Amavasye: ಈ ದಿನ ಬಂದಿದೆ ವಿಶೇಷ ಅಮವಾಸ್ಯೆ: ಅವಣಿ ಅಮಾವಾಸ್ಯೆ ಅಂದರೇನು?
Amavasye: ವರ್ಷದ ಪ್ರತೀ ತಿಂಗಳು ಅಮವಾಸ್ಯೆ(Black moon day) ಬರುತ್ತದೆ. ಆದರೆ ಒಂದೊಂದು ತಿಂಗಳು ಬರುವ ಅಮಾವಸ್ಯೆಗೆ(Amavasye) ಅದರದ್ದೇ ಆದ ವಿಶೇಷತೆ ಇರುತ್ತದೆ. ಈ ಬಾರಿ ಭಾದ್ರಪದ ಅಮಾವಾಸ್ಯೆ 02.09.2024, ಸೋಮವಾರ(Monday) ಬಂದಿದೆ. ಇದನ್ನು ಸೋಮಾವತಿ ಅಮಾವಾಸ್ಯೆ ಅಥವಾ ಅವಣಿ ಅಮಾವಾಸ್ಯೆ ಎಂದು ಕರೆಯುತ್ತಾರೆ.
ಸಿಂಹ ರಾಶಿಯಲ್ಲಿ ಸೂರ್ಯ ಹಾಗೂ ಚಂದ್ರ ಒಟ್ಟಿಗೆ ಚಲಿಸಿದಾಗ ಅಮಾವಾಸ್ಯೆ ಉಂಟಾಗುತ್ತದೆ. ಆದರೆ ಈ ಅವನಿ ಅಮವಾಸ್ಯೆಯಂದು ಚಂದ್ರನು ತನ್ನ ಸ್ಥಾನದಲ್ಲಿ ಇದ್ದುಕೊಂಡು ಸೂರ್ಯನನ್ನು ಸಂಧಿಸುವ ದಿನವಾಗಿದೆ. ಈ ಬಾರಿಯ ಅಮವಾಸ್ಯೆಗೆ ಸೋಮಾವತಿ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಯಾಕೆಂದರೆ ಈ ವರ್ಷ ಆವಣಿ ಮಾಸದ ಅಮಾವಾಸ್ಯೆ ಸೋಮವಾರ ಬಂದಿದೆ. ತೆಲುಗಿನವರು ಇದನ್ನು ಸೋಮ ಅಮಾವಾಸ್ಯೆ ಅಂತಾರೆ. ಇನ್ನು ಕೆಲವರು ಇದನ್ನು ಅವನಿ ಅಮಾವಾಸ್ಯೆ ಅಂತನೂ ಹೇಳ್ತಾರೆ.
ಸೋಮ ಅಮಾವಾಸ್ಯೆ ತಿಥಿ, ಸೆ.2. 2024, ಸೋಮವಾರ ಬೆಳಿಗ್ಗೆ 05:21ಗೆ ಆರಂಭಗೊಂಡು ಮಂಗಳವಾರ ಬೆಳಗ್ಗೆ 7:24 ಕ್ಕೆ ಮುಕ್ತಾಯವಾಗುತ್ತದೆ. ಸಾಮಾನ್ಯವಾಗಿ ಈಶ್ವರನನ್ನು ಅಮವಾಸ್ಯೆಯಂದೂ, ದೇವಿಯನ್ನು ಹುಣ್ಣಿಮೆಯ ದಿನಗಳಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ. ಹಾಗೆ ಅಮವಾಸ್ಯೆಯ ದಿನ ಪಿತೃದೇವತೆಗಳಿಗೆ ತರ್ಪಣ ಬಿಡುವುದು ಇದೆ. ಅಂದು ಸತ್ತ ನಮ್ಮ ಪೂರ್ವಜರಿಗೆ ತರ್ಪಣೆ ಬಿಟ್ಟರೆ, ಪಿತೃ ದೋಷ ನಿವಾರಣೆಯಾಗುತ್ತೆ ಅನ್ನೋದು ನಂಬಿಕೆ. ಈ ಬಾರಿಯ ಅಮವಾಸ್ಯೆ ಶಿವನ ಆರಾಧನೆಗೆ ಅತ್ಯಂತ ಪ್ರಶಸ್ತವಾದ ದಿನ. ಅಮವಾಸ್ಯೆಯು ಬೆಳಿಗ್ಗೆ 5 ಗಂಟೆಗೆ ಆರಂಭವಾಗುವ ಕಾರಣ ತರ್ಪಣವನ್ನು ಮಧ್ಯಾಹ್ನದ ಮೊದಲು ಬಿಡಬಹುದು. ಸೋಮಾವತಿ ಅಮವಾಸ್ಯೆಯಂದು ತಮ್ಮ ಅನುಕೂಲಕ್ಕೆ ತಕ್ಕಂತೆ ದಾನ, ಧರ್ಮಗಳನ್ನು ಮಾಡಬಹುದು. ಅಮವಾಸ್ಯೆಯ ದಿನ ದಾನಗಳನ್ನು ಮಾಡೋದ್ರಿಂದ ಪುಣ್ಯಗಳು ಲಭಿಸುತ್ತವೆ ಅನ್ನು ನಂಬಿಕೆ ಕೂಡ ಇದೆ.