Siddaramaiah: ಸಿಎಂ ಕಾರ್ಯಕ್ರಮದಲ್ಲಿ ಸಭೆಯ ಮಧ್ಯೆ ಕೇಸರಿ ಶಾಲು ಹಿಡಿದು ವೇದಿಕೆಗೆ ನುಗ್ಗಿದ ಯುವಕ! ಏನಿದು ಸಂಚು?!

Siddaramaiah: ವಿಧಾನಸೌಧದ ಮುಂಭಾಗ ಹಮ್ಮಿಕೊಂಡಿದ್ದ, ಸಿಎಂ ಸಿದ್ದರಾಮಯ್ಯ ನೇತೃತ್ವದ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮದಲ್ಲಿ ಭದ್ರತಾ ಲೋಪ (Security Breach) ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ.

 

ಸಂವಿಧಾನದ ಆಶಯ ಜಾಗೃತಿಗೊಳಿಸುವ ಸದುದ್ದೇಶದಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ ಹಿನ್ನಲೆ ಬೆಂಗಳೂರು ವಿಧಾನಸೌಧದ ಮುಂಭಾಗ ಹಮ್ಮಿಕೊಳ್ಳಲಾದ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಚಾಲನೆ ನೀಡಿದ್ದರು.

ಆದರೆ ಕಾರ್ಯಕ್ರಮದ ವೇಳೆ ಕೇಸರಿ ಶಾಲು ಹಿಡಿದ ಯುವಕನೊಬ್ಬ ಏಕಾಏಕಿ ಸಿಎಂ ಕುಳಿತಿದ್ದ ವೇದಿಕೆಗೆ ನುಗ್ಗಿದ್ದಾನೆ, ಈ ವೇಳೆ ವೇದಿಕೆಯಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನ ತಡೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಯುವಕ ಕಳೆದ ಒಂದು ವಾರದಿಂದ ಸಿಎಂ ಭೇಟಿಗೆ ಯತ್ನಿಸಿದ್ದು, ಇಂದು ಸಹ ಕಾರ್ಯಕ್ರಮದಲ್ಲಿ ಸಿಎಂ ಮೇಲಿನ ಪ್ರೀತಿಯಿಂದ ಅವರಿಗೆ ಶಾಲು ಹೊದಿಸಲು ಮುಂದಾಗಿದ್ದಾನೆ.

ಬಂಧಿತ ಯುವಕನನ್ನ ಮಹದೇವ್ ನಾಯಕ್ ಎಂದು ಗುರುತಿಸಲಾಗಿದೆ. ಈತ ಬೆಂಗಳೂರು (Bengaluru) ಬನಶಂಕರಿಯಲ್ಲಿ ವಾಸವಾಗಿದ್ದು, ಮೂಲತಃ ಉತ್ತರ ಕರ್ನಾಟಕದವನು ಎನ್ನಲಾಗಿದೆ. ಸದ್ಯ ವಿಧಾನಸೌಧ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಏನಾದರೂ ಸಂಚು ನಡೆದಿದೆಯೇ ಎಂದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Leave A Reply

Your email address will not be published.