Rajaseat Scam: ಗ್ರೇಟರ್ ರಾಜಾಸೀಟ್ ಯೋಜನೆಯಲ್ಲಿ ಬಹುಕೋಟಿ ಹಗರಣ: ತನಿಖೆ ಆರಂಭಿಸಿದ ಲೋಕಾಯುಕ್ತ: ಏನಿದು ಕರ್ಮಕಾಂಡ?
Rajaseat Scam: ಮಡಿಕೇರಿ(Madikeri) ನಗರದ ರಾಜಾ ಸೀಟ್(Raja Seat) ಪಕ್ಕದಲ್ಲಿ ನಿರ್ಮಿಸಲು ಉದ್ದೇಶಿಸಲಾದ ಗ್ರೇಟರ್ ರಾಜಾಸೀಟ್(Greater Rajaseat) ಕಾಮಗಾರಿಯಲ್ಲಿ ಬಹುಕೋಟಿ ಹಗರಣ(Scam) ನಡೆದಿದೆ ಎಂದು ಕಾಂಗ್ರೆಸ್ ಮುಖಂಡ(Congress) ತೆನ್ನಿರ ಮೈನಾ ಲೋಕಾತಯಕ್ತಕ್ಕೆ ದೂರು ಸಲ್ಲಿಸಿದ್ದರು. ಈ ದೂರನ್ನು ಮಾನ್ಯಗೊಳಿಸಿದ ಕರ್ನಾಟಕ ಲೋಕಾಯುಕ್ತ(Lokayukta) ತನಿಖೆ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ಸುಮಾರು 4.55 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಗ್ರೇಟರ್ ರಾಜಾಸೀಟ್ ನ್ನು ಅಂದಿನ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರು 18-3-2023 ರಂದು ಲೋಕಾರ್ಪಣೆ ಮಾಡಿದ್ದರು.
ಕಾಮಗಾರಿ ನಿರ್ವಹಣೆ ಮಾಡಿದ ಮಡಿಕೇರಿ ಪಿ.ಡಬ್ಲ್ಯೂ.ಡಿ ಇಲಾಖೆ ಕಾಮಗಾರಿ ಅಪೂರ್ಣವಾಗಿರುವ ಸಂಧರ್ಭದಲ್ಲಿ ತೋಟಗಾರಿಕೆ ಇಲಾಖೆಗೆ ಹಸ್ತಾಂತರ ಮಾಡದೇ ಲೋಕಾರ್ಪಣೆ ಮಾಡಿದ್ದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನಲೆಯಲ್ಲಿ ತೆನ್ನಿರ ಮೈನಾ ರವರು ದಿನಾಂಕ 20-3-2023 ರಂದು ಈ ಕಾಮಗಾರಿಯಲ್ಲಿ ಬಹುಕೋಟಿ ಅಕ್ರಮ ಹಾಗೂ ಕಳಪೆ ಕಾಮಗಾರಿ ನಡೆದಿದೆ ಎಂದು ಸವಿಸ್ತಾರವಾಗಿ ದಾಖಲೆಗಳೊಂದಿಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಜೊತೆಗೆ ಸದರಿ ಕಾಮಗಾರಿಗೆ ಸಂಭಂದಿಸಿದಂತೆ ಮೂಲ ಎಂ.ಬಿ. ಪುಸ್ತಕವನ್ನು ನಾಶಪಡಿಸಿ ನಕಲಿ ಎಂ.ಬಿ.ಪುಸ್ತಕ ರಚಿಸಿ ಒಂದು ಕೋಟಿ 58 ಲಕ್ಷದ 43 ಸಾವಿರದ 136 ರೂಗಳನ್ನು ಕಾನೂನು ಬಾಹಿರವಾಗಿ ಪಾವತಿ ಮಾಡಿರುವುದನ್ನು ಉಲ್ಲೇಖಿಸಿ ಮೂಲ ಎಂ.ಬಿ.ಪುಸ್ತಕ ಸಂಖ್ಯೆ 12086 ರ ಧೃಡೀಕೃತ ದಾಖಲೆಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಿದ್ದರು.
ಈ ವಿವರಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಿದ ಲೋಕಾಯುಕ್ತ ನ್ಯಾಯಾಲಯ ಲೋಕಾಯುಕ್ತ ತಾಂತ್ರಿಕ ವಿಭಾಗದ ಅಧಿಕಾರಿ ತೇಜಶ್ರೀ ಬಿ.ಮುದ್ದೋಡಿ ಯವರನ್ನು ತನಿಖಾಧಿಕಾರಿಯಾಗಿ ನೇಮಿಸಿದ್ದು ದಿನಾಂಕ 14-10-2024 ರಂದು ಮತ್ತು 15-10-2024 ರಂದು ದೂರುದಾರರು ಹಾಗೂ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ತನಿಖೆ ನಡೆಸಲಿದ್ದಾರೆ.
ಈ ಕಾಮಗಾರಿಯಲ್ಲಿ ನಿರ್ವಹಣೆ ಹೊತ್ತಿದ್ದ ಕಿರಿಯ ಇಂಜಿನಿಯರ್ ಕೆ.ಎಲ್.ದೇವರಾಜ್ ರನ್ನು ಅಮಾನತ್ತು ಮಾಡಲಾಗಿತ್ತು. ಸದರಿ ಪ್ರಕರಣದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಅಕ್ರಮವೆಸಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದ್ದು ಶಿಕ್ಷೆಗೆ ಒಳಗಾಗಲಿದ್ದಾರೆ ಎಂದು ದೂರುದಾರ ತೆನ್ನಿರ ಮೈನಾ ತಿಳಿಸಿದ್ದಾರೆ.
ಈ ಹಿಂದೆ ಹಗರಣದ ಬಗ್ಗೆ ಕೆಲವರು ಫೋಟೋಗಳನ್ನು ತೆಗೆದು ಇವರುಗಳನ್ನು ಪ್ರಶ್ನಿಸಲು ಹೋದವರಿಗೆ ಅವರ ತೋಟ ಮತ್ತು ಮನೆಯ ಅಂಗಳವನ್ನು ಹೂ ಗಿಡ ಮತ್ತಿತರ ಗಿಡಗಳಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಿಂಗರಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದರು ಎಂದು ಹೇಳಲಾಗಿದೆ.