Belthangady: ನಡು ರಾತ್ರಿ ಗೆಳತಿಯ ಮನೆಗೆ ಹೋಗಿದ್ದ ಯುವಕನನ್ನು ಅಡ್ಡಗಟ್ಟಿ ಅಪರಿಚಿತರಿಂದ ಬ್ಲಾಕ್ಮೇಲ್ – ಬೈಕ್ ಕಿತ್ತುಕೊಂಡು, 2 ಲಕ್ಷಕ್ಕೆ ಡಿಮ್ಯಾಂಡ್ !!

Share the Article

Belthangady : ದ.ಕ (Dakshina Kannada) ಜಿಲ್ಲೆಯಲ್ಲಿ ಆಗಾಗ ಏನಾದರೂ ಒಂದು ಅಹಿತಕರ ಘಟನೆ ನಡೆಯುತ್ತಲೇ ಇರುತ್ತದೆ. ಅಂತೆಯೇ ಇದೀಗ ಬೆಳ್ತಂಗಡಿ ತಾಲ್ಲೂಕಿನ ಕರಾಯದಲ್ಲೊಂದು ಇಂತಹದೇ ಘಟನೆ ಬೆಳಕಿಗೆ ಬಂದಿದೆ.

ಜಿಲ್ಲೆಯ ಬೆಳ್ತಂಗಡಿ(Belthangady) ತಾಲೂಕಿನ ಕರಾಯದ ಬಳಿ ನಡು ರಾತ್ರಿಯಲ್ಲಿ ಗೆಳತಿ ಮನೆಗೆ ಹೋಗಿದ್ದ ಯುವಕನನ್ನು ಅಡ್ಡಗಟ್ಟಿ ವಿಡಿಯೋ ಮಾಡಿ ಅಪರಿಚಿತರ ತಂಡ ಲೂಟಿಗೈದು, ಬ್ಲಾಕ್ಮೇಲ್ ಮಾಡಿದೆ. ಯುವಕನ ಬಳಿ ಇದ್ದ ಬೈಕ್ ಕಿತ್ತುಕೊಂಡು, ವಿಡಿಯೋ ಮಾಡಿ, ಕಳ್ಳತನದ ಆರೋಪ ಹೊರಿಸಿ 2 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದೆ. ಅಷ್ಟೇ ಅಲ್ಲದೆ 25 ಸಾವಿರ ದೋಚಿದೆ.

ಅಷ್ಟಕ್ಕೂ ಆಗಿದ್ದೇನು?
ಪುತ್ತೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಯುವಕನೊಬ್ಬ ಅಗಸ್ಟ್ 31 ರಂದು ಬೆಳ್ತಂಗಡಿ ತಾಲೂಕಿನ ಕರಾಯದ ಮಸೀದಿ ಬಳಿ ತನ್ನ ಬೈಕ್ ನಿಲ್ಲಿಸಿ ತನ್ನ ಗೆಳತಿಯ ಮನೆಗೆ ಹೋಗಿದ್ದ. ಬಳಿಕ ತನ್ನ ಮನೆಗೆ ಹಿಂದಿರುಗುವ ಸಲುವಾಗಿ ಬೈಕಿನ ಬಳಿಗೆ ಬಂದಾಗ, ಅಪರಿಚಿತರ ತಂಡವೊಂದು ಎದುರಾಗಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.

ನಂತರ ಯುವಕನನ್ನು ಹಿಡಿದುಕೊಂಡು ಸಮೀಪದ ಅಂಗಡಿಯ ಬಳಿಗೆ ಕರೆದೊಯ್ದು, ನೀನು ಯಾರು ? ಯಾಕೆ ಇಲ್ಲಿಗೆ ಬಂದದ್ದು, ? ದರೋಡೆ ಮಾಡಲು ಬಂದಿದ್ದಾ ? ಇಲ್ಲಿ ಮೊದಲು ಆಗಿದ್ದ ದರೋಡೆಯನ್ನು ನೀನೇ ಮಾಡಿದ್ದಾ ? ಎಂದೆಲ್ಲಾ ಪ್ರಶ್ನಿಸಿದ್ದಾರೆ. ಆತ ತಾನು ದರೋಡೆಗೆ ಬಂದವನಲ್ಲ ಎಂದು ತಿಳಿಸಿದರೂ ಕೇಳದೆ, ನಾವು ಜನ ಸೇರಿಸಿ ನಿನಗೆ ಹೊಡೆಯುತ್ತೇವೆ. ದರೋಡೆ ಮಾಡಲು ಯತ್ನಿಸಿದ್ದಾಗಿ ಪೊಲೀಸ್ ಇಲಾಖೆಗೆ ದೂರು ನೀಡುತ್ತೇವೆ ಎಂದೆಲ್ಲಾ ಬೆದರಿಸಿದ್ದಾರೆ.

ಬಳಿಕ ಇಷ್ಟಕ್ಕೆ ಸುಮ್ಮನಾಗದೆ ನೀನು 2 ಲಕ್ಷ ಹಣ ಕೊಟ್ಟರೆ, ನಿನ್ನ ಮೇಲೆ ಕೇಸು ಇಲ್ಲದಾಗೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆಗ ಭಯಗೊಂಡ ಸಂತ್ರಸ್ತ ಯುವಕ ಹಣವನ್ನು ನಾಳೆ ಕೊಡುತ್ತೇನೆಂದು ತಿಳಿಸುತ್ತಾನೆ. ಈ ವೇಳೆ ಅವನೊಂದಿಗಿದ್ದ ಬೈಕ್ ಕೀಯನ್ನು ಪಡೆದು ಹಣ ಕೊಟ್ಟ ಬಳಿಕ ಬೈಕ್ ಅನ್ನು ತೆಗೆದುಕೊಂಡು ಹೋಗೆಂದು ತಾಕೀತು ಮಾಡಿದ್ದಾರೆ. ಪೊಲೀಸರಿಗೆ ದೂರು ನೀಡಲು ಹೋದರೆ ನಿನ್ನ ಮೇಲೆ ಬೇರೆಯೇ ಕೇಸು ದಾಖಲಿಸಿ ಒಳಗೆ ಹಾಕಿಸುತ್ತೇವೆ ಎಂದು ಯುವಕನಿಗೆ ಬೆದರಿಕೆಯೊಡ್ಡಿದ್ದಾರೆ.

ನಂತಲ ಹಣ ನೀಡಲು ಆರೋಪಿಯು ತನ್ನ ಮೊಬೈಲ್ ನಂಬ್ರವನ್ನು ಯುವಕನಿಗೆ ನೀಡಿ ಬೆದರಿಸಿದ್ದಾರೆ. ಬೆದರಿದ ಸಂತ್ರಸ್ಥ ಯುವಕ ಆರೋಪಿಯು ನೀಡಿದ ಸ್ಕ್ಯಾನರ್ ಗೆ 2000 ರೂ. ಹಾಗೂ 23,000 ರೂ. ದಂತೆ ಒಟ್ಟು 25 ಸಾವಿರ ರೂಪಾಯಿ ಹಣವನ್ನು ಜಮಾ ಮಾಡಿದ್ದಾನೆ. ಇಷ್ಟಕ್ಕೂ ಸುಮ್ಮನಾಗದ ಗೂಂಡಾಗಳು ಉಳಿದ 1,75,000ರೂ. ವನ್ನು ಮುಂದಿನ 5 ದಿನಗಳಾವಧಿಯಲ್ಲಿ ಪಾವತಿಸಬೇಕು ಹಾಗೂ ಬೈಕ್ ದಾಖಲೆಗಳನ್ನು ಒದಗಿಸಬೇಕೆಂದು ಅವಾಜ್ ಹಾಕಿದ್ದಾರೆ.

ಇದರಿಂದ ಕಂಗೆಟ್ಟ ಯುವಕ ಎಲ್ಲದಕ್ಕೂ ಒಪ್ಪಿ, ಬಳಿಕ ಬಂದು ಗೆಳೆಯರೊಡನೆ ಈ ವಿಚಾರ ಚರ್ಚಿಸಿದ್ದಾನೆ. ಅವರೆಲ್ಲರೂ ಧೈರ್ಯ ತುಂಬಿ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಮುರಿಯಾಳ ಮನೆ ನಿವಾಸಿ ಅಬ್ದುಲ್ ಖಾದರ್ ಎಂಬವರ ಮಗ ಸಂಶು ಯಾನೆ ಸಂಶುದ್ದೀನ್ (38) ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಇದೀಗ ಆತನ ಸಂಗಡಿಗರಿಗೆ ಪೋಲೀಸರು ಬಲೆ ಬೀಸಿದ್ದಾರೆ.

Leave A Reply

Your email address will not be published.