Karnataka: ಕರ್ನಾಟಕ ವಿವಿ ಘಟಿಕೋತ್ಸವ: ಆಶಾ ಕಾರ್ಯಕರ್ತೆ- ಸೆಕ್ಯೂರಿಟಿ ಗಾರ್ಡ್ ಮಗಳ ಅಭೂತಪೂರ್ವ ಸಾಧನೆ; ಜಯಶ್ರೀ ತಳವಾರ ಕೊರಳ ತುಂಬಾ 9 ಚಿನ್ನದ ಪದಕ !
Karnataka: ಹೆತ್ತವರ ಬಹುಕಾಲದ ಆಸೆಯನ್ನು ಮಗಳು ಪೂರೈಸಿದ್ದಾಳೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿನಿ ಜಯಶ್ರೀ ತಳವಾರ ಕೊರಳು ಜಗ್ಗುವಷ್ಟು ಪದಕವನ್ನು ಬಾಚಿಕೊಂಡಿದ್ದಾಳೆ. ಒಟ್ಟು 9 ಚಿನ್ನದ ಪದಕ ಪಡೆದು ಬೀಗಿರುವ ಹುಡುಗಿ ನಿನ್ನೆ ನಡೆದ ವಿವಿಯ ವಾರ್ಷಿಕ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂಸಿ ಸುಧಾಕರರಿಂದ ಪದಕ ಪಡೆದುಕೊಂಡಿದ್ದಾರೆ.
ಆಶಾ ಕಾರ್ಯಕರ್ತೆ ಅಮ್ಮ ಮತ್ತು ಗ್ರಾಮ ಪಂಚಾಯಿತಿ ಸಿಪಾಯಿಯ ಪುತ್ರಿಯಾದ ಜಯಶ್ರೀ ತಳವಾರ ಎಂಬವರು ಕರ್ನಾಟಕ ವಿಶ್ವವಿದ್ಯಾಲಯದ 74ನೇ ವಾರ್ಷಿಕ ಘಟಿಕೋತ್ಸವದಲ್ಲಿ 9 ಚಿನ್ನದ ಪದಕಗಳನ್ನು ತಮ್ಮ ಕೊರಳಿಗೇರಿಸಿಕೊಂಡಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ 2022ರಲ್ಲಿ ಪ್ರವೇಶ ಪಡೆದ ಜಯಶ್ರೀ, ಉತ್ತಮ ಅಂಕಗಳನ್ನು ಪಡೆದು 23-24ನೇ ಬ್ಯಾಚ್‌ನ ಅತ್ಯುತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ. ಸೆಪ್ಟೆಂಬರ್ 24ರಂದು ಧಾರವಾಡದ ಗಾಂಧೀ ಭವನದಲ್ಲಿ ನಡೆದ ವಾರ್ಷಿಕ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂಸಿ ಸುಧಾಕರ್ ಜಯಶ್ರೀ ತಳವಾರರಿಗೆ ಪದಕ ಪ್ರದಾನ ಮಾಡಿದ್ದಾರೆ.
ಚಿನ್ನದಂತ ಚಿನ್ನದ ಹುಡುಗಿ
ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಕೊಡಗಲಿ ಗ್ರಾಮದ ಜಯಶ್ರೀ ತಳವಾರ, ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬದವರು. ತಾಯಿ ಮಂಜುಳಾ ಮಹಾಂತೇಶ ತಳವಾರ ಆಶಾ ಕಾರ್ಯಕರ್ತೆಯಾಗಿದ್ದರೆ, ಹುನಗುಂದ ತಾಲೂಕಿನ ಹಿರೇಕೊಡಗಲಿ ಗ್ರಾಮದ ಗ್ರಾಮ ಪಂಚಾಯಿತಿ ಗ್ರೂಪ್ ಡಿ ದರ್ಜೆಯ ಸಿಪಾಯಿಯಾಗಿ ತಂದೆ ಮಹಾಂತೇಶರಿಗೆ ಕೆಲಸ. ಹೆತ್ತವರು ಒತ್ತಾಸೆಯಿಂದ ಛಲತೊಟ್ಟು ಓದಿದ ಜಯಶ್ರೀ ಇದೀಗ ಮನೆಗೆ ಚಿನ್ನದ ಪದಕ ತಂದಿದ್ದಾಳೆ. ಗದಗ ರೋಣ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ, ಧಾರವಾಡದ ಹುರುಕಡ್ಲಿ ಮಹಿಳಾ ಕಾಲೇಜಿನಲ್ಲಿ ಪಿಯುಸಿ ಮತ್ತು ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಓದಿದ್ದಾರೆ.
ಜಯಶ್ರೀ ಅವರ ಸಹೋದರಿ ಜ್ಯೋತಿ ತಳವಾರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಲೈಬ್ರರಿ ಸೈನ್ಸ್ ಓದಿದ್ದು, ತನ್ನ ಸೋದರಿಯ ಓದಿಗೆ ನಿರಂತರ ಸಹಾಯ ಮಾಡಿದ್ದಾರೆ. ಆಶಾ ಕಾರ್ಯಕರ್ತೆ- ಸೆಕ್ಯೂರಿಟಿ ಗಾರ್ಡ್ ಮಗಳಾಗಿ ಜಯಶ್ರೀ ತಳವಾರ ವಿಶ್ವವಿದ್ಯಾಲಯದ ಮಟ್ಟದಲ್ಲಿ ಮಾಡಿದ ಸಾಧನೆಯು ಹೆತ್ತವರಿಗೆ ಹೆಮ್ಮೆ ತಂದಿದೆ.
ಧಾರವಾಡ ಪತ್ರಿಕೋದ್ಯಮ ವಿಭಾಗದ ಹಿಂದಿನ ಮುಖ್ಯಸ್ಥರಾಗಿದ್ದ ಪ್ರೊ.ಜೆಎಂ ಚಂದುನವರ, ವಿಭಾಗದ ಈಗಿನ ಮುಖ್ಯಸ್ಥರಾದ ಡಾ.ಸಂಜಯ್ ಮಾಲಗತ್ತಿ, ಉಪನ್ಯಾಸಕರಾದ ಮಂಜುನಾಥ ಅಡಿಗಲ್, ಡಾ.ನಾಗರಾಜ, ಡಾ.ವಿಜಯಲಕ್ಷ್ಮಿ ಅವರು ಹಾಗೂ ಇನ್ನಿತರರು ತೋರಿದ ಮಾರ್ಗದರ್ಶನದಿಂದಾಗಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ನನ್ನ ಸಾಧನೆಗೆ ಸದಾಕಾಲ ಒತ್ತಾಸೆಯಾದ ಎಲ್ಲ ಸ್ನೇಹಿತರ ಪ್ರೀತಿಗೆ ಅಭಿನಂದನೆ.
ಪದಕ ಗೆದ್ದ ಇತರ ವಿದ್ಯಾರ್ಥಿನಿಯರು
*ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿ ಜಯಶ್ರೀ ತಳವಾರ ಅವರಿಗೆ 9 ಪದಕಗಳು ಮತ್ತು ಎರಡು ನಗದು ಪ್ರಶಸ್ತಿ
*ಮಮತಾ ಜಗದೀಶ ನಾಯ್ಡು 1 ಪದಕ
*ಕನ್ನಡ ಅಧ್ಯಯನ ವಿಭಾಗದ ವಿಧ್ಯಾರ್ಥಿನಿ ಸಂಗೀತಾ ಲಕ್ಕಪ್ಪಣ್ಣನವರ 9 ಪದಕ ಮತ್ತು ಎರಡು ನಗದು ಪ್ರಶಸ್ತಿ ಪಡೆದಿದ್ದಾರೆ.
*ಜೀವ ರಸಾಯನ ಶಾಸ್ತ್ರ ವಿಭಾಗದ ವಿಧ್ಯಾರ್ಥಿನಿ ಹರ್ಷಿತಾ ಡಿ 8 ಪದಕ
*ಪ್ರಾಣಿಶಾಸ್ತ್ರ ನೋಡ್ ವಿಭಾಗದ ವಿದ್ಯಾರ್ಥಿನಿ ವಿಸ್ಮಯ ಸಿ ಅಂಗಡಿ ಅವರಿಗೆ 8 ಪದಕಗಳು, 2 ನಗದು ಪ್ರಶಸ್ತಿ
*ಲೈಬ್ರೆರಿ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ರಚನಾ ಶಿವಳ್ಳಿ 8 ಪದಕಗಳು,1 ನಗದು ಪ್ರಶಸ್ತಿ