Meter interest scam: ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಹೆಸರಲ್ಲಿ ಎಗ್ಗಿಲ್ಲದೆ ಮೀಟರ್ ಬಡ್ಡಿ ದಂಧೆ: ಗಿರೀಶ್ ಮಟ್ಟಣ್ಣನವರ್ ಆರೋಪ

Meter interest scam: ಶ್ರೀ ಧರ್ಮಸ್ಥಳ(Dharmastala) ಗ್ರಾಮೀಣಾಭಿವೃದ್ಧಿ(Rural development) ಹೆಸರಿನಲ್ಲಿ ನಡೆಯುತ್ತಿರುವ ಮೀಟರ್ ಬಡ್ಡಿ ದಂಧೆ ರಾಜ್ಯದ ದುಡಿಯುವ ಶ್ರಮಿಕ ವರ್ಗವನ್ನು ಸಾಲದ(Loan) ಸುಳಿಯ ಮೃತ್ಯುಕೂಪದಲ್ಲಿ ಸಿಲುಕಿಸಿದೆ ಎಂದು ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್(Girish Mattannanavar) ಆರೋಪಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಎಂಬ ಸಂಸ್ಥೆ ಅಭಿವೃದ್ಧಿ ಹೆಸರಲ್ಲಿ ನಡೆಸುತ್ತಿರುವ ಕಾನೂನು ಬಾಹಿರ ಹಣದ ಲೇವಾದೇವಿ ಚಟುವಟಿಕೆಗಳು ಹಲವು ಅನುಮಾನಗಳನ್ನು ಹುಟ್ಟು ಹಾಕಿವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಮಂಡ್ಯದ ಮಳವಳ್ಳಿಯಲ್ಲಿ ಶ್ರೀ ಧರ್ಮಸ್ಥಳ ಸಂಘದವರ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಮಹಾಲಕ್ಷ್ಮಿ ಎಂಬವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು, ಅಲ್ಲದೆ, ಆತ್ಮಹತ್ಯೆ ಮತ್ತು ವಾರದ ಬಡ್ಡಿ ಕಿರುಕುಳದ ಹೊಣೆಯನ್ನು ವೀರೇಂದ್ರ ಹೆಗ್ಗಡೆ ಅವರೇ ವಹಿಸಿಕೊಂಡು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಹೆಗ್ಗಡೆ ಕುಟುಂಬದ ಅಕ್ರಮಗಳು, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಅಕ್ರಮ ಬಡ್ಡಿ ದಂಧೆ ವಿರುದ್ದ ಮಹೇಶ ಶೆಟ್ಟಿ ತಿಮರೋಡಿ ಮತ್ತು ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಸ್ಥಳೀಯ ಸಂಘಗಳು ಜನ ಜಾಗೃತಿ ಮಾಡುತ್ತಾ ಬಂದಿವೆ. ಆದರೆ ಅಧಿಕಾರಿಗಳು, ರಾಜಕೀಯ ವ್ಯವಸ್ಥೆಗಳು ಕುರುಡಾಗಿರುವುದರಿಂದ ಇಡೀ ರಾಜ್ಯ ಧರ್ಮೋದ್ಯಮಿಗಳ ಕಪಿಮುಷ್ಟಿಯಲ್ಲಿ ನಲುಗುತ್ತಿದೆ ಎಂದು ವಿಷಾದಿಸಿದರು.

ರಾಜ್ಯದಲ್ಲಿ ಎಸ್‌ಕೆಡಿಆರ್‌ಡಿಪಿ ನಡೆಸುತ್ತಿದೆ ಎಂದು ಹೇಳಲಾಗುವ ಸ್ವಸಹಾಯ ಸಂಘದ ಸದಸ್ಯರಿಗೆ ಇದುವರೆಗೂ ತಮ್ಮ ಸಂಘದ ನೋಂದಣಿ ಪ್ರತಿ ನೀಡಿಲ್ಲವೇಕೆ? ಸಂಘದ ನೀತಿ ನಿಯಮಗಳನ್ನು ಅರಿತುಕೊಳ್ಳುವುದು ಸದಸ್ಯರ ಹಕ್ಕಲ್ಲವೇ? ಎಂದು ಪ್ರಶ್ನಿಸಿದರು. ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಮಹೇಶ್ ತಿಮರೋಡಿ, ಹೋರಾಟಗಾರರಾದ ಪ್ರಸನ್ನ ರವಿ, ಬಂಡೂರು ಸಿದ್ದರಾಜು, ಮಲ್ಲು, ಪಿ.ಜಯಂತ್, ಮಹೇಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave A Reply

Your email address will not be published.