Bengaluru: ಅಕ್ರಮ ಸಂಬಂಧಕ್ಕಾಗಿ ತಾಯಿಯನ್ನೇ ಕೊಲೆ ಮಾಡಿದ ಮಗಳು! ಕೊನೆಗೂ ಮಗಳ ಬಂಧನ

Bengaluru: ಹೆತ್ತ ತಾಯಿಯನ್ನೇ ಕೊಂದು ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿ ಇದೀಗ ಮಗಳು ಜೈಲು ಸೇರಿದ್ದಾಳೆ. ಹೌದು, ಬಾಡಿಗೆದಾರನೊಂದಿಗಿನ ಅಕ್ರಮ ಸಂಬಂಧ ಹೊಂದಿದ್ದ ವಿಚಾರ ತಿಳಿದು ಜಗಳ ಮಾಡಿದ ತಾಯಿ ಜಯಲಕ್ಷ್ಮಿಯನ್ನು ಮಗಳು ಪವಿತ್ರಾ ಕೊಲೆ ಮಾಡಿರುವ ಘಟನೆ ಹೊಂಗಸಂದ್ರದಲ್ಲಿ (Bengaluru)ನಡೆದಿದೆ.
ಆರಂಭದಲ್ಲಿ ಆರೋಪಿ ಪವಿತ್ರಾ ಮತ್ತು ಆಕೆಯ ಆಪ್ತ ಲವಣೇಶ್ ಕೊಲೆಯನ್ನು ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಜಯಲಕ್ಷ್ಮಿಯನ್ನು ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ ಎಂಬುದು ಎಂದು ದೃಢಪಟ್ಟಿದೆ.
ಪವಿತ್ರಾ 11 ವರ್ಷಗಳ ಹಿಂದೆ ಸುರೇಶ್ ಎಂಬಾತನನ್ನು ಮದುವೆಯಾಗಿದ್ದು, 10 ವರ್ಷದ ಮಗಳು ಮತ್ತು ಆರು ವರ್ಷದ ಮಗ ಇದ್ದಾನೆ. ಆದರೆ, ಇತ್ತೀಚೆಗಷ್ಟೇ ಲವಣೇಶ್ ಎಂಬಾತನೊಂದಿಗೆ ಅಕ್ರಮ ಸಂಬಂಧಕ್ಕೆ ತಾಯಿ ಒಪ್ಪಿರಲಿಲ್ಲ ಎನ್ನಲಾಗಿದೆ.
ತನ್ನ ತಾಯಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಪವಿತ್ರಾ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಮತ್ತು ಆಕೆಯ ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡ ಪೊಲೀಸರು ಆರಂಭದಲ್ಲಿ ಅದನ್ನು ಅಸಹಜ ಸಾವು ಎಂದು ವರ್ಗೀಕರಿಸಿದ್ದರು. ಆದರೆ, ಶುಕ್ರವಾರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಜಯಲಕ್ಷ್ಮಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ದೃಢಪಟ್ಟಿದೆ.
ಈ ವರದಿಯ ನಂತರ ಪೊಲೀಸರಿಗೆ ಪವಿತ್ರಾಳನ್ನು ವಿಚಾರಣೆ ನಡೆಸಿದಾಗ ಅಕ್ರಮ ಸಂಬಂಧದ ಬಗ್ಗೆ ತಾಯಿ ಪ್ರಶ್ನಿಸಿದಾಗ ಟವೆಲ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಇದೀಗ ಪವಿತ್ರಾ ಮತ್ತು ಲವಣೇಶ್ ಇಬ್ಬರನ್ನೂ ಬಂಧಿಸಲಾಗಿದ್ದು, ಪೊಲೀಸ್ ವಶದಲ್ಲಿದ್ದಾರೆ.