Areca nut : ಅಡಿಕೆಗೆ ವಕ್ಕರಿಸುತ್ತಿದೆ ‘ಚೀನಿ ವೈರಸ್’ ರೋಗ – ಆತಂಕದಲ್ಲಿ ಬೆಳೆಗಾರರು, ಏನಿದರ ಲಕ್ಷಣ?

Areca nut : ಕೊಳೆರೋಗ, ಹಳದಿ ಎಲೆ ರೋಗ, ಎಲೆ ಚುಕ್ಕಿರೋಗಗಳಿಂದ ಕಂಗೆಟ್ಟಿರುವ ಅಡಿಕೆ(Areca nut) ಬೆಳೆಗಾರರಿಗೆ ಈಗ ಚೀನಿ ವೈರಸ್ ಬಂದು ವಕ್ಕರಿಸುತ್ತಿದೆ. ಇದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಹೌದು, ಇದುವರೆಗೆ ಶಿಲೀಂಧ್ರ, ದುಂಡಾಣು, ಫೈಟೋಪ್ಲಾಸ್ಮ ರೋಗಾಣುಗಳಿಂದಾಗಿ ಅಡಿಕೆಗೆ ರೋಗ ಬರುತ್ತಿತ್ತು. ಇದೇ ಮೊದಲ ಬಾರಿ ವೈರಸ್‌ ಬಾಧಿಸಿದೆ. ಅದೂ ಕೂಡ ಚೀನಿ ವೈರಸ್(China Varies). ಇದನ್ನು ತೋಟಗಾರಿಕೆ ವಿಜ್ಞಾನಿಗಳು “ರಿಂಗ್‌ ಸ್ಪಾಟ್‌ ಡಿಸೀಸ್‌’ ಎಂದು ಗುರುತಿಸಿದ್ದಾರೆ.

ಅಂದಹಾಗೆ 2023ರಲ್ಲೇ ಈ ರೋಗ ಲಕ್ಷಣ ಕರ್ನಾಟಕ ಹಾಗೂ ಅಸ್ಸಾಂನಲ್ಲಿ ಕಾಣಿಸಿಕೊಂಡಿತ್ತು. ಎಲೆ ಚುಕ್ಕಿ ರೋಗವೆಂದೇ ಕೃಷಿಕರೂ ಭಾವಿಸಿದ್ದರು. ರೋಗ ಲಕ್ಷಣಗಳನ್ನು ಅಧ್ಯಯನ ಮಾಡಿದ ಸಿಪಿಸಿಆರ್‌ಐ ವಿಜ್ಞಾನಿಗಳು ಇದು ಅರೆಪಾ ವೈರಸ್‌ ವರ್ಗಕ್ಕೆ ಸೇರಿದ ಹೊಸ ನೆಕ್ರೋಟಿಕ್‌ ರಿಂಗ್‌ ಸ್ಪಾಟ್‌ ವೈರಸ್‌ 2 (ಎಎನ್‌ಆರ್‌ಎಸ್‌ವಿ2) ಎಂದು ಖಚಿತಪಡಿಸಿದ್ದಾರೆ.

ಲಕ್ಷಣಗಳೇನು?
ಹಸುರು ಸೋಗೆಗಳಲ್ಲಿ ಮಚ್ಚೆ ರೀತಿಯಾಗಿ ಕಾಣಿಸಿಕೊಳ್ಳುತ್ತದೆ ಹಾಗೂ ವೈರಸ್‌ಗಳು ಹರಿತ್ತನ್ನು ತಿನ್ನುತ್ತಾ ಹೋಗುತ್ತವೆ. ಸೋಗೆ ಸೊರಗುತ್ತಾ ಹೋಗಿ ಮರ ಸಾಯುವ ಪರಿಸ್ಥಿತಿ ಎದುರಾಗಬಹುದು.

ಕೀಟ ಯಾವುದು?
ರೋಗ ತೋಟದಿಂದ ತೋಟಕ್ಕೆ ರೋಗ ಹರಡುತ್ತದೆ. ವೈರಸ್‌ ಹರಡಬೇಕಾದರೆ ವಾಹಕವಾಗಿ ಯಾವುದಾದರೂ ಕೀಟ ಬೇಕಾಗುತ್ತದೆ. ರಿಂಗ್‌ಸ್ಪಾಟ್‌ ವೈರಸ್‌ ಹರಡುವ ಕೀಟ ಯಾವುದು ಎನ್ನುವ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ. ಮೀಲಿ ಬಗ್‌ ಎನ್ನುವ ಬಿಳಿ ಕೀಟವಿರಬಹುದು ಎನ್ನುವ ಸಂಶಯವಷ್ಟೇ ಇದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸಿಪಿಸಿಆರ್‌ಐ ವಿಜ್ಞಾನಿ ಡಾ| ವಿನಾಯಕ ಹೆಗ್ಡೆ ಅವರು ಬಂಟ್ವಾಳ ತಾಲೂಕಿನ ಕುಂಡಡ್ಕ, ನೇರಳಕಟ್ಟೆಯಿಂದ ಇದಕ್ಕೆ ಪೂರಕವಾದ ಮಾದರಿ ಸಂಗ್ರಹಿಸಿ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಎನ್‌ಆರ್‌ಎಸ್‌ವಿ 2 ಎಂದು ಖಚಿತಪಡಿಸಲಾಗಿದೆ. ಶಿರಸಿ, ಶಿವಮೊಗ್ಗ, ಮೈಸೂರಿನ ಕೆಲವು ತೋಟಗಳಲ್ಲೂ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ ಇದೊಂದು ಹೊಸ ಗಿಡವನ್ನು ಬಾಧಿಸುವ ವೈರಸ್‌ ಆಗಿದ್ದು, ಅದರ ಲಕ್ಷಣ ಹಾಗೂ ಪರಿಣಾಮಗಳ ಬಗ್ಗೆ ಇನ್ನೂ ಸರಿಯಾದ ಮಾಹಿತಿಯಿಲ್ಲ. ವೈರಸ್‌ ತಗಲುವುದು ಎಂದರೆ ಗಿಡಕ್ಕೆ ಕ್ಯಾನ್ಸರ್‌ ಬಾಧಿಸಿದಂತೆಯೇ. ರೋಗಗ್ರಸ್ತ ಮರಗಳ ನಿರ್ಮೂಲನೆ ಮತ್ತು ರೋಗವಾಹಕ ಕೀಟಗಳ ನಿಯಂತ್ರಣವಷ್ಟೇ ಸದ್ಯಕ್ಕಿರುವ ಪರಿಹಾರ ಕ್ರಮ. ಹೆಚ್ಚಿನ ಸಂಶೋಧನೆ ಆಗಬೇಕಿದೆ ಎನ್ನುತ್ತಾರೆ.

Leave A Reply

Your email address will not be published.