Bellary jail high drama: ದರ್ಶನ್’ರನ್ನೇ ಮದುವೆ ಆಗ್ತಿನಿ: ಜೈಲೆದುರು ವಿವಾಹಿತೆಯ ಹೈಡ್ರಾಮಾ: ಅಭಿಮಾನಿಗಳಿಗೆ ಸಿಕ್ಕಳು ಹೊಸ ಅತ್ತಿಗೆ!

Bellary jail high drama: ನೀವು ಒಪ್ಪಿ ಅಥವಾ ಬಿಡಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ಜನರಿಗೆ ಇರುವ ಕ್ರೇಜ್ ಅಷ್ಟಿಷ್ಟಲ್ಲ. ಅದರಲ್ಲೂ ನಟ ದರ್ಶನ್ ರೇಣುಕಾ ಸ್ವಾಮಿಯ ಕೊಲೆ ಕೇಸಿನಲ್ಲಿ ಅಂದರ್ ಆದ ನಂತರ ದರ್ಶನ್ ಬಗೆಗಿನ ಕ್ರೇಜ್ ವಿಚಾರಗಳು ಒಂದೊಂದೇ ಹೊರಬರುತ್ತಿವೆ. ದಿನದಿಂದ ದಿನಕ್ಕೆ ನಟ ದರ್ಶನ್ ಅವರ ಸ್ಟಾರ್ ವ್ಯಾಲ್ಯೂ ಹೆಚ್ಚಾಗುತ್ತಿದೆ. ದರ್ಶನ್ ರ ಹಳೆಯ ಚಿತ್ರಗಳು ಹೊಸ ರೂಪ ಪಡೆದುಕೊಂಡು ತೆರೆ ಕಾಣಲು ಸಿದ್ಧವಾಗುತ್ತಿವೆ. ಈ ಮಧ್ಯೆ ದರ್ಶನ್ ಅವರನ್ನು ಮದುವೆಯಾಗಲು ಮಹಿಳೆ ಒಬ್ಬಳು ತುದಿಗಾಲಿನಲ್ಲಿ ನಿಂತಿದ್ದಾಳೆ.

ಹೌದು, ದರ್ಶನ್ ಅಭಿಮಾನಿಗಳಿಗೆ ಮತ್ತೊಬ್ಬಳು ಅತ್ತಿಗೆ ಸಿಕ್ಕಿದ್ದಾಳೆ. ದರ್ಶನ್ ನನಗಿಷ್ಟ, ಅವರನ್ನ ಮದುವೆ ಆಗ್ತಿನಿ ಅಂತ ವಿವಾಹಿತ ಮಹಿಳೆಯೋರ್ವಳು ಬಳ್ಳಾರಿ ಜೈಲು ಎದುರು ಹೈ ಡ್ರಾಮ ಮಾಡಿದ್ದಾಳೆ. ಈಕೆ ಮೂಲತಃ ಕಲಬುರಗಿಯವಳು. ಬೆಂಗಳೂರಿನಲ್ಲಿ ವಾಸವಾಗಿದ್ದಾಳೆ. ಈಕೆ ಹೆಸರು ಲಕ್ಷ್ಮಿ. ಅದಾಗಳೇ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಇರುವಾಗ ಭೇಟಿ ಮಾಡಲು ಪ್ರಯತ್ನ ಪಟ್ಟಿದ್ದಳು. ಆದರೆ ಭೇಟಿಗೆ ಆದಾರ್ ಕಾರ್ಡ್ ಬೇಕು ಎಂದು ಪೊಲೀಸರು ಆಕೆಯನ್ನು ಸಾಗ ಹಾಕಿದ್ರು. ಇದೀಗ ಬಳ್ಳಾರಿಗೆ ಜೈಲಿಗೆ ಶಿಫ್ಟ್ ಆದ ನಂತರ ಈಕೆ ಬಳ್ಳಾರಿ ಜೈಲಿನ ಮುಂದೆ ಪ್ರತ್ಯಕ್ಷವಾಗಿದ್ದಾಳೆ. ಥೇಟ್ ಪತ್ನಿಯ ಹಾಗೆ ಕವರ್‌ನಲ್ಲಿ ತನ್ನ ಭಾವಿ ಗಂಡನಿಗೆ ಒಂದಷ್ಟು ಹಣ್ಣುಗಳನ್ನು ತಂದು ನಟ ದರ್ಶನ್ ಭೇಟಿಗೆ ಅವಕಾಶಕ್ಕೆ ಜೈಲು ಮುಂಭಾಗ ಬಂದು ಜೈಲು ಸಿಬ್ಬಂದಿ ಜೊತೆ ಕಿರಿಕ್ ಮಾಡಿದ್ದಾಳೆ.
ಅವತ್ತು ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಈಗ ಹಟಬಿಡದ ಮಹಿಳೆ ಬಳ್ಳಾರಿ ಜೈಲಿನಲ್ಲಾದರೂ ತನಗೆ ದರ್ಶನ್ ರ ದರ್ಶನ ಭಾಗ್ಯ ಕೊಡಿಸಿ ಎಂದು, ಬರುವಾಗ ಮರೆಯದೆ ಆಧಾರ್ ಕಾರ್ಡ್ ಸಮೇತ ಬಂದಿದ್ದಾಳೆ. ಬಹುಶಃ ಸಿದ್ದರಾಮಯ್ಯನವರ ಕೃಪೆಯಿಂದ ಉಚಿತ ಟಿಕೆಟ್ ನಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಕೆಂಪು ಬಸ್ ಹತ್ತಿ ಬಂದಿರಬೇಕು.
ದರ್ಶನ್ ನೋಡಲು ಸಂಬಂಧಿಗಳಿಗೆ ಮಾತ್ರ ಅವಕಾಶ ಅಂತಿದ್ದಾರೆ. ಹಾಗಾದ್ರೆ ನಾನು ಮದುವೆ ಆಗೋದಕ್ಕೂ ರೆಡಿಯಾಗಿ ಬಂದಿರುವೆ ಎಂದು ಲಕ್ಷ್ಮಿ ಶಾಕಿಂಗ್ ಹೇಳಿಕೆ ನೀಡಿದ್ದಾಳೆ. ವಿಜಯಲಕ್ಷ್ಮಿ ತರ ನಾನೂ ಮದುವೆ ಆಗ್ತೀನಿ, ನನಗೆ ದರ್ಶನ್ ಅಂದರೆ ಇಷ್ಟ. ಪರಪ್ಪನ ಅಗ್ರಹಾರಕ್ಕೆ ಹೋದರೆ ಅಲ್ಲಿ ನೋಡಲು ಬಿಡಲಿಲ್ಲ. ಈಗ ಇಲ್ಲಿಗೆ ಬಂದಿರುವೆ, ಮಾತನಾಡದೆ ಇದ್ದರೂ ಅವರನ್ನು ನೋಡಿ ಹಣ್ಣು ಕೊಟ್ಟು ಹೋಗುವೆ ಎಂದು ಪಟ್ಟು ಹಿಡಿದು ಕೂತಿದ್ದ ಲಕ್ಷ್ಮಿಯನ್ನು ಕೊನೆಗೆ ಮನವೊಲಿಸಿ ಜೈಲು ಸಿಬ್ಬಂದಿ ಮರಳಿ ಕಳುಹಿಸುವಷ್ಟರಲ್ಲಿ ‘ಉಸ್ಸಪ್ಪಾ’ ಎಂದಿದ್ದಾರೆ.