Ananth Ambani: ಬರ ಪೀಡಿತ ನಮೀಬಿಯಾದಲ್ಲಿ ಮಾಂಸಕ್ಕಾಗಿ ಆನೆಗಳ ಮಾರಣಹೋಮ – ಕೊಲ್ಲಬೇಡಿ, ನಾವು ಸಹಾಯ ಮಾಡ್ತೀವಿ; ಪ್ರಾಣಿಗಳ ರಕ್ಷಣೆಗೆ ಮುಂದಾದ ಅನಂತ್ ಅಂಬಾನಿ !!
Ananth Ambani: ದಕ್ಷಿಣ ಆಫ್ರಿಕಾದ ರಾಷ್ಟ್ರ ನಮೀಬಿಯಾ ಭೀಕರ ಬರಗಾಲದಿಂದ (Namibia Drought) ತತ್ತರಿಸುತ್ತಿದೆ. 100 ವರ್ಷಗಳಲ್ಲಿ ಕಂಡು ಕೇಳರಿಯದ ಭೀಕರ ಬರಗಾಲದಿಂದಾಗು ಜನರು ಇಲ್ಲಿ ಹಸಿವಿನಿಂದ ಸಾಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ವನ್ಯಜೀವಿಗಳನ್ನು ಕೊಂದು ಅವುಗಳ ಮಾಂಸದಿಂದ ಜನರ ಹಸಿವು ನೀಗಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ 700 ಕ್ಕೂ ಹೆಚ್ಚು ಪ್ರಾಣಿಗಳನ್ನು ಕೊಲ್ಲಲು ಸರ್ಕಾರ ಮುಂದಾಗಿದೆ. ಈ ಕ್ರಮವನ್ನು ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕ ಅನಂತ್ ಅಂಬಾನಿ(Ananth Ambani) ಅವರ ವಂತಾರಾ ಸಂಸ್ಥೆ ಖಂಡಿಸಿದ್ದು, ಪ್ರಾಣಿಗಳನ್ನು ಕೊಲ್ಲುವುದನ್ನು ತಪ್ಪಿಸಲು ಯಾವುದೇ ಸಹಾಯವನ್ನು ನೀಡಲು ನಾವು ರೆಡಿ ಎನ್ನುವ ಮೂಲಕ ಪ್ರಾಣಿ ಸಂರಕ್ಷಣೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಹೌದು, ಪ್ರಾಣಿ ಸಂರಕ್ಷಣೆ ನಿಟ್ಟಿನಲ್ಲಿ ವಂತಾರಾ ಸಂಸ್ಥೆಯ ಸಿಇಒ ವಿವಾನ್ ಕರಣಿ(CEO Vivan Karani) ಅವರು ನವದೆಹಲಿಯಲ್ಲಿರುವ ರಿಪಬ್ಲಿಕ್ ಆಫ್ ನಮೀಬಿಯಾದ ಹೈಕಮಿಷನರ್ಗೆ ಪತ್ರ ಬರೆದು ಈ ವನ್ಯಜೀವಿಗಳನ್ನು ರಕ್ಷಿಸಲು ಉದ್ಯಮಿ ಅನಂತ್ ಅಂಬಾನಿ ಅವರ ವಂತಾರಾ ಪ್ರತಿಷ್ಠಾನ ಮುಂದೆ ಬಂದಿದೆ. ಪರಿಸ್ಥಿತಿಯು ಅತ್ಯಂತ ಗಂಭೀರವಾಗಿರುವುದರಿಂದ ಪ್ರಾಣಿಗಳನ್ನು ಕೊಲ್ಲುವ ಬಗ್ಗೆ ಪರಿಗಣಿಸಲಾಗುತ್ತಿದೆ ಎಂದು ವರದಿಗಳು ಕೇಳಿ ಬಂದಿದ್ದು ಇಂತಹ ಪರಿಸ್ಥಿತಿಯಲ್ಲಿ ನಮೀಬಿಯಾ ಸರ್ಕಾರಕ್ಕೆ ಪರ್ಯಾಯ ಮಾರ್ಗವನ್ನು ಪ್ರತಿಷ್ಠಾನವು ಸೂಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಭಾರತದ ಗುಜರಾತ್(Gujarath) ಮೂಲದ ಪ್ರಾಣಿ ಕಲ್ಯಾಣ ಮತ್ತು ಸಂರಕ್ಷಣಾ ಸಂಸ್ಥೆ ವಂತಾರಾ ಪರವಾಗಿ ನಾನು ಪತ್ರ ಬರೆಯುತ್ತಿದ್ದೇನೆ. ವಂತಾರಾ ಒಂದು ಸಂಸ್ಥೆಯಾಗಿ ಗ್ರೀನ್ಸ್ ಝೂಲಾಜಿಕಲ್ ಪಾರುಗಾಣಿಕಾ ಮತ್ತು ಪುನರ್ವಸತಿ ಕೇಂದ್ರ ಮೂಲಕ ಪ್ರಾಣಿಗಳನ್ನು ರಕ್ಷಿಸಲು, ಆರೈಕೆ ಮಾಡಲು ಮತ್ತು ಸಂರಕ್ಷಿಸಲು ದಣಿವರಿಯಿಲ್ಲದೆ ಕೆಲಸ ಮಾಡುವ ಪ್ರಾಣಿ ಕಲ್ಯಾಣ ಸಂಸ್ಥೆಗಳನ್ನು ಮೀಸಲಿಟ್ಟಿದೆ. ನಮ್ಮದು ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಗುರುತಿಸಲ್ಪಟ್ಟ ಪಾರುಗಾಣಿಕಾ ಕೇಂದ್ರ ಮತ್ತು ಸಂರಕ್ಷಣಾ ಸಂತಾನೋತ್ಪತ್ತಿ ಕೇಂದ್ರವಾಗಿದ್ದು, 2000ಕ್ಕೂ ಹೆಚ್ಚು ಜಾತಿಯ ಪ್ರಾಣಿಗಳ ಆರೈಕೆ ಮತ್ತು ಸಂರಕ್ಷಣೆಗೆ ಸೇವೆ ಸಲ್ಲಿಸುತ್ತಿದೆ. ಅವುಗಳಲ್ಲಿ ಹೆಚ್ಚಿನವು ಭಾರತ ಮತ್ತು ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಸಂದರ್ಭಗಳಲ್ಲಿ ರಕ್ಷಿಸಲ್ಪಟ್ಟ ಪ್ರಾಣಿಗಳಾಗಿವೆ. ಆನೆ ಶಿಬಿರವಾಗಿರುವ ರಾಧೆ ಕೃಷ್ಣ ದೇವಸ್ಥಾನದ ಆನೆ ಕಲ್ಯಾಣ ಟ್ರಸ್ಟ್ ಕೂಡ ನಮ್ಮ ಸಂಸ್ಥೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಒಟ್ಟಾರೆ 3500 ಎಕರೆಗಳನ್ನು ಒಳಗೊಂಡಿರುವ ಗ್ರೀನ್ಸ್ ಝೂಲಾಜಿಕಲ್ ಪಾರುಗಾಣಿಕಾ ಮತ್ತು ಪುನರ್ವಸತಿ ಕೇಂದ್ರದಲ್ಲಿ ವಿಶ್ವದರ್ಜೆಯ ಆಸ್ಪತ್ರೆಗಳು ಮತ್ತು ಸಂಶೋಧನಾ ಸೌಲಭ್ಯಗಳನ್ನು ಒಳಗೊಂಡಿರುವ ವೈಜ್ಞಾನಿಕ ಮತ್ತು ಆಧುನಿಕ ಮೂಲಸೌಕರ್ಯವಿದ್ದು, 2000 ಜನರನ್ನು ಪ್ರಾಣಿಗಳ ಆರೈಕೆಗಾಗಿ ನೇಮಿಸಿಕೊಳ್ಳಲಾಗಿದೆ.
ಅಲ್ಲದೆ ಕೊಲ್ಲಲು ಉದ್ದೇಶಿಸಿರುವ ಪ್ರಾಣಿಗಳನ್ನು ಜೀವಮಾನವಿಡೀ ಪಾಲನೆ ಮಾಡಲು ಅಥವಾ ಅವುಗಳಿಗೆ ತಾತ್ಕಾಲಿಕ ಆಶ್ರಯ ನೀಡಲು ವಂತಾರಾ ಪ್ರತಿಷ್ಠಾನ ಸಿದ್ಧವಾಗಿದೆ. ಪ್ರಾಣಿಗಳನ್ನು ರಕ್ಷಿಸುವಲ್ಲಿ ವಂತಾರಾ ಪ್ರತಿಷ್ಠಾನವು ಉತ್ತಮ ಹೆಸರು ಗಳಿಸಿದೆ. ಕೊಲ್ಲಲು ಉದ್ದೇಶಿಸಿರುವ ಪ್ರಾಣಿಗಳಿಗೆ ನಾವು ಆಶ್ರಯ ನೀಡುತ್ತೇವೆ ಮತ್ತು ಅವುಗಳಿಗೆ ಬದುಕಲು ಹೊಸ ಅವಕಾಶ ನೀಡುತ್ತೇವೆ. ಪ್ರಾಣಿ ಹತ್ಯೆಯ ಬದಲು ಪರ್ಯಾಯ ಮಾರ್ಗಗಳನ್ನು ಅನುಸರಿಸುವ ಮೂಲಕ ದೇಶದ ಅಮೂಲ್ಯ ವನ್ಯಜೀವಿಗಳನ್ನು ರಕ್ಷಿಸಲು ನಮೀಬಿಯಾ ಸರ್ಕಾರದೊಂದಿಗೆ ಕೈಜೋಡಿಸಲು ಪ್ರತಿಷ್ಠಾನವು ಆಶಿಸುತ್ತದೆ. ದಯವಿಟ್ಟು ನಮ್ಮ ತಂಡ ಸಿದ್ಧಪಡಿಸಿರುವ ವಿವಿಧ ಆಯ್ಕೆಗಳು ಮತ್ತು ಪ್ರಸ್ತಾವನೆಗಳನ್ನು ಪರಿಶೀಲಿಸಿ ಮತ್ತು ಪರಿಗಣಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಯಾವೆಲ್ಲಾ ಪ್ರಾಣಿಗಳ ಕೊಲೆ?
ಆನೆಗಳ ಜೊತೆಗೆ, 30 ಹಿಪ್ಪೋಗಳು, 60 ಎಮ್ಮೆಗಳು, 50 ಇಂಪಾಲಾಗಳು, 100 ನೀಲಿ ಕಾಡುಕೋಣಗಳು, 300 ಜೀಬ್ರಾಗಳು ಮತ್ತು 100 ಎಲ್ಯಾಂಡ್‌ಗಳನ್ನು ಕೊಲ್ಲಲು ಯೋಜಿಸಿದೆ. ವೃತ್ತಿಪರ ಬೇಟೆಗಾರರು ಮತ್ತು ಸರ್ಕಾರದಿಂದ ಗುತ್ತಿಗೆ ಪಡೆದ ಕಂಪನಿಗಳು ಈಗಾಗಲೇ 157 ಪ್ರಾಣಿಗಳನ್ನು ಬೇಟೆಯಾಡಿ, 56,800 ಕೆಜಿ ಮಾಂಸವನ್ನು ಜನರಿಗೆ ನೀಡಲಾಗಿದೆ.
ಏನಿದು ಬೀಕರ ಬರಗಾಲ?
ದಕ್ಷಿಣ ಆಫ್ರಿಕಾವು ಪ್ರಸ್ತುತ ದಶಕಗಳಲ್ಲಿ ಅತ್ಯಂತ ಭೀಕರ ಬರವನ್ನು ಅನುಭವಿಸುತ್ತಿದೆ. ವಿಶ್ವಸಂಸ್ಥೆಯು ವರದಿ ಮಾಡಿದಂತೆ ಜುಲೈನಲ್ಲಿ ನಮೀಬಿಯಾ ಸಂಗ್ರಹಿಸಿಟ್ಟಿದ್ದ ಮೀಸಲು ಆಹಾರದಲ್ಲಿ 84% ರಷ್ಟು ಆಹಾರ ಖಾಲಿಯಾಗಿದೆ. ನಮೀಬಿಯಾದ ಜನಸಂಖ್ಯೆಯ ಅರ್ಧದಷ್ಟು ಜನರು ಮುಂಬರುವ ತಿಂಗಳುಗಳಲ್ಲಿ ಭಾರೀ ಆಹಾರದ ಸಮಸ್ಯೆ ಎದುರಿಸಬಹುದು. ಪರಿಸರ ಸಚಿವಾಲಯವು ಕೂಡಲೇ ಮಧ್ಯಪ್ರವೇಶಿಸದಿದ್ದರೆ ಭೀಕರ ಬರಗಾಲವು ಮಾನವ-ವನ್ಯಜೀವಿ ಸಂಘರ್ಷವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿತ್ತು.