Mangaluru: ಮಂಗಳೂರಿನಾದ್ಯಂತ ಸಂಚಲನ ಸೃಷ್ಟಿಸಿದ ಶ್ರೀಮತಿ ಶೆಟ್ಟಿ ಭೀಕರ ಕೊಲೆ ಪ್ರಕರಣ- ಮೂವರ ಅಪರಾಧ ಸಾಬೀತು, ಸೆ.17ಕ್ಕೆ ಶಿಕ್ಷೆ ಪ್ರಕಟ

Mangaluru: ಐದು ವರ್ಷಗಳ ಹಿಂದೆ ಮಂಗಳೂರು (Mangaluru) ನಗರದಲ್ಲಿ ಶ್ರೀಮತಿ ಶೆಟ್ಟಿ ಎಂಬವರನ್ನು ಕೊಲೆಗೈದು ಮೃತದೇಹವನ್ನು 29 ತುಂಡುಗಳನ್ನಾಗಿ ಬೇರ್ಪಡಿಸಿ ಬೇರೆ ಬೇರೆ ಕಡೆಗಳಲ್ಲಿ ಎಸೆದಿದ್ದ ಪ್ರಕರಣದಲ್ಲಿ ದಂಪತಿ ಸಹಿತ ಮೂವರ ಮೇಲಿನ ಆರೋಪ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ‌‌. ಆದರೆ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಲಾಗಿದೆ.

 

ಹೌದು, ಐದು ವರ್ಷಗಳ ಹಿಂದೆ ಮಂಗಳೂರು ನಗರವನ್ನೇ ಬೆಚ್ಚಿಬಿಳಿಸಿದ್ದ ಶ್ರೀಮತಿ ಶೆಟ್ಟಿ(Shrimati Shetty) ಬರ್ಬರ ಹತ್ಯೆ ಪ್ರಕರಣದ ಆರೋಪಿಗಳ ಕೃತ್ಯ ಸಾಬೀತಾದ ಹಿನ್ನೆಲೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌ ತೀರ್ಪು ನೀಡಿದ್ದಾರೆ. ನಗರದ ವೆಲೆನ್ಸಿಯಾ ಸಮೀಪದ ಸೂಟರ್‌ಪೇಟೆಯ ಜೋನಸ್ ಸ್ಯಾಟ್ಸನ್(40), ವಿಕ್ಟೋರಿಯಾ ಮಥಾಯಿಸ್ (47) ಹಾಗೂ ಮರಕಡ ತಾರಿಪಾಡಿ ಗುಡ್ಡೆಯ ರಾಜು (34) ತಪ್ಪಿತಸ್ಥರು ಎಂದು ಕೋರ್ಟ್ ತೀರ್ಪು ನೀಡಿದೆ. ಈ ಪೈಕಿ ಜೋನಸ್ ಮತ್ತು ವಿಕ್ಟೋರಿಯಾ ಜೈಲಿನಲ್ಲೇ ಶಿಕ್ಷೆ ಅನುಭವಿಸುತ್ತಿದ್ದಾರೆ. ರಾಜು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ಆತನನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ.

 

ಪ್ರಕರಣ ಹಿನ್ನೆಲೆ:

ಅತ್ತಾವರ ನಿವಾಸಿ ಶ್ರೀಮಂತಿ ಶೆಟ್ಟಿ(42) ಶ್ರೀ ಪೊಳಲಿ ಎಲೆಕ್ಟ್ರಾನಿಕ್ಸ್ ಅಂಗಡಿ ನಡೆಸುವುದರ ಜೊತೆಗೆ ಚಿಟ್ ಫಂಡ್ ವ್ಯವಹಾರ ಮಾಡಿಕೊಂಡಿದ್ದರು. ಇದೇ ಚಿಟ್‌ಫಂಡ್‌ನಲ್ಲಿ ಕೊಲೆ ಆರೋಪಿ ಜೋನಸ್ ಸ್ಯಾಮ್ಸನ್ ಅವಧಿಗೆ ಮೊದಲೇ ಎರಡೂ ಸದಸ್ಯತ್ವದ ಹಣವನ್ನು ಪಡೆದುಕೊಂಡಿದ್ದ. ಆದರೆ ಮಾಸಿಕ ಕಂತು ಪಾವತಿಸಲು ವಿಫಲನಾಗಿದ್ದ ಜೋನಸ್. ಹೀಗಾಗಿ ಕಂತು ಪಾವತಿಸುವಂತೆ ಶ್ರೀಮತಿ ಶೆಟ್ಟಿ ಒತ್ತಾಯಿಸಿದ್ದರು. ಆದರೂ ಕಂತು ಪಾವತಿಸದೇ ನಿರ್ಲಕ್ಷ್ಯ ಮುಂದುವರಿಸಿದ್ದ ಕೊಲೆ ಆರೋಪಿ. ಕೇಳಿ ಕೇಳಿ ಬೇಸತ್ತ ಶ್ರೀಮತಿ ಶೆಟ್ಟಿ 2019 ಮೇ.11ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಹಣ ಕೇಳುವುದಕ್ಕೆ ಸ್ಯಾಮ್ಸನ್ ಮನೆಗೆ ತೆರಳಿದ್ದರು.  ಅಲ್ಲಿ ಸ್ಯಾಮ್ಸನ್‌ ಮರದ ಪಟ್ಟಿಯ ತುಂಡಿನಿಂದ ಶ್ರೀಮತಿ ಶೆಟ್ಟಿ ತಲೆಗೆ ಹೊಡೆದಿದ್ದ. ಪ್ರಜ್ಞಾಹೀನರಾಗಿದ್ದ ಶ್ರೀಮತಿ ಶೆಟ್ಟಿ ಅವರನ್ನು ಜೋನಸ್‌ ಮತ್ತು ವಿಕ್ಟೋರಿಯಾ ಬಚ್ಚಲು ಕೋಣೆಗೆ ಎಳೆದೊಯ್ದು ಹರಿತವಾದ ಕತ್ತಿಯಿಂದ ಕುತ್ತಿಗೆ ಕೊಯ್ದು ಮೈಮೇಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಿ ದೇಹವನ್ನು ಒಟ್ಟು 29 ತುಂಡು ಮಾಡಿ ಗೋಣಿ ಚೀಲದಲ್ಲಿ ತುಂಬಿಸಿ ನಗರದ ಹಲವೆಡೆ ಎಸೆದಿದ್ದರು.

 

ರುಂಡ ಪತ್ತೆಯಿಂದ ಪ್ರಕರಣ ಬೆಳಕಿಗೆ

ಕದ್ರಿ ಬಳಿಯ ಅಂಗಡಿಯೊಂದರ ಬಳಿ ರುಂಡ ಪತ್ತೆಯಾದ ಮೇಲೆ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ನಂದಿಗುಡ್ಡೆಯಲ್ಲಿ ದೇಹದ ತುಂಡುಗಳು ಪತ್ತೆಯಾಗಿ ದ್ದವು. ಈ ಪ್ರಕರಣದಲ್ಲಿ ರಾಜು ಕೂಡ ಸಹಕರಿಸಿದ್ದ. ಮಂಗಳೂರು ಪೂರ್ವ ಠಾಣೆಯ ನಿರೀಕ್ಷಕ ಮಹೇಶ್‌ ಎಂ. ತನಿಖೆ ಕೈಗೊಂಡಿದ್ದರು. ಫೊರೆನ್ಸಿಕ್‌ ವಿಭಾಗದ ವೈದ್ಯಾಧಿಕಾರಿ ಡಾ| ಜಗದೀಶ್‌ ರಾವ್‌ ಶವಪರೀಕ್ಷೆ ನಡೆಸಿ ವರದಿ ನೀಡಿದ್ದರು. ಇನ್‌ಸ್ಪೆಕ್ಟರ್‌ ಶಾಂತಾರಾಂ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌. ಅವರು 48 ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿದ್ದು, ಒಟ್ಟು 141 ದಾಖಲೆಗಳನ್ನು ಗುರುತಿಸಲಾಗಿತ್ತು.

 

ರುಂಡವನ್ನು ಹೆಲ್ಮೆಟ್‌ನೊಳಗಿರಿಸಿದ್ದರು

ಹತ್ಯೆ ನಡೆಸಿ 29 ತುಂಡುಗಳನ್ನಾಗಿ ಮಾಡಿದ್ದ ಜೋನಸ್‌ ಮತ್ತು ವಿಕ್ಟೋರಿಯಾ ಅದೇ ದಿನ ರಾತ್ರಿ ಆ ತುಂಡುಗಳನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿಸಿದ್ದರು. ಜೋನಸ್‌ ಆ ತುಂಡುಗಳನ್ನು ರಾತ್ರಿ ಸ್ಕೂಟರ್‌ನಲ್ಲಿ ಕೊಂಡೊಯ್ದು ನಗರದ ಹಲವೆಡೆಗಳಲ್ಲಿ ಇಟ್ಟು ಬಂದಿದ್ದ. ರುಂಡವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಸಿ ಅದನ್ನು ಹೆಲ್ಮೆಟ್‌ನೊಳಗೆ ಇರಿಸಿ ಆ ಹೆಲ್ಮೆಟ್‌, ಕೈ, ಮಾಂಸದ ತುಂಡುಗಳಿದ್ದ ಗೋಣಿ ಚೀಲವನ್ನು ಕೆಪಿಟಿ ಸಮೀಪದ ಗೂಡಂಗಡಿಯೊಂದರ ಬಳಿ ಇಟ್ಟಿದ್ದ.

ಕಾಲುಗಳನ್ನು ಪದವು ಹಾಸ್ಟೆಲ್‌ವೊಂದರ ಕಾಂಪೌಂಡ್‌ ಬಳಿ, ಕುತ್ತಿಗೆಯಿಂದ ಸೊಂಟದವರೆಗಿನ ಭಾಗ ಹಾಗೂ ಇತರ ಭಾಗಗಳನ್ನು ನಂದಿಗುಡ್ಡೆ ಶ್ಮಶಾನದ ಬಳಿ ರಸ್ತೆ ಬದಿಯಲ್ಲಿ ಇಟ್ಟಿದ್ದ. ಇತರ ಕೆಲವು ತುಂಡುಗಳನ್ನು ರಸ್ತೆಯ ಮಧ್ಯೆ ಹಾಗೂ ಶ್ಮಶಾನದ ಒಳಗಡೆ ಬಿಸಾಡಿದ್ದ. ಶ್ರೀಮತಿ ಶೆಟ್ಟಿ ಅವರ ವ್ಯಾನಿಟಿ ಬ್ಯಾಗ್‌ ಮತ್ತು ಚಪ್ಪಲಿಯನ್ನು ಆರೋಪಿಗಳು ಮನೆಯ ಒಲೆಯಲ್ಲಿ ಸುಟ್ಟು ಹಾಕಿದ್ದರು.

 

ಜೀವಂತವಿದ್ದ ದೇಹ ತುಂಡರಿಸಿದ್ದ ಪಾಪಿಗಳು

ಶ್ರೀಮತಿ ಶೆಟ್ಟಿ ಅವರ ಹಣೆಗೆ ಜೋನಸ್‌ ಬಲವಾಗಿ ಹೊಡೆದಿದ್ದ. ಆಕೆ ನೆಲಕ್ಕೆ ಬಿದ್ದಾಗ ಆಕೆಯ ಮುಖ ಮತ್ತು ಗಲ್ಲಕ್ಕೆ ಹೊಡೆದು ಪ್ರಜ್ಞಾಹೀನಳನ್ನಾಗಿಸಿದ್ದ. ಬಳಿಕ ವಿಕ್ಟೋರಿಯಾಳ ಸಹಾಯದಿಂದ ಕೋಣೆಯಲ್ಲಿ ಮಲಗಿಸಿ ಶ್ರೀಮತಿ ಶೆಟ್ಟಿಯವರು ಚಲಾಯಿಸಿಕೊಂಡು ಬಂದಿದ್ದ ಸ್ಕೂಟರ್‌ ಅನ್ನು ನಾಗುರಿಗೆ ಚಲಾಯಿಸಿಕೊಂಡು ಹೋಗಿ ಅಲ್ಲಿ ರಸ್ತೆ ಬದಿ ನಿಲ್ಲಿಸಿ ವಾಪಸ್‌ ಮನೆಗೆ ಬಂದಿದ್ದ.

ಬೆಳಗ್ಗೆ 11.30ರ ವೇಳೆಗೆ ಬಚ್ಚಲು ಕೋಣೆಗೆ ಎಳೆದುಕೊಂಡು ಹೋಗಿ ಮರದ ಹಲಗೆಯ ಮೇಲಿಟ್ಟು ಹರಿತವಾದ ಕತ್ತಿಯಿಂದ ತುಂಡುಗಳನ್ನಾಗಿ ಮಾಡಿದ್ದ. ಈ ರೀತಿ ತುಂಡು ಮಾಡುವಾಗಲೂ ಶ್ರೀಮತಿ ಶೆಟ್ಟಿ ಅವರ ಪ್ರಾಣ ಹೋಗಿರಲಿಲ್ಲ. ಆದರೂ ಪಾಪಿಗಳು ವಿಕೃತಿ ಮೆರೆದಿದ್ದರು. ಸಾಕ್ಷ್ಯನಾಶಕ್ಕಾಗಿಯೇ ದೇಹವನ್ನು ತುಂಡುಗಳನ್ನಾಗಿ ಮಾಡಿ ಎಸೆದಿದ್ದರು.

 

ಬಳಿಕ ಈ ಪ್ರಕರಣದಲ್ಲಿ ರಾಜು ಕೂಡ ಸಹಕರಿಸಿದ್ದನು. ಕದ್ರಿ ಠಾಣೆಯ ನಿರೀಕ್ಷಕ ಮಹೇಶ್ ಎಂ. ತನಿಖೆ ಕೈಗೊಂಡಿದ್ದರು. ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿ ಡಾ. ಜಗದೀಶ್ ರಾವ್ ಶವಪರೀಕ್ಷೆ ನಡೆಸಿ ವರದಿ ನೀಡಿದ್ದರು. ಇಡೀ ಪ್ರಕರಣದ ತನಿಖೆಯಾಗಿ ಮಂಗಳೂರು ಪೂರ್ವ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಮಹೇಶ್‌ ಎಂ. ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

 

ಸದ್ಯ ಪ್ರಕರಣದಲ್ಲಿ ಮೂವರು ಆರೋಪಿಗಳ ಕೃತ್ಯ ಸಾಬೀತಾಗಿರುವ ಹಿನ್ನೆಲೆ ತೀರ್ಪು ನೀಡಿದ ಕೋರ್ಟ್. ಆರೋಪಿಗಳಿಗೆ ಯಾವ ಪ್ರಮಾಣದ ಶಿಕ್ಷೆ ವಿಧಿಸಬೇಕು ಎಂಬ ಬಗ್ಗೆ ನ್ಯಾಯಾಲಯ ಸೆ.17ರಂದು ಪ್ರಕಟಿಸಲಿದೆ

Leave A Reply

Your email address will not be published.