Ettina Hole Scheme: ಗೌರಿ ಹಬ್ಬದಂದೇ ‘ಎತ್ತಿನ ಹೊಳೆ ಯೋಜನೆ’ ಉದ್ಘಾಟನೆ – ಏನಿದು ಯೋಜನೆ?

ಎಲ್ಲಿಂದ ಎಲ್ಲಿಗೆ ಹೋಗುತ್ತೆ ನೀರು, ಆದ ಖರ್ಚೆಷ್ಟು?

Ettina Hole Scheme: ಬಹುನಿರೀಕ್ಷಿತ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಏತ ಕಾಮಗಾರಿಗಳ ಪೂರ್ವ ಪರೀಕ್ಷಾರ್ಥ ಕಾರ್ಯಾಚರಣೆ ಕೆಲವು ದಿನಗಳ ಹಿಂದಷ್ಟೇ ಉಪಮುಖ್ಯಮಂತ್ರಿ ಡಿಕೆಶಿ(D K Shivkumar) ಅವರ ಉಪಸ್ಥಿತಿಯಲ್ಲೆ ಯಶಸ್ವಿಯಾಗಿ ನೆರವೇರಿದೆ. ಅಲ್ಲದೆ ಬರುವ ಗೌರಿ ಹಬ್ಬದ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಯೋಜನೆಗೆ ಅಧಿಕೃತವಾಗಿ ಚಾಲನೆಯನ್ನೂ ನೀಡಲಿದ್ದಾರೆ. ಹಾಗಾದರೆ ಏನಿದು ಎತ್ತಿನ ಹೊಳೆ ಯೋಜನೆ?(Ettinahole Scheme)ಸರ್ಕಾರ ಇದಕ್ಕೆ ಇಷ್ಟೊಂದು ಗಮನ ನೀಡುತ್ತಿರುವುದು ಯಾಕೆ? ಇದರ ಕಾರ್ಯಸಾಧನೆ ಹೇಗಾಯಿತು? ಎಲ್ಲಾ ಡೀಟೇಲ್ಸ್ ಇಲ್ಲಿದೆ.

ಹೌದು, ಹತ್ತು ಹಲವು ಕಾರಣಗಳಿಂದಲೂ ವಿವಾದಕ್ಕೆ ಗುರಿಯಾಗಿ ಸುದ್ದಿಯಲ್ಲಿರುವ ಏತ ನೀರಾವರಿ, ಬಯಲು ಸೀಮೆ ಜನತೆಯ ನೀರಿನ ದಾಹ ನೀಗಿಸುವ ಉದ್ದೇಶದಿಂದ ನಿರ್ಮಿಸಿರುವ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಗೆ ಗೌರಿ ಹಬ್ಬದ ದಿನವೇ (ಸೆಪ್ಟೆಂಬರ್​ 6) ಚಾಲನೆ ಸಿಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಯೋಜನೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಬಳಿಕ 7 ವಿಯರ್​​ಗಳ ಮೂಲಕ ನೀರು ಹರಿಸಲಾಗುತ್ತದೆ.

ಏನಿದು ಈ ಯೋಜನೆ?
ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸುವ ಯೋಲಜನೆ ಇದಾಗಿದೆ. ಹಾಸನದ ಸಕಲೇಶಪುರ(Sakaleshapura) ತಾಲೂಕಿನ ಪಶ್ವಿಮ ಘಟ್ಟದ ಮೇಲ್ಭಾಗದಲ್ಲಿ ಹರಿಯುವ ಕಾಡುಮನೆ ಹೊಳೆ, ಎತ್ತಿನ ಹೊಳೆ, ಕೇರಿ ಹೊಳೆ ಮತ್ತು ಹೊಂಗದಹಳ್ಳದಿಂದ ನೀರು ತರುವ ಯೋಜನೆಯಾಗಿದೆ. ಮುಂಗಾರು ಮಳೆಯ ಸಂದರ್ಭದಲ್ಲಿ ಅಂದರೆ 139 ದಿನಗಳಲ್ಲಿ 24.01 ಟಿಎಂಸಿ ನೀರನ್ನು ಬಯಲು ಸೀಮೆ ಜಿಲ್ಲೆಗಳಿಗೆ ಹರಿಸಲಾಗುತ್ತದೆ. ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ನೀರು ತರುವುದಾಗಿದೆ.

ಪಶ್ಚಿಮ ಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ (139 ದಿನಗಳು) 24.01 ಟಿಎಂಸಿ ಪ್ರಮಾಣದ ಪ್ರವಾಹದ ನೀರನ್ನು 7 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶದ ಹಾಗೂ 6,657 ಗ್ರಾಮಗಳ ಸುಮಾರು 75.59 ಲಕ್ಷ (Projected Population For 2023-24) ಜನರಿಗೆ ಮತ್ತು ಜಾನುವಾರುಗಳಿಗೆ 14.056 ಟಿ.ಎಂ.ಸಿ ಕುಡಿಯುವ ನೀರನ್ನು ಒದಗಿಸುವುದಾಗಿದೆ. ಅಲ್ಲದೆ ಅಲ್ಲದೆ ಈ ಜಿಲ್ಲೆಗಳ ವ್ಯಾಪ್ತಿಗೆ ಬರುವ 527 ಕೆರೆಗಳಿಗೆ 9ಕ್ಕೂ ಅಧಿಕ ಟಿಎಂಸಿ ಪ್ರಮಾಣದ ನೀರನ್ನು ಕೆರೆಗಳ ಸಾಮರ್ಥ್ಯದ ಶೇ 50ರಷ್ಟು ತುಂಬಿಸಿ ಅಂತರ್ಜಲ ವೃದ್ದಿಸುವುದು ಸಹ ಈ ಯೋಜನೆಯ ಉದ್ದೇಶವಾಗಿದೆ.

ರಾಜ್ಯದ ಬೃಹತ್ ನೀರಾವರಿ ಯೋಜನೆ:
ಈ ಯೋಜನೆಗಾಗಿ ಒಟ್ಟು ನಾಲ್ಕು ಭಾಗಗಳಾಗಿ ವಿಭಾಗ ಮಾಡಲಾಗಿದೆ. ನೀರೆತ್ತೋ ತೊಟ್ಟಿಗಳು, ಗುರುತ್ವ ಕಾಲುವೆ, ಸಮತೋಲನ ಜಲಾಶಯ ಮತ್ತು ಪೈಪ್ ಲೈನ್​ಗಳಾಗಿ ನಾಲ್ಕು ಭಾಗಮಾಡಿ ಯೋಜನೆ ಜಾರಿ ಮಾಡಲಾಗುತ್ತಿದೆ. ಇದಕ್ಕಾಗಿ ಒಟ್ಟು ಎಂಟು ಜಲ ಮೂಲಗಳಿಂದ ನೀರು ಹರಿಸಲು ಎಂಟು ಪೈಪ್ ಲೈನ್ ಮಾಡಲಾಗಿದೆ.

9 ಪಂಪ್ ಹೌಸ್, 8 ಸಬ್ ಸ್ಟೇಷನ್ ಮೂಲಕ ಈ ಯೋಜನೆಯ ನೀರು ಹರಿಯುತ್ತೆ. ಒಟ್ಟು 261 ಕಿ.ಮೀ ಈ ಯೋಜನೆಯಲ್ಲಿ ನೀರು ಹರಿಯೋ ಕಾಲುವೆಯ ಉದ್ದವಾಗಿದ್ದು ಈಗಾಗಲೆ ಮೂಲದಿಂದ ಸುಮಾರು 42 ಕಿ.ಮೀ ಅಂದರೆ ಬೇಲೂರು ತಾಲ್ಲೂಕಿನ ಐದಳ್ಳ ಕಾವಲುವೆರೆಗೂ ನೀರು ಸರಾಗವಾಗಿ ಹರಿಯಲು ಬೇಕಾದ ಕಾಮಗಾರಿ ಮುಗಿದಿದೆ. ಆದರೆ ಐದಳ್ಳ ಕಾವಲು ಬಳಿ ಐದು ಕಿಲೋಮೀಟರ್ ಅರಣ್ಯ ಭೂಮಿಯಲ್ಲಿ ಕಾಲುವೆ ಹೋಗಬೇಕಿರುವುದರಿಂದ ಅಲ್ಲಿ ಕಾಮಗಾರಿ ಆಗದೇ 32ನೇ ಕಿ.ಮೀನಲ್ಲಿ ನೀರನ್ನ ಬೇರೆಡೆ ತಿರುಗಿಸಿ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರದತ್ತ ಹರಿಸಲಾಗುತ್ತಿದೆ.

ಸುರಂಗ, ಪೈಪ್ ಲೈನ್ ಗುರುತ್ವ ಬಲದಿಂದ ಹರಿಯಲಿದೆ ನೀರು
ಮಾಹಿತಿ ಪ್ರಕಾರ 2027ರ ವೇಳೆಗೆ ಈ ಯೋಜನೆ ಸಂಪೂರ್ಣ ಮುಗಿದು ಉದ್ದೇಶಿತ ಜಿಲ್ಲೆಗಳಿಗೆ ನೀರು ಹರಿಯಲಿದೆ ಎನ್ನೋ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಎತ್ತಿನಹೊಳೆ ಯೋಜನೆಯ ಒಟ್ಟು ಉದ್ದ 290 ಕಿಲೋಮೀಟರ್. ಅದರಲ್ಲಿ ಗುರುತ್ವಾಕರ್ಷಣೆ ಬಲದ ಮೂಲವೇ 261 ಕಿಲೋಮೀಟರ್ ಅಂದ್ರೆ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಬಳಿಯಿಮದ ದೊಡ್ಡಬಳ್ಳಾಪುರದ ವರೆಗೆ ನೀರು ಹರಿಯಲಿದೆ. ಅದರಲ್ಲಿ 126 ಕಿಲೋಮೀಟರ್ ಪೈಪ್ ಲೈನ್ ಮೂಲಕ ನೀರು ಹರಿದರೆ ಉಳಿದಂತೆ 140 ಕಿಲೋಮೀಟರ್ ನಷ್ಟು ಪ್ರಮಾಣದಲ್ಲಿ ತೆರೆದ ಕಾಲುವೆಗಳ ಮೂಲಕ ನೀರು ಹರಿದು ಗುರಿಮುಟ್ಟಲಿದೆ.

ಇಷ್ಟು ದೊಡ್ಡ ಯೋಜನೆಯಲ್ಲಿ ಈಗ 162 ಕಿಲೋಮೀಟರ್ ಕಾಲುವೆ ಕೆಲಸ ಸಂಪೂರ್ಣವಾಗಿ ಮುಗಿದಿದ್ದರೆ, 25 ಕಿಲೋಮೀಟರ್ ಕೆಲಸ ಪ್ರಗತಿಯಲ್ಲಿದೆ. 50 ಕಿಲೋಮೀರ್ ಪ್ರದೇಶದಲ್ಲಿ 19 ಕಿಲೋಮೀಟರ್ ಅರಣ್ಯ ಪ್ರದೇಶದಲ್ಲಿದ್ದು ಆ ಪ್ರದೇಶದ ಕೆಲಸ ಕೂಡ ಬಾಕಿ ಇದ್ದು 502 ಎಕರೆ ಬದಲಿ ಭೂಮಿಯನ್ನ ಕೊಟ್ಟು ಅರಣ್ಯ ಪ್ರದೇಶದಲ್ಲಿ ಕೂಡ ಕೆಲಸ ಶುರುಮಾಡಲು ಪ್ರಯತ್ನ ನಡೆದಿದೆ.

ಯಾವ ಭಾಗಗಳಲ್ಲಿ ಹರಿಯುತ್ತೆ ಈ ನೀರು?
ಹಾಸನ ಜಿಲ್ಲೆಯೊಳಗೆ ಸದ್ಯ 42ನೇ ಕಿಲೋಮೀಟರ್​ವರೆಗೂ ಕೂಡ ನೀರು ಹರಿಯುವಷ್ಟು ಕೆಲಸ ಆಗಿದೆ. ಆದರೆ ಬೇಲೂರು ತಾಲ್ಲೂಕಿನ ಐದಳ್ಳ ಕಾವಲು ಬಳಿ ಅರಣ್ಯ ಪ್ರದೇಶದಲ್ಲಿ ಕೆಲಸ ಆಗಬೇಕಿರುವುದರಿಂದ 32 ಕಿಲೋಮೀಟರ್​ನಿಂದ ನೀರನ್ನ ಬೇರೆಡೆ ತಿರುಗಿಸಿ ಅಲ್ಲಿಂದ 132 ಕಿಲೋಮೀಟರ್ ದೂರದಲ್ಲಿರುವ ವಾಣಿವಿಲಾಸ ಸಾಗರಲ್ಲಿ ನೀರು ಹರಿಸಲಾಗುತ್ತಿದೆ. ಹಳೆಬೀಡು ಕೆರೆ, ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಕೆರೆಗಳ ಮೂಲಕ ನೀರು ವೇದಾ ನದಿಗೆ ಸೇರಿ ಅಲ್ಲಿಂದ ವಾಣಿವಿಲಾಸ ಸೇರಲು ಬೇಕಾದ ವ್ಯವಸ್ಥೆಯನ್ನ ಸದ್ಯಕ್ಕೆ ಮಾಡಲಾಗಿದೆ.

ಈ ಮಹತ್ವದ ಯೋಜನೆಯ ಖರ್ಚು ಏಷ್ಟು?
2014ರ ಮಾರ್ಚ್ ರಂದು ಈ ಯೋಜನೆ ಆರಂಭವಾದಾಗ ಇದರ ಅಂದಾಜು ಮೊತ್ತ 8500 ಕೋಟಿ ರೂ. ನಂತರ ಅದು 12 ಸಾವಿರ ಕೋಟಿ ರೂ. ಏರಿತು. ಬಳಿಕ 2023ರ ಜನವರಿಯಂದು ಈ ಯೋಜನೆ ಗಾತ್ರ 23, 251 ಕೋಟಿ ರೂ. ಏರಿಕೆ ಮೂಲಕ ರಾಜ್ಯದ ಅತಿದೊಡ್ಡ ನಿರಾವರಿ ಯೋಜನೆ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗುತ್ತಿದೆ

ಕಾಮಗಾರಿ ಆರಂಭವಾಗಿದ್ದು ಯಾವಾಗ, ಪೂರ್ಣ ಎಂದು?
ಕಾಮಗಾರಿ ಆರಂಭಗೊಂಡಿದ್ದು ಇತ್ತೀಚೆಗಲ್ಲ.. ಹೌದು, 10 ವರ್ಷಗಳ ಹಿಂದೆ 2014ರಲ್ಲಿ. ಆದರೆ ಆರಂಭದಲ್ಲಿ ಸಮಸ್ಯೆಗಳು ಎದುರಾಗಿದ್ದವು. ಏತ ಮತ್ತು ವಿದ್ಯುತ್ ಪೂರೈಕೆಯ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿ ತುಂಬಾ ಅಡಚಣೆಗಳೇ ಉಂಟಾಗಿದ್ದವು. ಜಮೀನು ಸಮಸ್ಯೆಗಳು, ಅರಣ್ಯ ಇಲಾಖೆಯ ಜಮೀನು ಹಸ್ತಾಂತರಕ್ಕೆ ಸಂಬಂಧಿಸಿ ತುಂಬಾ ಸಮಯ ತೆಗೆದುಕೊಂಡಿತು. ಮತ್ತೊಂದು ವಿಶೇಷ ಅಂದರೆ ಅಂದು ಮುಖ್ಯಮಂತ್ರಿ ಆಗಿದ್ದೂ ಸಿದ್ದರಾಮಯ್ಯ ಅವರೇ ಎಂಬುದು ವಿಶೇಷ. ಆದರೆ ಈ ಕಾಮಗಾರಿ ಪೂರ್ಣಗೊಳ್ಳುವುದು 2027ರಲ್ಲಿ. ಈ ವರ್ಷದ ಮಾರ್ಚ್​ 31ಕ್ಕೆ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ.

Leave A Reply

Your email address will not be published.