Solar Eclipse 2024: ಅಕ್ಟೋಬರ್ 2 ರಂದು ಆಗಸದಲ್ಲಿ ಕಾಣಲಿದೆ ಬೆಂಕಿಯ ಉಂಗುರ! ಏನಿದರ ವಿಶೇಷತೆ?
Solar Eclipse 2024: ಅಕ್ಟೋಬರ್ 2ರಂದು ಅಪರೂಪದ ಖಗೋಳ ಘಟನೆಯೊಂದು ಸಂಭವಿಸಲಿದೆ. ಹೌದು, ನಾಳೆ ಅತ್ಯಂತ ಅಪರೂಪದ ಸೂರ್ಯಗ್ರಹಣ ಸಂಭವಿಸಲಿದ್ದು, ಇದು 2024ನೇ (Solar Eclipse 2024) ಸಾಲಿನ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವಾಗಿದೆ.
ವಿಶೇಷವಾಗಿ ನಾಳೆ ಆಗಸದಲ್ಲಿ ಸೂರ್ಯ ಬೆಂಕಿಯ ಉಂಗುರವನ್ನು (Ring of Fire) ಸೃಷ್ಟಿಸಲಿದ್ದಾನೆ. ವಾಸ್ತವವಾಗಿ, ಸೂರ್ಯಗ್ರಹಣಕ್ಕೆ ವೈಜ್ಞಾನಿಕ ಕಾರಣವಿದೆ. ಭೂಮಿ, ಚಂದ್ರ ಮತ್ತು ಸೂರ್ಯ ನೇರ ರೇಖೆಯಲ್ಲಿ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ.
ರಿಂಗ್ ಆಫ್ ಫೈರ್ ಎಂದರೆ, ಉಂಗುರದ ರೀತಿ ಕಾಣುವ ಸಮಯದಲ್ಲಿ ಚಂದ್ರನು ಭೂಮಿಯಿಂದ ದೂರ ಸರಿದಂತೆ ಅದರ ಆಕಾರವು ಬದಲಾಗುತ್ತದೆ. ಆಗ ಅದು ಚಿಕ್ಕದಾಗಿ ಕಾಣುತ್ತದೆ. ಸೂರ್ಯಗ್ರಹಣದ ಸಮಯದಲ್ಲಿ ಅದು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುವುದಿಲ್ಲ. ಈ ಕಾರಣಕ್ಕಾಗಿ ಸೂರ್ಯನ ಅಂಚುಗಳು ಗೋಚರಿಸುತ್ತವೆ. ಆದ್ದರಿಂದ ಇದನ್ನು ಭೂಮಿಯಿಂದ ನೋಡಿದಾಗ, ಆಕಾಶದಲ್ಲಿ ಬೆಂಕಿಯ ಉಂಗುರವಿದೆ ಎಂದು ತೋರುತ್ತದೆ. ಅಲ್ಲದೆ ಈ ಸೂರ್ಯಗ್ರಹಣ ಆರು ಗಂಟೆಗಳಿಗೂ ಹೆಚ್ಚು ಕಾಲ ಇರುತ್ತದೆ ಎನ್ನಲಾಗಿದೆ.
ಇದು ದಕ್ಷಿಣ ಅಮೆರಿಕಾದಲ್ಲಿ ಸಂಭವಿಸುವ ಕಾರಣ ಇದನ್ನು ಭಾರತದಲ್ಲಿ ವೀಕ್ಷಿಸಲು ಸಾಧ್ಯವಿಲ್ಲ. ಇನ್ನು ಭಾರತೀಯ ಕಾಲಮಾನದ ಪ್ರಕಾರ, ಈ ಸೂರ್ಯಗ್ರಹಣವು ಅಕ್ಟೋಬರ್ 2 ರಂದು ರಾತ್ರಿ 9:13 ರಿಂದ ಪ್ರಾರಂಭವಾಗಲಿದೆ ಮತ್ತು ಅಕ್ಟೋಬರ್ 3 ರಂದು ಮಧ್ಯಾಹ್ನ 3:17 ಕ್ಕೆ ಗೋಚರಿಸುತ್ತದೆ. ವಾರ್ಷಿಕ ಸೂರ್ಯಗ್ರಹಣವು ಚಿಲಿ, ಅರ್ಜೆಂಟೀನಾ ಮತ್ತು ಪೆಸಿಫಿಕ್ ಸಾಗರದಲ್ಲಿ ಗೋಚರಿಸುತ್ತದೆ. ಈ ಭಾಗಶಃ ಸೂರ್ಯಗ್ರಹಣವು ದಕ್ಷಿಣ ಅಮೆರಿಕಾದ ಇತರ ದೇಶಗಳಲ್ಲಿ ಗೋಚರಿಸುತ್ತದೆ ಎಂದು ತಿಳಿದು ಬಂದಿದೆ.
ಮುಖ್ಯವಾಗಿ ಸೂರ್ಯಗ್ರಹಣ ವೀಕ್ಷಿಸುವಾಗ ಮುನ್ನೆಚ್ಚರಿಕೆ ಅಗತ್ಯವಾಗಿ ಬೇಕು. ಅಂತೆಯೇ ಸೂರ್ಯಗ್ರಹಣ ನೋಡಲು ವಿಶೇಷ ಕನ್ನಡಕ ಲಭ್ಯವಿದೆ. ಅದರ ಮೂಲಕವೇ ನೋಡುವುದು ಸೂಕ್ತ. ಇನ್ನು ಇದರ ಬಗ್ಗೆ ಸೋಷಿಯಲ್ ಮೀಡಿಯಾಗಳ ಮೂಲಕ ಭಾರತೀಯರೂ ಈ ಅದ್ಭುತ ಕ್ಷಣವನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ.