Bigg Boss: ಬಿಗ್ ಬಾಸ್ ಮನೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ! ಮಹಿಳಾ ಆಯೋಗ ಭೇಟಿ?!
Bigg Boss: ಕನ್ನಡದಲ್ಲಿ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ 11ರ (Bigg Boss Kannada 11) ಶುರುವಾಗಿ 1 ವಾರ ಕಳೆದಿದೆ. 17 ಸ್ಪರ್ಧಿಗಳ ರಿಯಲ್ ಗೇಮ್ ಶುರು ಆಗಿದೆ. ಆದ್ರೆ ಅಷ್ಟರಲ್ಲೇ ಬಿಗ್ ಬಾಸ್ ಬಾಸ್ ಮನೆಯಲ್ಲಿ ಮಹಿಳಾ ಆಯೋಗ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೌದು, ಕೆಲ ದಿನಗಳ ಹಿಂದಷ್ಟೇ ಈ ಶೋ ವಿರುದ್ಧ ಮಹಿಳಾ ಆಯೋಗ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿತ್ತು. ಬಿಗ್ ಬಾಸ್ ಶೋದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಮಹಿಳಾ ವಕೀಲೆ ರಕ್ಷಿತಾ ಸಿಂಗ್ ಎಂಬುವವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಈಗ ಬಿಗ್ ಬಾಸ್ ಮನೆಗೆ ಮಹಿಳಾ ಆಯೋಗದ ತಂಡ ಭೇಟಿ ನೀಡಲಿದೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ಹೆಣ್ಮಕ್ಕಳ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ಮಾಡಲಿದ್ದಾರೆ. ಶೋನಲ್ಲಿ ಮಹಿಳೆಯರ ಖಾಸಗಿತನಕ್ಕೆ ಧಕ್ಕೆ ಆಗಿರುವುದು ಕಂಡು ಬಂದಲ್ಲಿ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾದಲ್ಲಿ ಬಿಗ್ಬಾಸ್‌ನ ಆಟದ ಶೈಲಿ ಬದಲಾಗುವ ಸಾಧ್ಯತೆ ಇದೆ. ಈ ಕುರಿತು ಪೊಲೀಸರ ಜೊತೆಗೆ ಬಿಗ್‌ಬಾಸ್ ಮನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ ನೀಡಲಿದ್ದಾರೆ ಎಂದು ಸುದ್ದಿ ಆಗಿದೆ.
ಮಹಿಳಾ ವಕೀಲೆ ರಕ್ಷಿತಾ ಸಿಂಗ್ ನೀಡಿದ ದೂರಿನಲ್ಲಿ, ಬಿಗ್‌ಬಾಸ್ 11 ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಪುರುಷ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಸ್ವರ್ಗ ಮತ್ತು ನರಕ ಎಂದು ಎರಡು ವಿಭಾಗದ ಮೇಲೆ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ನರಕದಲ್ಲಿರೋರಿಗೆ ಕೇವಲ ಗಂಜಿ ಮಾತ್ರ ನೀಡಲಾಗುತ್ತಿದೆ. ಭಾರತದ ಸಂವಿಧಾನ ಪ್ರಕಾರ ನಾಗರಿಕರಿಗೆ ಪೌಷ್ಟಿಕ ಆಹಾರವನ್ನು ಕೊಡದಿರುವುದು ಅಪರಾಧ. ಹಾಗೆಯೇ ಇಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಮಲಗುವ ವ್ಯವಸ್ಥೆಯನ್ನೂ ನೀಡಿಲ್ಲ. ಅಲ್ಲದೆ ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ಬಿಗ್ ಬಾಸ್ 11ರ ಕಾರ್ಯಕ್ರಮದಲ್ಲಿ ಸ್ಪರ್ಧಿಗಳೊಂದಿಗೆ ಕಾನೂನು ಬದ್ಧವಾಗಿ ಒಪ್ಪಂದ ಮಾಡಿಕೊಂಡಿದ್ದು, ಇಂತಹ ನಿರ್ಬಂಧಗಳನ್ನು ಹೇರುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ದೂರು ನೀಡಿದ್ದರು.