಡುತ್ತಾರೆ. ಅಜ್ಞಾತವಾಸವನ್ನು ಮತ್ಸ್ಯನಗರದ ವಿರಾಟರಾಯನ ಅರಮನೆಯಲ್ಲಿ ಕಳೆಯುತ್ತಾರೆ. ಹೀಗೆ ಪಾಂಡವರು 12 ವರ್ಷಗಳ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ನವರಾತ್ರಿ ಹಬ್ಬ ಮುಗಿಸಿ ದಶಮಿಯಂದು ಸಾಧಿಸಿದ ವಿಜಯದ ಕುರುಹಾಗಿ ಕೂಡ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ ಎನ್ನಲಾಗುತ್ತೆ.