TTD: ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪತ್ತೆ ವಿಚಾರ- ಟಿಟಿಡಿ ಯಿಂದ ಸ್ಪಷ್ಟೀಕರಣ!!

TTD: ದೇಶದೆಲ್ಲೆಡೆ ಈಗ ತಿರುಪತಿ ಲಡ್ಡು ವಿವಾದದ್ದೇ ಚರ್ಚೆಗಳು. ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು, ಮೀನಿನೆಣ್ಣೆ ಸೇರಿದಂತೆ ಇನ್ನಿತರ ಕಲಬೆರಕೆ ಪದಾರ್ಥಗಳನ್ನು ಬಳಸಲಾಗಿದೆ ಎನ್ನುವ ವಿಚಾರದಿಂದ ಎಲ್ಲರೂ ಶಾಕ್‌ ಆಗಿದ್ದಾರೆ. ವಿಶ್ವ ವಿಖ್ಯಾತ ತಿರಪತಿ ತಿಮ್ಮಪ್ಪನ ಲಡ್ಡು(Tirupati Laddu) ಪ್ರಸಾದದ ಈ ವಿವಾದ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಇದರ ಹಿನ್ನೆಲೆಯಲ್ಲಿ ಸಂಪ್ರೋಕ್ಷಣ ಹಾಕಿ ದೇವಾಲಯ, ಆವರಣ, ಪ್ರಸಾದ ತಯಾರಿಕಾ ಘಟಕ ಎಲ್ಲವನ್ನೂ ಸ್ವಚ್ಛ ಮಾಡಲಾಗಿದೆ. ಆದರೆ ಈ ಬೆನ್ನಲ್ಲೇ ತಿಮ್ಮಪ್ಪನ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೇಟ್ ಪತ್ತೆಯಾಗಿ ಮತ್ತೆ ಕೋಲಾಹಲಕ್ಕೆ ಕಾರಣವಾಗಿತ್ತು. ಆದರೀಗ ಈ ಕುರಿತು ಟಿಟಿಡಿ ಸ್ಪಷ್ಟೀಕರಣ ನೀಡಿದೆ.

ಹೌದು, ಖಮ್ಮಂ ಜಿಲ್ಲೆಯ ಗ್ರಾಮಾಂತರ ಮಂಡಲ ವ್ಯಾಪ್ತಿಯ ಗೊಲ್ಲಗುಡೆಂ ಪಂಚಾಯತ್ ಕಾರ್ತಿಕೇಯ ಟೌನ್‌ಶಿಪ್‌ನ ನಿವಾಸಿ ದೊಂತು ಪದ್ಮಾವತಿ ಅವರು ಸೆಪ್ಟೆಂಬರ್ 19 ರಂದು ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳಿ ತಿಮ್ಮಪ್ಪನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಹಿಂತಿರುಗುವಾಗ ತನ್ನ ಸಂಬಂಧಿಕರು ಮತ್ತು ನೆರೆಹೊರೆಯವರೊಂದಿಗೆ ಹಂಚಿಕೊಳ್ಳಲು ಶ್ರೀವಾರಿ ಲಡ್ಡು ಪ್ರಸಾದವನ್ನು ತಂದಿದ್ದರು. ಭಾನುವಾರ (ಸೆಪ್ಟೆಂಬರ್ 22) ಪ್ರಸಾದ ಹಂಚಲು ಲಡ್ಡು ತೆಗೆದು ನೋಡಿದಾಗ ಅದರಲ್ಲಿ ಗುಟ್ಕಾ ಪ್ಯಾಕೆಟ್ ಪತ್ತೆಯಾಗಿತ್ತು. ಈ ವಿಷಯವನ್ನು ತಮ್ಮ ಕುಟುಂಬಸ್ಥರಿಗೆ ತಿಳಿಸಿ, ಆ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆದರೀಗ ಟಿಟಿಡಿ ಇದನ್ನು ಅಲ್ಲಗಳೆದಿದೆ.

ಟಿಟಿಡಿ ಕೊಟ್ಟ ಸ್ಪಷ್ಟೀಕರಣ ಏನು?
ಶ್ರೀವಾರಿ ಲಡ್ಡು ಪ್ರಸಾದದಲ್ಲಿರುವ ಗುಟ್ಕಾ (ತಂಬಾಕು) ಪೌಚ್‌ ಪತ್ತೆ ಆದ ವಿಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ. ಶ್ರೀವಾರಿ ಲಡ್ಡು ಪ್ರಸಾದದಲ್ಲಿ ಗುಟ್ಕಾ ಪ್ಯಾಕೆಟ್ ಪತ್ತೆಯಾಗಿದೆ ಎಂದು ಕೆಲ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿರುವುದು ಸರಿಯಲ್ಲ. ತಿರುಮಲದಲ್ಲಿ ಶ್ರೀ ವೈಷ್ಣವ ಬ್ರಾಹ್ಮಣರು ಬಹಳ ಭಕ್ತಿ, ಶಿಸ್ತು ಮತ್ತು ಸಾಂಪ್ರದಾಯಿಕ ಆಚರಣೆಗಳ ಅನುಸರಣೆಯೊಂದಿಗೆ ಲಡ್ಡುಗಳನ್ನು ಪ್ರತಿದಿನ ದೊಡ್ಡ ಪ್ರಮಾಣದಲ್ಲಿ ತಯಾರಿಸುತ್ತಾರೆ.

ಈ ಲಡ್ಡುಗಳ ತಯಾರಿಕೆಯನ್ನು 360-ಡಿಗ್ರಿ CCTV ಕಣ್ಗಾವಲು ಮೂಲಕ ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.
ಅತ್ಯಂತ ಸಂಘಟಿತ ಮತ್ತು ಪವಿತ್ರವಾದ ಈ ತಯಾರಿ ಪ್ರಕ್ರಿಯೆಯಲ್ಲಿ ತಂಬಾಕು ಇರುವಿಕೆಯ ಬಗ್ಗೆ ಇಂತಹ ವದಂತಿಗಳು ಹರಡುತ್ತಿರುವುದು ದುರದೃಷ್ಟಕರ. ಆದ್ದರಿಂದ ದೇಗುಲಕ್ಕೆ ಬರುವ ಅಪಾರ ಭಕ್ತರು ಟಿಟಿಡಿ ಸ್ಪಷ್ಟನೆ ಗಮನಿಸಬೇಕು” ಎಂದು ಮನವಿ ಮಾಡಲಾಗಿದೆ.

Leave A Reply

Your email address will not be published.