Most Deadly animal: ಭೂಮಿಯಲ್ಲಿರುವ ಅತ್ಯಂತ ಕ್ರೂರ ಜೀವಿ ಯಾವುದು? ಮನುಷ್ಯನಾ ಅಥವಾ ಸೊಳ್ಳೆನಾ?
Most Deadly animal: ಗೆಳೆಯರೇ, ಈ ಭೂ ಮಂಡಲದಲ್ಲಿ ಎಷ್ಟೆಲ್ಲಾ ಜೀವಿಗಳು ಇವೆ ಹೇಳಿ. ಸಾವಿರ? ಲಕ್ಷ? ಕೋಟಿ? ಎನಿಸಬಹುದೇ ಹೇಳಿ. ಅಸಾಧ್ಯ. ಜನರ ಕಣ್ಣಿಗೆ ಇದುವರೆಗೂ ಸಿಗದ ಜೀವಿಗಳು ಎಷ್ಟೋ ಇವೆ. ಈ ಎಲ್ಲಾ ಜೀವಿಗಳು ಮನುಷ್ಯನಿಗೆ ಪ್ರಾಣಹಾನಿ ಮಾಡಬಹುದೇ? ಎಂಬ ಪ್ರಶ್ನೆ ನಿಮ್ಮಲ್ಲಿಯೂ ಮೂಡಬಹುದು. ಆದರೆ ಈ ಪ್ರಶ್ನೆಗೆ ಉತ್ತರ ‘ಇಲ್ಲ’ ಎನ್ನಬಹುದು. ಹಾಗಂತ ಮನುಷ್ಯನಿಗೆ ಬೇರೆ ಪ್ರಾಣಿಗಳು ಹಾನಿ ಮಾಡುವುದೇ ಇಲ್ಲ ಎಂದಲ್ಲ. ಹೆಚ್ಚಾಗಿ ಮಾನವ ಹತ್ತಿರದಿಂದ ನೋಡುವ ಪ್ರಾಣಿಗಳೇ ಹಾನಿ ಮಾಡುವುದು ಸಂಶೋಧನೆಯಿಂದ ಬಯಲಾಗಿದೆ. ಹಾಗಾದರೆ ಪ್ರಪಂಚದ 10 ಅಪಾಯಕಾರಿ ಜೀವಿಗಳ ಬಗ್ಗೆ ತಿಳಿಯೋಣ ಬನ್ನಿ.
1. ಸಿಂಹ
ಕಾಡಿನ ರಾಜ ಎಂದು ಬಿರುದನ್ನು ಪಡೆದಿರುವ ಸಿಂಹ ವರ್ಷಕ್ಕೆ ಸರಾಸರಿಯಾಗಿ 200 ಜನರನ್ನು ಬಲಿ ಪಡೆಯುತ್ತದೆ ಎಂದು ವರದಿಯಾಗಿದೆ. ಈ ಪ್ರಾಣಿಯ ಬಗ್ಗೆ ನಿಮಗೆ ಹೆಚ್ಚು ಹೇಳಬೇಕಾಗಿಲ್ಲ. ಆಫ್ರಿಕಾ ಭಾಗದಲ್ಲಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕೆಲವು ಜನರು ಕಾಡಿಗೆ ಹೋದಾಗ ಸಿಂಹದಿಂದ ಬೇಟೆಯಾಡಲ್ಪಡುತ್ತಾರೆ. ಹೀಗಾಗಿ ಸಿಂಹ ಅಪಾಯಕಾರಿ ಪ್ರಾಣಿಗಳ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದೆ.
2. ನೀರಾನೆ
ನೀರಾನೆ ನೋಡಲು ಸಾಧು ಪ್ರಾಣಿಯಂತೆ ತೋರುತ್ತದೆ. ಹೀಗಾಗಿ ಕೆಲವರು ಇದನ್ನು ತಪ್ಪಾಗಿ ತಿಳಿದು ಹತ್ತಿರಕ್ಕೆ ಹೋದಾಗ ತನ್ನ ಅಗಲವಾದ ಬಾಯನ್ನು ತೆರೆದು ತನ್ನ 50 ಸೆಂಟಿ ಮೀಟರ್ ಉದ್ದದ ಹಲ್ಲಿನಿಂದ ಒಂದೇ ಕಡಿತಕ್ಕೆ ದೇಹವನ್ನು ಇಬ್ಭಾಗ ಮಾಡುತ್ತದೆ. ನೀರಾನೆ ವರ್ಷಕ್ಕೆ ಸರಾಸರಿಯಾಗಿ 500 ಜನರನ್ನು ಕೊಲ್ಲುವುದಾಗಿ ವರದಿಯಾಗಿದೆ. ಅಪಾಯಕಾರಿ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.
3. ಆನೆ
ಆನೆ ಹಾವಳಿ ಬಗ್ಗೆ ಎಲ್ಲರೂ ಕೇಳಿರುತ್ತೀರ. ತೋಟ – ಗದ್ದೆಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತದೆ. ಒಂಟಿ ಸಲಗವಂತೂ ಆಕ್ರೋಶ ಭರಿತವಾಗಿರುತ್ತದೆ. ಗದ್ದೆಯಲ್ಲಿರುವ ರೈತರನ್ನು, ರಸ್ತೆಯಲ್ಲಿ ವಾಹನ ಸವಾರರ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತದೆ. ಅಪಾಯಕಾರಿ ಪ್ರಾಣಿಗಳ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ಆನೆಗಳು ವಾರ್ಷಿಕವಾಗಿ ಸುಮಾರು 600 ಮಂದಿಯನ್ನು ಕೊಲ್ಲುವುದಾಗಿ ತಿಳಿದುಬಂದಿದೆ.
4. ಮೊಸಳೆ
ನದಿ ತೀರದಲ್ಲಿ ಆಟವಾಡುವ ಮಕ್ಕಳು ನಿಮ್ಮ ಮನೆಯಲ್ಲಿದ್ದರೆ ಎಚ್ಚರಿಸಿ. ಏಕೆಂದರೆ ಅಪಾಯಕಾರಿ ಪ್ರಾಣಿಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಮೊಸಳೆ ವರ್ಷಕ್ಕೆ 1000 ಜನರನ್ನು ಕೊಲ್ಲುವುದಾಗಿ ವರದಿಯಾಗಿದೆ. ಉದ್ದ ಮತ್ತು ಅಗಲವಾದ ಬಾಯಿಯಿರುವ ಈ ಪ್ರಾಣಿ ನೀರಿನಲ್ಲಿ ಮುಳುಗಿ ಹೊಂಚು ಹಾಕಿ ಬೇಟೆಯಾಡುತ್ತದೆ. ಬಲಿಷ್ಠ ಬಾಯಿಯ ಒಂದೇ ಕಡಿತಕ್ಕೆ ದೇಹವನ್ನು ಭಾಗ ಮಾಡಿ ತಿನ್ನಬಹುದಾದ ಶಕ್ತಿ ಮೊಸಳೆಗಿದೆ. ನೈಲ್ ನದಿಯಲ್ಲಿ ಬದುಕುವ ಮೊಸಳೆ ಮತ್ತು ಉಪ್ಪು ನೀರಿನ ಮೊಸಳೆ ಅಪಾಯಕಾರಿ ಮೊಸಳೆ ಎಂಬ ಕುಖ್ಯಾತಿ ಪಡೆದಿದೆ.
5. ಚೇಳು
ಚೇಲನ್ನು ಕಂಡರೆ ಯಾರಿಗೆ ತಾನೆ ಇಷ್ಟ ಹೇಳಿ. ಕಪ್ಪಾದ ಒಣ ಚರ್ಮದ ದೇಹ, ಚೂಪಾದ ಕೊಂಬೆರಳುಗಳು, ವಿಷಕಾರಿ ಬಾಲ. ನೋಡಲು ಏನೋ ಒಂಥರಾ ಕುರೂಪ. ಗಿಡ -ಗಂಟೆಗಳ ನಡುವೆ, ಬಿಲಗಳಲ್ಲಿ ಅಡಗಿ ಕುಳಿತಿರುವ ಚೇಳುಗಳು ಅಪಾಯಕಾರಿ ಪ್ರಾಣಿಗಳಲ್ಲಿ 6ನೇ ಸ್ಥಾನದಲ್ಲಿದೆ. ಮನುಷ್ಯರು ನಡೆದಾಡುವಾಗ ಪ್ರಾಣ ರಕ್ಷಣೆಗಾಗಿ ಬಾಲದಿಂದ ಚುಚ್ಚುತ್ತವೆ. ಇದರಿಂದ ವರ್ಷಕ್ಕೆ 3300 ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೆಚ್ಚಾಗಿ ಆಫ್ರಿಕಾದ ಉತ್ತರ ಭಾಗದ ಸಹರಾ ಮರುಭೂಮಿಯಲ್ಲಿ ಕಂಡುಬರುವ ಚೇಳುಗಳು ಮನುಷ್ಯನ ಪಾಲಿಗೆ ಅಪಾಯಕಾರಿಯಾಗಿದೆ.
6. ಹಂತಕ ತಿಗಣೆಗಳು
ಇದೊಂದು ರೀತಿಯ ತಿಗಣೆಯಾಗಿದೆ. ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸದಿದ್ದರೂ, ಪ್ರಾಣ ರಕ್ಷಣೆಗಾಗಿ ಕಚ್ಚುತ್ತವೆ. ಇದರ ಕಡಿತ ತೀವ್ರ ನೋವನ್ನು ಉಂಟು ಮಾಡುವುದರ ಜೊತೆಗೆ ಚಗಸ್ ಎನ್ನುವ ರೋಗವನ್ನು ಹರಡುತ್ತದೆ. ಇದಕ್ಕೆ ಯಾವುದೇ ಔಷದಿ ಇಲ್ಲ. ಈ ಖಾಯಿಲೆ ಪ್ರಮುಖ ಅಂಗಾಗಳಿಗೆ ಹಾನಿ ಮಾಡಿ ಹಾರ್ಟ್ ಫೇಲ್ಯೂರ್ ಗೂ ಕಾರಣವಾಗುತ್ತದೆ. ಹೀಗಾಗಿ ಈ ಕೀಟ ಅಪಾಯಕಾರಿ ಪ್ರಾಣಿಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇದು ವರ್ಷಕ್ಕೆ ಸುಮಾರು 10000 ಜನರನ್ನು ಬಲಿ ಪಡೆಯುತ್ತದೆ.
7. ನಾಯಿ
ನಾಯಿ ಯಾಕೆ ಈ ಪಟ್ಟಿಯಲ್ಲಿ ಬಂತು ಎಂದು ಯೋಚಿಸುತ್ತಿದ್ದೀರಾ. ಹೌದು ಗೆಳೆಯರೇ. ಮನುಷ್ಯನಿಗೆ ಹತ್ತಿರವಾದ ಪ್ರಾಣಿ ಎಂದರೆ ಅದು ನಾಯಿ. ಮನೆ ಕಾಯಲು ನಾಯಿಯನ್ನು ಬಳಸುವುದು ಹಿಂದಿನ ಕಾಲದಿಂದಲೂ ಬಂದಿರುವ ಪದ್ಧತಿ. ಆದರೆ ಕೆಲವೊಂದು ಬೀದಿ ನಾಯಿಗಳು ಆಹಾರ ಸಿಗದೇ ಇದ್ದಾಗ ಜನರ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿದ ಸುದ್ದಿ ಕೇಳಿರುತ್ತೀರಿ. ಅದಲ್ಲದೇ ಕೆಲವೊಂದು ತಳಿಯ ನಾಯಿಗಳು ತುಂಬಾ ಆಕ್ರೋಶ ಭರಿತ ಹಾಗೂ ಅಪಾಯಕಾರಿಯಾಗಿರುತ್ತದೆ. ಪಿಟ್ ಬುಲ್ಸ್, ಜರ್ಮನ್ ಶೆಪರ್ಡ್, ಅಮೆರಿಕನ್ ಬುಲ್ ಡಾಗ್ ಮೊದಲಾದ ನಾಯಿಗಳನ್ನು ಅಪಾಯಕಾರಿ ನಾಯಿಗಳು ಎಂದು ಗುರುತಿಸಲಾಗಿದೆ. ಕೆಲವು ನಾಯಿಗಳು ಮನೆಯವರ ಮೇಲೆಯೇ ಹಲ್ಲೆ ನಡೆಸಿದ ನಿದರ್ಶನಗಳೂ ಇವೆ. ಸುಮಾರು 59000 ಜನರನ್ನು ನಾಯಿಗಳು ಕೊಲ್ಲುವುದರಿಂದಾಗಿ ಅಪಾಯಕಾರಿ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
8. ಹಾವು
ಸಾಮಾನ್ಯವಾಗಿ ಹಾವು ಎಂದರೆ ಎಲ್ಲರಿಗೂ ಭಯ. ಎಷ್ಟು ಭಯ ಎಂದರೆ ಕೆಲವೊಮ್ಮೆ ಹಗ್ಗವನ್ನು ನೋಡಿ ಹಾವು ಎಂದು ಭಯ ಪಟ್ಟಿರುವ ಅನುಭವ ನಿಮಗೂ ಆಗಿರಬಹುದು ಅಲ್ಲವೇ. ಹಾವುಗಳಲ್ಲಿ ಎಲ್ಲಾ ಹಾವುಗಳು ವಿಷಕಾರಿಗಳಲ್ಲ. ಕೆಲವೊಂದು ಹಾವುಗಳು ಹಲ್ಲಿನಲ್ಲಿ ವಿಷ ಹೊಂದಿದ್ದರೂ ಮನುಷ್ಯರನ್ನು ಕೊಲ್ಲುವಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಆದರೆ ಕೆಲವು ಹಾವುಗಳು ನಿಮಿಷಗಳಲ್ಲಿ ಮನುಷ್ಯನನ್ನು ಕೊಲ್ಲುವಷ್ಟು ಪ್ರಭಾವದ ವಿಷವನ್ನು ಹೊಂದಿರುತ್ತದೆ. ಆಹಾರಕ್ಕಾಗಿ ಮನುಷ್ಯರನ್ನು ಕೊಲ್ಲದಿದ್ದರೂ ಪ್ರಾಣ ರಕ್ಷಣೆಗಾಗಿ ಕಚ್ಚುತ್ತವೆ. ಹಾವು ಕಡಿತದಿಂದ 138000 ಜನ ಸಾಯುವುದರಿಂದಾಗಿ ಹಾವು 3ನೇ ಪಟ್ಟಿಯ ಅಪಾಯಕಾರಿ ಪ್ರಾಣಿಯಾಗಿ ಬೆಳೆದಿದೆ.
9. ಮನುಷ್ಯ
ಮನುಷ್ಯ ಸ್ವಾರ್ಥಿ ಎಂದು ಹೇಳುತ್ತಾರೆ. ಆದರೆ ಎಷ್ಟು ಸ್ವಾರ್ಥಿ ಗೊತ್ತೇ ನಿಮಗೆ. ಎಷ್ಟು ಸ್ವಾರ್ಥಿ ಎಂದರೆ ಮನುಷ್ಯನನ್ನು ಕೊಳ್ಳುವ ಜಗತ್ತಿನ ಎರಡನೇ ಜೀವಿ ಎನ್ನುವ ಕುಖ್ಯಾತಿಯನ್ನು ಮನುಷ್ಯನೇ ಪಡೆದಿದ್ದಾನೆ. ಕಾಡು ಪ್ರಾಣಿಗಳು ತಮ್ಮ ಸಂಗತಿಯನ್ನು ಉಳಿಸಿಕೊಳ್ಳಲು ಜಗಳವಾಡುವುದು ಪ್ರಕೃತಿ ನಿಯಮ. ಆದರೆ ಜನರು ಆಸ್ತಿ, ಅಹಂಕಾರ, ಹಣದಾಸೆಯಿಂದ ಪ್ರತಿ ವರ್ಷ 4 ಲಕ್ಷ ಜನರನ್ನು ಕೊಳ್ಳುವುದು ವರದಿಯಾಗಿದೆ. ಪ್ರತಿ ದಿನ ಕೊಲೆಯ ಸುದ್ದಿ ಕೇಳುವುದು ಸಾಮಾನ್ಯವಾಗಿ ಹೋಗಿಬಿಟ್ಟಿದೆ.
10. ಸೊಳ್ಳೆ
ಸೊಳ್ಳೆ ಬಗ್ಗೆ ಹೇಳಬೇಕಾ. ಗಾತ್ರದಲ್ಲಿ ಚಿಕ್ಕದಾದರೂ ಕೆಲಸ ಬೆಟ್ಟದಷ್ಟು. ಸೊಳ್ಳೆ ಕಚ್ಚಿ ಡೆಂಗೀ, ಚಿಕನ್ ಗುನ್ಯಾ, ಮಲೇರಿಯಾ, ಟೈಫೈಡ್ ಮುಂತಾದ ಮಾರಕ ರೋಗಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವರ್ಷಕ್ಕೆ 7 ಲಕ್ಷದ 25 ಸಾವಿರ ಜನರು ಸೊಳ್ಳೆ ಕಚ್ಚಿ ರೋಗ ಪೀಡಿತರಾಗಿ ಸಾಯುತ್ತಿದ್ದಾರೆ. ಹೀಗಾಗಿ ಸೊಳ್ಳೆ ಪ್ರಪಂಚದ ಅತ್ಯಂತ ಅಪಾಯಕಾರಿ ಜೀವಿಯಾಗಿದೆ.