Mangaluru: ಖಾಸಗಿ ಬಸ್ಸಿಗೆ “ಇಸ್ರೇಲ್” ಹೆಸರಿಟ್ಟ ವಿಷಯ; ಆಕ್ಷೇಪದ ನಂತರ “ಜೆರುಸಲೇಂ” ಎಂಬ ನಾಮಕರಣ
Mangaluru: ಮೂಲ್ಕಿ-ಮೂಡುಬಿದಿರೆ ನಡುವೆ ಸಂಚರಿಸುವ ಖಾಸಗಿ ಬಸ್ಸಿಗೆ “ಇಸ್ರೇಲ್ ಟ್ರಾವೆಲ್ಸ್” ಎಂದು ಹೆಸರಿಟ್ಟ ವಿಷಯಕ್ಕೆ ಸಂಬಂಧಪಟ್ಟಂತೆ, ವ್ಯಕ್ತವಾಗಿದ್ದ ಆಕ್ಷೇಪದ ಕಾರಣ ಇದೀಗ ಹೆಸರನ್ನು ಬದಲಾವಣೆ ಮಾಡಲಾಗಿದೆ.
ಮೂಲತಃ ಕಟೀಲಿನವರಾದ ಲೆಸ್ಟರ್ ಕಟೀಲು ಅವರು ಇಸ್ರೇಲ್‌ನಲ್ಲಿ ಸುಮಾರು 12 ವರ್ಷಗಳಿಂದ ಉದ್ಯೋಗದಲ್ಲಿದ್ದಾರೆ. ಇವರು ಮಂಗಳೂರಿನಲ್ಲಿ ಬಸ್ ಖರೀದಿ ಮಾಡಿದ ಇಸ್ರೇಲ್ ಟ್ರಾವೆಲ್ಸ್ ಎಂದು ಹೆಸರಿಟ್ಟಿದ್ದಾರೆ. ಆದರೆ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಉಂಟಾಗಿದ್ದರಿಂದ, ಇಸ್ರೇಲ್ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದ್ದವು.
ನಂತರ ಇದು ಪೊಲೀಸರ ಗಮನಕ್ಕೂ ಬಂದಿತ್ತು. ಪೊಲೀಸರು ಇದರಿಂದ ಮುಂದೆ ಯಾವುದೇ ಅನಾಹುತ ಸಂಭವಿಸುವುದು ಬೇಡವೆಂದು ಬಸ್‌ನ ಮಾಲಕರು ಹೆಸರು ಬದಲಾಯಿಸಲು ಸೂಚನೆ ನೀಡಿದ್ದರು. ಇದೀಗ ಲೆಸ್ಟರ್ ಅವರು “ಜೆರುಸಲೇಂ ಟ್ರಾವೆಲ್ಸ್” ಎಂದು ಬಸ್ಸಿಗೆ ನಾಮಕರಣ ಮಾಡಿದ್ದಾರೆ.
ಇಸ್ರೇಲ್‌ನಲ್ಲಿ ಕೆಲಸ ಮಾಡಿದ್ದರಿಂದ ಆಗ ಆ ದೇಶದ ವ್ಯವಸ್ಥೆಯನ್ನು ನೋಡಿ ಅಭಿಮಾನದಿಂದ ಬಸ್ಸಿಗೆ ಇಸ್ರೇಲ್ ಹೆಸರಿಟ್ಟಿದ್ದು, ಆಕ್ಷೇಪ ವ್ಯಕ್ತವಾದ ಕಾರಣ ಬೇಸರವಾಗಿದ್ದು, ಹೆಸರು ಬದಲಾವಣೆ ಮಾಡಿದ್ದೇನೆ. ಜೆರುಸಲೇಂ ಪವಿತ್ರ ಭೂಮಿ. ಅದು ಇಸ್ರೇಲ್‌ನಲ್ಲಿದೆ ಎಂದು ಲೆಸ್ಟರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.