Bangalore: ಗಣೇಶೋತ್ಸವದಲ್ಲಿ ʼಡಿಜೆʼ ಗೆ ನಿರಾಕರಿಸಿದ ಪೊಲೀಸರು; ಮುತಾಲಿಕ್‌ ಆಕ್ರೋಶ

Bangalore: ಗಣೇಶೋತ್ಸವದಲ್ಲಿ ಡಿಜೆಗೆ ಅವಕಾಶ ನೀಡದಿರುವುದನ್ನು ವಿರೋಧ ಮಾಡಿ ಹಿಂದೂಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಪೊಲೀಸರೊಂದಿಗೆ ವಾಗ್ವಾದ ನಡೆದಿರುವ ಘಟನೆಯೊಂದು ವಿಜಯನಗರ ಮತ್ತು ಚಾಮರಾಜಪೇಟೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ವಿಜಯನಗರದ ಹಂಪಿ ನಗರದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ವಿಸರ್ಜನೆ ಸಮಯದಲ್ಲಿ ಪೊಲೀಸರು ಡಿಜೆಗೆ ಅನುಮತಿ ನಿರಾಕರಣೆ ಮಾಡಿದ್ದು, ಇದರಿಂದ ಹಿಂದೂಪರ ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ನಂತರ ವಿಷಯ ತಿಳಿದು ಸ್ಥಳಕ್ಕೆ ಬಂದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಅವರು ಡಿಜೆಗೆ ಅನುಮತಿ ನೀಡಬೇಕು ಎಂದು ಪಟ್ಟು ಹಿಡಿದಿದ್ದು, ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಮುತಾಲಿಕ್‌ ಮಧ್ಯೆ ವಾಗ್ವಾದ ಉಂಟಾಗಿದೆ.

ಅನಾರೋಗ್ಯದವರು, ಮಹಿಳೆಯರು, ಮಕ್ಕಳು, ವೃದ್ಧರು ಡಿಜೆ ಶಬ್ದದಿಂದ ತೊಂದರೆಗೊಳಗಾಗುತ್ತಾರೆ ಇದರಿಂದ ಅನುಮತಿ ನೀಡುವುದಿಲ್ಲ ಎಂದು ಪೊಲೀಸರು ಹೇಳಿದ್ದು, ಇದರಿಂದ ಸಿಟ್ಟುಗೊಂಡ ಮುತಾಲಿಕ್‌, ಡಿಜೆ ಶಬ್ದದಿಂದ ತೊಂದರೆ ಉಂಟಾಗುತ್ತದೆ ಎಂದು ಯಾರಾದರೂ ನಿಮಗೆ ದೂರು ನೀಡಿದ್ದಾರಾ? ಬೆಳಗ್ಗೆ ಅಜಾನ್‌ ಕೂಗಿದರೂ ನೀವು ಕ್ರಮ ಕೈಗೊಳ್ಳುವುದಿಲ್ಲ. ಈ ಕುರಿತು ಸುಪ್ರೀಂಕೋರ್ಟ್‌ ನೀಡಿರುವ ಆದೇಶವನ್ನು ಪಾಲನೆ ಮಾಡುವುದಿಲ್ಲ. ಆದರೆ ಡಿಜೆಗೆ ಅಡ್ಡಿ ಪಡಿಸುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು ಮುತಾಲಿಕ್.‌

ಪೊಲೀಸರು ಡಿಜೆಗೆ ಅವಕಾಶ ನೀಡದೇ ಇದ್ದುದರಿಂದ ಬಳಿಕ ಡೋಲು ಬಳಸಿ ಗಣೇಶನ ವಿಸರ್ಜನೆ ನಡೆಸಲಾಯಿತು.

ಇನ್ನೊಂದು ಕಡೆ ಚಾಮರಾಜಪೇಟೆಯ ಗಣೇಶೋತ್ಸವ ಸಮಿತಿ ಕಾರ್ಯಕ್ರಮದಲ್ಲಿ ಡಿಜೆಗೆ ಅನುಮತಿ ನೀಡದಿರುವುದನ್ನು ಖಂಡಿಸಿ ಈದ್ಗಾ ಮೈದಾನದ ಬಳಿ ಹಿಂದೂಪರ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ಮಾಡಿದರು. ಡಿಜೆಗೆ ಪೊಲೀಸರು ಅನುಮತಿ ನೀಡುವವರೆಗೆ ಗಣೇಶ ವಿಸರ್ಜನೆ ಮಾಡುವುದಿಲ್ಲ ಎಂದು ಕಾರ್ಯಕರ್ತರು ಪಟ್ಟು ಹಿಡಿದಿರುವ ಘಟನೆ ನಡೆದಿದೆ.

Leave A Reply

Your email address will not be published.