D Notification: ಎಚ್‌ಡಿಕೆ, ಬಿಎಸ್‌ವೈ ವಿರುದ್ಧ ಅಕ್ರಮ ಡಿನೋಟಿಫಿಕೇಶನ್‌ ದಾಖಲೆ ಬಿಡುಗಡೆ ಮಾಡಿದ ಸಚಿವರು

D Notification: ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಅಕ್ರಮ ಡಿನೋಟಿಫಿಕೇಶನ್‌ ಪ್ರಕರಣಕ್ಕೆ ಕುರಿತಂತೆ ದಾಖಲೆ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ಕೆಪಿಸಿಸಿ ಕಚೆರಿಯಲ್ಲಿ ಸುದ್ದಿಗೋಷ್ಠಿ ಮಾಡಿದ ಸಚಿವರಾದ ಕೃಷ್ಣಭೈರೇಗೌಡ, ದಿನೇಶ್‌ ಗುಂಡೂರಾವ್‌ ಅವರು ಬಿಎಸ್‌ವೈ ಹಾಗೂ ಎಚ್‌ಡಿಕೆ ವಿರುದ್ಧ ಡಿನೋಟಿಫಿಕೇಶನ್‌ ಕುರಿತಂತೆ ಕೆಲ ದಾಖಲೆ ಬಿಡುಗಡೆ ಮಾಡಿದರು.

ಇವರ ಅಕ್ರಮ ಒಂದೆರಡಲ್ಲ, ಇವರು ಹಲವಾರು ಅಕ್ರಮಗಳಲ್ಲಿ ಮತ್ತೊಂದು ದಾಖಲೆ ಇದು. ಆಸ್ತಿ ಇರುವುದು ಮಠದ ಹಳ್ಳಿ ಗಂಗೇನಹಳ್ಳಿ ಬಡಾವಣೆ 7/1 ಬಿ,ಸಿ ಹಾಗೂ ಡಿ ಸರ್ವೆ ನಂಬರ್‌ನಲ್ಲಿ. 1.11 ಎಕರೆ ಜಮೀನು ಬಿಡಿಎ ಗೆ ಭೂಸ್ವಾಧೀನಗೊಂಡಿರುತ್ತದೆ. ಇದನ್ನು ಡಿನೋಟಿಫೈ ಮಾಡಬೇಕು ಅಂತ ರಾಜಶೇಖರಯ್ಯ ಎಂಬುವವರು ಅರ್ಜಿ ನೀಡುತ್ತಾರೆ. 22.08.2007 ರಲ್ಲಿ ಅರ್ಜಿ ಬಂದ ಅದೇ ದಿನ ಸಿಎಂ ಎಚ್ಡಿಕೆ ಡಿನೋಟಿಫೈ ಮಾಡಲು ಸೂಚಿಸಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ.

ಈ ಜಮೀನಿನ ಅಸಲಿ ಮಾಲಿಕರು 21 ಜನರಿದ್ದಾರೆ. ಈ ಜಮೀನು 30 ವರ್ಷಗಳ ಹಿಂದೆಯೇ ಭೂಸ್ವಾಧೀನ ಆಗಿತ್ತು. ಕುಮಾರಸ್ವಾಮಿ ಅತ್ತೆ ಅನಿತಾ ಕುಮಾರಸ್ವಾಮಿ ತಾಯಿ ಜಿಪಿಎ ಮಾಡಿದ್ದಾರೆ. ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಡಿನೋಟಿಫೈ ಮಾಡಲು ಬರುವುದಿಲ್ಲ ಎಂದು ಫೈಲ್‌ ತಿರಸ್ಕಾರ ಮಾಡಿದ್ದಾರೆ. ಆದರೆ ಇದನ್ನು ಅಂದಿನ ಸಿಎಂ ಕುಮಾರಸ್ವಾಮಿ ಡಿನೋಟಿಫೈ ಮಾಡುವಂತೆ ಸೂಚಿಸುತ್ತಾರೆ. ನಂತರ ಸರಕಾರ ಬದಲಾಗಿದ್ದು, ಯಡಿಯೂರಪ್ಪ ಸಿಎಂ ಆದಾಗ ಅದೇ ಫೈಲ್‌ ಯಡಿಯೂರಪ್ಪ ಕೈಗೆ ಬರುತ್ತದೆ. ಕಾನೂನನ್ನು ಗಾಳಿಗೆ ತೂರಿ ಯಡಿಯೂರಪ್ಪ 2010 ಜೂನ್‌ 5 ರಂದು ಭೂಸ್ವಾಧೀನದಿಂದ ಕೈ ಬಿಡುತ್ತಾರೆ ಎಂದು ಹೇಳಿದರು.

ಡಿನೋಟಿಫೈ ಆದ ಒಂದೇ ತಿಂಗಳಿಗೆ ಕುಮಾರಸ್ವಾಮಿ ಬಾಮೈದ ಚನ್ನಪ್ಪ ಶುದ್ಧ ಕ್ರಮಪತ್ರ ಮಾಡಲಾಗುತ್ತದೆ. ಇದು ವ್ಯವಸ್ಥಿತ ವಂಚನೆ ಎಂದು ಆರೋಪ ಮಾಡಿದರು. ಲೋಕಾಯುಕ್ತದವರು ಈ ಪ್ರಕರಣ ತನಿಖೆ ನಡೆಸುತ್ತಿದ್ದು, ಶೀಘ್ರ ತನಿಖೆ ಮಾಡಲು ಒತ್ತಾಯಿಸಿದ್ದಾರೆ. ಯಡಿಯೂರಪ್ಪ, ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್‌ ಆಗಿ ಒಂಭತ್ತು ವರ್ಷ ಆಗಿದೆ. ಹೈಕೋರ್ಟ್‌ ತನಿಖೆಗೆ ಸೂಚನೆ ನೀಡಿದೆ. ಆದರೂ ಲೋಕಾಯುಕ್ತ ಸುಮ್ಮನಿರುವುದು ಏಕೆ? ಎಂದು ಪ್ರಶ್ನೆ ಮಾಡಿದರು.

 

Leave A Reply

Your email address will not be published.