Gujarat: ಗುಜರಾತಿನ ಈ ಸೇತುವೆ ಕಟ್ಟಲು ಆಗಿದ್ದು 42 ಕೋಟಿ – ಈಗ ಕೆಡವಲು ಬೇಕು 52 ಕೋಟಿ !!

Gujarat: ಗುಜರಾತಿನ ಅಹಮದಾಬಾದ್(Ahmedabad ನಗರದ ಹಾತ್ಕೇಶ್ವರ್ ಸೇತುವೆಯನ್ನು(Hatkeshwar Bridge)ಕಟ್ಟಲು 42 ಕೋಟಿವೆಚ್ಚವಾಗಿತ್ತು. ಇದು ಕಳಪೆ ಗುಣಮಟ್ಟದೆಂದು ತಿಳಿದ ಸರ್ಕಾರ ಈ ಸೇತುವೆಯನ್ನು ಕೆಡವಲು ಮುಂದಾಗಿದೆ. ಆದರೆ ಈ ಸೇತುವೆ ಕೆಡವಲು ಈಗ ಬರೋಬ್ಬರಿ 52 ಕೋಟಿರೂಪಾಯಿ ವೆಚ್ಚವಾಗುತ್ತದೆ. ಅಂದರೆ ಕಟ್ಟಿದ ವೆಚ್ಚಕ್ಕಿ 10ಕೋಟಿ ಹೆಚ್ಚು ಹಣ ಕೆಡವಲು ಬೇಕಾಗುತ್ತದೆ.

ಹೌದು, ಹಿಂದೆ 2017 ರಲ್ಲಿ 42 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಹಟಕೇಶ್ವರ ಸೇತುವೆಯನ್ನು ಈಗ 52 ಕೋಟಿ ಬಜೆಟ್‌ನಲ್ಲಿ ಕೆಡವಲು ನಿರ್ಧರಿಸಲಾಗಿದೆ. ಸೇತುವೆಯ ನಿರ್ಮಾಣದ ಪ್ಲಾನಿಂಗ್ ಮತ್ತು ಡಿಸೈನ್ ನಲ್ಲಿ ಸಾಕಷ್ಟು ಎಡವಟ್ಟುಗಳಾಗಿದ್ದು, 2022 ರಲ್ಲಿ ಈ ಸೇತುವೆಯನ್ನು ಸಂಚಾರಕ್ಕೆ ಮುಚ್ಚಲಾಯಿತು. ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಕೇವಲ ಐದೇ ವರ್ಷಗಳಲ್ಲಿ ಈ ಸೇತುವೆಯು ಅಸುರಕ್ಷಿತವಾಗಿ ಪರಿಣಮಿಸಿತ್ತು.

ಈ ಸೇತುವೆ ನಿರ್ಮಾಣದ ಆರಂಭದಲ್ಲಿ 100 ವರ್ಷಗಳ ಜೀವಿತಾವಧಿಗಾಗಿ ಪ್ಲಾನ್ ರೂಪಿಸಲಾಗಿತ್ತು.ಆದ್ರೆ ಸೇತುವೆ ಪೂರ್ಣಗೊಂಡ ಐದು ವರ್ಷಗಳ ನಂತರ ಒಂದಾದ ನಂತರ ಒಂದು ಸಮಸ್ಯೆಗಳು ಪ್ರಾರಂಭವಾದವು. ಜೊತೆಗೆ 2022 ರಲ್ಲಿ ಬಿರುಕುಗಳು ಮತ್ತು ಇತರ ದೋಷಗಳು ಹೆಚ್ಚಾಗಿದ್ದರಿಂದ ಸೇತುವೆಯನ್ನು ಅನಿವಾರ್ಯವಾಗಿ ಮುಚ್ಚಬೇಕಾಯಿತು. ಬಳಿಕ ಇದೀಗ ಅಹಮದಾಬಾದ್ ಮಹಾನಗರ ಪಾಲಿಕೆಯು ಈ ಸೇತುವೆಯನ್ನು ಕೆಡವಲು ಮುಂದಾಗಿದೆ. ಆದರೆ ಅಚ್ಚರಿ ಏನಂದರೆ ಹಾತ್ಕೇಶ್ವರ್ ಸೇತುವೆಯನ್ನು ಕೆಡವಲು ಅದರ ನಿರ್ಮಾಣ ವೆಚ್ಚಕ್ಕಿಂತ 10 ಕೋಟಿ ರೂ. ಹೆಚ್ಚು ವೆಚ್ಚವಾಗುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇದು ಸಾರ್ವಜನಿಕ ಮೂಲಭೂತ ಸೌಕರ್ಯ ನಿರ್ಮಾಣದ ವೈಫಲ್ಯವನ್ನು ಸೂಚಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಂದಹಾಗೆ 2022ರಿಂದ ಇಲ್ಲಿಯವರೆಗೆ ನಾಲ್ಕು ಬಾರಿ ಈ ಸೇತುವೆಯನ್ನು ಕೆಡವಲು ಟೆಂಡರ್ ಕರೆದರೂ ಯಾವುದೇ ಗುತ್ತಿಗೆದಾರರು ಆಸಕ್ತಿ ತೋರಿರಲಿಲ್ಲ. ಮೊದಲೆರಡು ಟೆಂಡರ್ ಗಳಿಗೆ ಯಾವುದೇ ಗುತ್ತಿಗೆದಾರರೂ ಬಿಡ್ ಸಲ್ಲಿಸಿರಲಿಲ್ಲ. ಮೂರನೆಯ ಟೆಂಡರ್ ನಲ್ಲಿ ಮಹಾರಾಷ್ಟ್ರ ಮೂಲದ ಗುತ್ತಿಗೆದಾರರೊಬ್ಬರು ಆರಂಭದಲ್ಲಿ ಆಸಕ್ತಿ ತೋರಿದರಾದರೂ, ನಂತರ ಹಿಂಜರಿದಿದ್ದರು. ಕೊನೆಯದಾಗಿ, ನಾಲ್ಕನೆಯ ಪ್ರಯತ್ನದಲ್ಲಿ ರಾಜಸ್ಥಾನದ ವಿಷ್ಣುಪ್ರಸಾದ್ ಪುಂಗ್ಲಿಯ ಎಂಬ ಗುತ್ತಿಗೆದಾರರು ಈ ಸೇತುವೆಯನ್ನು ಕೆಡವಲು 52 ಕೋಟಿ ರೂ. ಮೊತ್ತದ ಗುತ್ತಿಗೆ ಪಡೆದುಕೊಂಡಿದ್ದಾರೆ. ಈಗಾಗಲೇ ಕಾರ್ಯಾದೇಶವನ್ನೂ ನೀಡಲಾಗಿದ್ದು, ನೆಲಸಮ ಕಾರ್ಯಾಚರಣೆ ಪ್ರಗತಿಯಲ್ಲಿದೆ.

Leave A Reply

Your email address will not be published.