Mandya: ಬಡ್ಡಿ ವಸೂಲುಗಾರರ ನಿದ್ದೆಗೆಡಿಸಿದ ಜಿಲ್ಲಾಧಿಕಾರಿ – ಜಿಲ್ಲೆಯಲ್ಲಿ ದೂರು ಕೇಂದ್ರ ಸ್ಥಾಪನೆಗೆ ಆದೇಶ, ಮಂಡ್ಯ ಡಿಸಿ ನಡೆಗೆ ಭಾರೀ ಮೆಚ್ಚುಗೆ!!

Mandya: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಗಳ ಹಾವಳಿ ಹೆಚ್ಚಾಗಿ ಜನರಿಗೆ ತೊಂದರೆಕೊಡುತ್ತಿರುವ ಕಾರಣ, ಇವುಗಳ ಕುರಿತು ಸಾಕಷ್ಟು ದೂರುಗಳು ಬರುತ್ತಿರುವ ಕಾರಣ, ಇವರ ಕಾಟ ತಪ್ಪಿಸಲು ಮಂಡ್ಯ ಜಿಲ್ಲಾಡಳಿತವು ತನ್ನ ಜಿಲ್ಲೆಯಲ್ಲಿ ದೂರು ಕೇಂದ್ರವನ್ನು ಸ್ಥಾಪನೆ ಮಾಡಲು ಮುಂದಾಗಿದೆ.

ಇತ್ತೀಚೆಗೆ ಮಂಡ್ಯ(Mandya) ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಮೈಕ್ರೋ ಫೈನಾನ್ಸ್ ಹಾವಳಿಯ ಜಾಲಕ್ಕೆ ಸಿಲುಕಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದರು ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಇದೀಗ ಜಿಲ್ಲೆಯಲ್ಲಿ. ಮೈಕ್ರೋ ಫೈನಾನ್ಸ್ ಗಳನ್ನು ಪರಿಶೀಲಿಸಲು ಜಿಲ್ಲೆಯಲ್ಲಿ ದೂರು ಕೇಂದ್ರವನ್ನು ಸ್ಥಾಪಿಸಲು ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಒಬ್ಬ ನೋಡಲ್ ಸಿಬ್ಬಂದಿಯನ್ನು ನೇಮಕ ಮಾಡಲು ಮುಂದಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಕುಮಾರ್(DC Kumar) ಅವರು ಸೂಚಿಸಿದ್ದಾರೆ.

ಮೈಕ್ರೋ ಫೈನಾನ್ಸ್ ಗಳು ತಾವು ಸಾಲ ನೀಡಿದ ಜನರೊಂದಿಗೆ ಸೌಜನ್ಯದಿಂದ ವರ್ತಿಸಿ ಸಾಲವನ್ನು ಹಿಂಪಡೆಯಬೇಕು. ಈ ಕುರಿತು ತರಬೇತಿ ನೀಡಿ ವರದಿಯನ್ನು ನೀಡಬೇಕೆಂದು ಕೂಡ ಜಿಲ್ಲಾಧಿಕಾರಿಯವರು ಸೂಚಿಸಿದ್ದಾರೆ. ಅಲ್ಲದೆ ಮೈಕ್ರೋ ಫೈನಾನ್ಸ್ ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಗುರುತಿನ ಚೀಟಿಯನ್ನು ನೀಡಬೇಕು, ಅವರು ತಮ್ಮ ಕಚೇರಿಯ ಮುಂದೆ ನಾಮಫಲಕವನ್ನು ಕಡ್ಡಾಯವಾಗಿ ಹಾಕಬೇಕು ಎಂದು ತಿಳಿಸಿದ್ದಾರೆ.

ಇದರೊಂದಿಗೆ ಸಾಲ ವಸೂಲಾತಿಗೆ ಹೋಗುವಂತಹ ಸಂದರ್ಭದಲ್ಲಿ ಸಿಬ್ಬಂದಿಯು ಜನರೊಂದಿಗೆ ಅತ್ಯಂತ ಸೌಜನ್ಯದಿಂದ ನಡೆದುಕೊಳ್ಳಬೇಕು. ಅವಾಚ್ಯ ಶಬ್ದಗಳಿಂದ, ಕಠಿಣ ಮಾತುಗಳಿಂದ ಅವರನ್ನು ನಿಂದಿಸಬಾರದು. ಈ ರೀತಿಯ ಯಾವುದಾದರೂ ಪ್ರಸಂಗಗಳು ಅಥವಾ ಘಟನೆಗಳು ಕಂಡು ಬಂದರೆ ಅವರ ವಿರುದ್ಧ ಸೂಕ್ತವಾದ ಹಾಗೂ ಕಠಿಣವಾದ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇಷ್ಟೇ ಅಲ್ಲದೆ ಸಾಲವನ್ನು ವಸೂಲಿ ಮಾಡಲು ಒಂದು ನಿಗದಿತ ಸಮಯವನ್ನು ಮಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಅವರ ಮನೆಗೆ ತೆರಳಿ ಅಲ್ಲಿ ಯಾರಿದ್ದಾರೆ, ಸಾರ್ವಜನಿಕವಾಗಿ ನಾವು ಹೇಗೆ ವರ್ತಿಸಬೇಕು ಎಂಬುದನ್ನು ಅರಿತು ಅವರೊಂದಿಗೆ ಸಾಲದ ಬಗ್ಗೆ ಚರ್ಚಿಸಬೇಕು. ಮನೆಯಲ್ಲಿ ಯಾರಾದರೂ ಪರಿಚಯಸ್ತರು, ನೆಂಟರು ಇದ್ದರೆ ಅವರ ಮುಂದೆ ಸಾಲದ ವಿಚಾರವನ್ನು ಚರ್ಚಿಸಬಾರದು. ವೈಯಕ್ತಿಕವಾಗಿ ಅವರನ್ನು ಪಕ್ಕಕ್ಕೆ ಕರೆದು ಅವರೊಬ್ಬರಲ್ಲೇ ಈ ವಿಚಾರವನ್ನು ಚರ್ಚಿಸಬೇಕು. ಒಂದು ವೇಳೆ ಸಾಲದ ಕಂತನ್ನು ತೀರಿಸಲು ಆಗದಿದ್ದರೆ ಅವರಿಗೆ ಲಿಖಿತವಾಗಿ ನೋಟಿಸ್ ಅನ್ನು ಜಾರಿ ಮಾಡಬೇಕು. ಅವರ ಮಾನಹಾನಿಯಾಗುವಂತಹ ಯಾವುದೇ ರೀತಿಯ ಕೆಲಸಗಳನ್ನು ಮೈಕ್ರೋಫೈನಾನ್ಸ್ ಅವರು ಮಾಡಬಾರದು ಎಂದಿದ್ದಾರೆ.

ಅಂದಹಾಗೆ ಇತ್ತೀಚೆಗೆ ಮಂಡ್ಯದ ಮಳವಳ್ಳಿಯಲ್ಲಿ ಶ್ರೀ ಧರ್ಮಸ್ಥಳ ಸಂಘದವರ ಕಿರುಕುಳಕ್ಕೆ ಒಳಗಾಗಿ ಮಹಾಲಕ್ಷ್ಮಿ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಮಂಡ್ಯ ಡಿಸಿ ಈ ಮಹತ್ವದ ತೀರ್ಮಾನ ಮಾಡಿದ್ದಾರೆ.

Leave A Reply

Your email address will not be published.