CBI: ಸಿಬಿಐಗೆ ಬಿತ್ತು ಕಡಿವಾಣ, ಕರ್ನಾಟಕ ಪ್ರವೇಶಿಸಲು ಸಿಬಿಐಗೆ ಬೇಕು ರಾಜ್ಯದ ಒಪ್ಪಿಗೆ, ಮುಕ್ತ ತನಿಖೆ ಅನುಮತಿ ಹಿಂಪಡೆದ ರಾಜ್ಯ
Karnataka Withdraws Consent to the CBI: ಬೆಂಗಳೂರು: ಕೇಂದ್ರ ತನಿಕ ದಳ ಸಿಬಿಐ ಇನ್ನೂ ಮುಂದೆ ರಾಜ್ಯದಲ್ಲಿ ನೇರವಾಗಿ ಬಂದು ತನಿಖೆ ನಡೆಸುವಂತಿಲ್ಲ. ಸಿಬಿಐ ತನಿಖೆಗೆ ಇನ್ನೂ ರಾಜ್ಯದ ಅನುಮತಿ ಬೇಕೆ ಬೇಕು. ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ನಿವೇಶನ ಹಗರಣ, ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಮುಂತಾದ ಆರೋಪಗಳನ್ನು ಎದುರಿಸುತ್ತಿರುವ ರಾಜ್ಯ ಸರ್ಕಾರವು ಕೇಂದ್ರ ತನಿಖಾ ಸಂಸ್ಥೆ ಕೈಯಿಂದ ತಪ್ಪಿಸಿಕೊಳ್ಳಲು ದೊಡ್ಡ ನಿರ್ಧಾರ ಕೈಗೊಂಡಿದೆ. ಕರ್ನಾಟಕದ ಭೂ ಪ್ರದೇಶದ ಒಳಗೆ ತನಿಖೆಯನ್ನು ನಡೆಸಲು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ನೀಡಲಾಗಿದ್ದ ಮುಕ್ತ ಅನುಮತಿಯನ್ನು ರಾಜ್ಯ ಸರ್ಕಾರ ಗುರುವಾರ ಮಧ್ಯಾಹ್ನ ವಾಪಸ್ ಪಡೆದುಕೊಂಡಿದ್ದು ಸಿಬಿಐಗೆ ಅಂಕುಶ ಹಾಕಿ ಬಿಟ್ಟಿದೆ ರಾಜ್ಯ ಸರಕಾರ. ಇದರಿಂದ ರಾಜ್ಯದಲ್ಲಿ ಯಾವುದೇ ಪ್ರಕರಣದ ತನಿಖೆ ನಡೆಸಲು ಸಿಬಿಐ, ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯುವುದು ಅನಿವಾರ್ಯವಾಗಿದೆ.
ಈಗಾಗಲೇ ಅನೇಕ ರಾಜ್ಯಗಳು – ಬಿಜೆಪಿ ಆಡಳಿತದಲ್ಲಿ ಇಲ್ಲದ ರಾಜ್ಯಗಳಲ್ಲಿ ಸಿಬಿಐಗೆ ನೀಡಲಾಗಿದ್ದ ಮುಕ್ತ ತನಿಖೆ ಅಧಿಕಾರವನ್ನು ಹಿಂದಕ್ಕೆ ಪಡೆಯಲಾಗಿತ್ತು. ಪಶ್ಚಿಮ ಬಂಗಾಳ ಸೇರಿದಂತೆ ಆ ಸಾಲಿಗೆ ಈಗ ಕರ್ನಾಟಕ ಸೇರಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್, ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ನಿವೇಶನ ಅಕ್ರಮ ಹಗರಣ ಆರೋಪಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸಂಪುಟ ಸಭೆ ಬಳಿಕ ಸಮಜಾಯಿಷಿ ನೀಡಿದ್ದಾರೆ. ಸಿಬಿಐ ನಡೆಸುವ ಪಕ್ಷಪಾತಿ ನೀತಿ ಕ್ರಮಗಳಿಗೆ ತಡೆಯೊಡ್ಡಲು ರಾಜ್ಯ ಸರ್ಕಾರ ಬಯಸಿದೆ ಎಂದು ಹೇಳಿದೆ ಕಾಂಗ್ರೇಸ್ ಸರ್ಕಾರ.
“ನಾವು ರಾಜ್ಯದಲ್ಲಿ ಸಿಬಿಐ ತನಿಖೆಗೆ ಇದ್ದ ಮುಕ್ತ ಸಮ್ಮತಿಯನ್ನು ಹಿಂದಕ್ಕೆ ಪಡೆಯುತ್ತಿದ್ದೇವೆ. ಕೇಂದ್ರ ತನಿಖಾ ಸಂಸ್ಥೆಯ ದುರ್ಬಳಕೆ ಕುರಿತು ನಮ್ಮ ಕಳವಳಗಳನ್ನು ವ್ಯಕ್ತಪಡಿಸುತ್ತಿದ್ದೇವೆ. ಅದು ಪಕ್ಷಪಾತಿಯಾಗಿದೆ, ಈ ಕಾರಣಕ್ಕಾಗಿಯೇ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ. ಕೇಂದ್ರ ತನಿಖಾ ಸಂಸ್ಥೆಯು ನಡೆಸುವ ಭಯ ಹುಟ್ಟಿಸುವ ಪ್ರಯತ್ನಕ್ಕೆ ಕಡಿವಾಣ ಹಾಕುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಇದು ಒಕ್ಕೂಟ ವ್ಯವಸ್ಥೆಯನ್ನು ಬಲಗೊಳಿಸುವ ಪ್ರಯತ್ನ ಕೂಡ ಹೌದು ಎಂದಿದ್ದಾರೆ ಎಚ್‌ಕೆ ಪಾಟೀಲ್ ಹೇಳಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧವಿಲ್ಲ ಅಂದ ರಾಜ್ಯ ಸರ್ಕಾರ
ಕರ್ನಾಟಕ ರಾಜ್ಯದಲ್ಲಿ ಅಪರಾಧ ಪ್ರಕರಣಗಳ ತನಿಖೆಯನ್ನು ವಹಿಸಿಕೊಳ್ಳಲು ಸಿಬಿಐಗೆ ಮುಕ್ತ ಅವಕಾಶ ಈ ಹಿಂದೆ ಕೊಡಲಾಗಿತ್ತು. ಗಂಭೀರ ಪ್ರಕರಣ ಅಥವಾ ಆರೋಪಗಳ ಸಂದರ್ಭದಲ್ಲಿ, ದಿಲ್ಲಿ ವಿಶೇಷ ಪೊಲೀಸ್ ಕಾಯ್ದೆ 1946 ಅಡಿ ಸಿಬಿಐ ಮಧ್ಯಪ್ರವೇಶ ಮಾಡುತ್ತಿತ್ತು. ಆದರೆ ಈಗ ಸಿಬಿಐ ತನಿಖೆಗೆ ಮುಕ್ತ ಅನುಮತಿ ನೀಡಿದ್ದ ಅಧಿಸೂಚನೆಯನ್ನು ವಾಪಸ್ ಪಡೆಯಲು ಸಂಪುಟ ನಿರ್ಧಾರ ಮಾಡಿದೆ.
ಮುಡಾ ಹಗರಣ ಆರೋಪಕ್ಕೂ ಈ ನಿರ್ಧಾರಕ್ಕೂ ಸಂಬಂಧವಿಲ್ಲ. ಸಿಬಿಐ ಸಂಸ್ಥೆ ತಪ್ಪು ದಾರಿ ಹಿಡಿಯುವುದನ್ನು ನಿಯಂತ್ರಿಸುವುದು ನಮ್ಮ ಉದ್ದೇಶ. ನಾವು ಸಿಬಿಐ ತನಿಖೆಗೆ ವಹಿಸಿದ ಯಾವ ಪ್ರಕರಣದಲ್ಲಿಯೂ ಆರೋಪಪಟ್ಟಿ ಸಲ್ಲಿಕೆಯಾಗಿಲ್ಲ. ಇದರಿಂದ ಅನೇಕ ಪ್ರಕರಣಗಳು ಇನ್ನೂ ಬಾಕಿ ಇವೆ. ಅಷ್ಟೇ ಅಲ್ಲದೆ, ನಾವು ಕಳುಹಿಸಿದ ಹಲವಾರು ಪ್ರಕರಣಗಳ ತನಿಖೆ ನಡೆಸಲು ಸಿಬಿಐ ನಿರಾಕರಿಸಿದೆ. ಇಂತಹ ಹಲವಾರು ನಿದರ್ಶನಗಳಿವೆ” ಎಂದು ಅವರು ಸಿಬಿಐ ವಿರುದ್ಧ ಎಂದು ಎಚ್‌ಕೆ ಪಾಟೀಲ್ ಕಿಡಿಕಾರಿದ್ದಾರೆ.
ಸಿಬಿಐ ಅನುಮತಿ ವಾಪಸ್ ಪಡೆದ ರಾಜ್ಯಗಳು
ಬಿಜೆಪಿಯ ಆಡಳಿತ ಇರುವ ರಾಜ್ಯಗಳನ್ನು ಹೊರತುಪಡಿಸಿ ಉಳಿದ ಬಹುತೇಕ ರಾಜ್ಯಗಳಲ್ಲಿ ಸಿಬಿಐಗೆ ಇರುವ ಮುಕ್ತ ತನಿಖೆಯ ಅನುಮತಿಯನ್ನು ಹಿಂಪಡೆಯಲಾಗಿದೆ. ಕೇರಳ, ತಮಿಳುನಾಡು, ತೆಲಂಗಾಣ, ಪಂಜಾಬ್, ಮೇಘಾಲಯ, ಪಶ್ಚಿಮ ಬಂಗಾಳ, ಜಾರ್ಖಂಡ್, ಮತ್ತು ಮಿಜೋರಾಂ ಸಾಲಿಗೆ ಈಗ ಕರ್ನಾಟಕ ಸೇರಿಕೊಂಡಿದೆ. ಹಿಂದೆ ರಾಜಸ್ಥಾನ ಮತ್ತು ಛತ್ತೀಸ್‌ಗಡ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಸಿಬಿಐ ತನಿಖೆಗೆ ಅನುಮತಿ ಹಿಂಪಡೆಯಲಾಗಿತ್ತು. ಆದರೆ ಮತ್ತೆ ಚುನಾವಣೆ ನಡೆದು ಅಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮತ್ತೆ ಅನುಮತಿ ನೀಡಲಾಗಿದೆ.