MUDA Scam case: ಮುಡಾ ನಿವೇಶನ ಹಗರಣ: ಸಿಎಂ ಸಿದ್ದು ಭವಿಷ್ಯ ಇಂದು ನಿರ್ಧಾರ: ತೀರ್ಪು ಏನು?

MUDA Scam case: ರಾಜ್ಯಪಾಲ(Governor) ಥಾವರ್ ಚಂದ್ ಗೆಹ್ಲೋಟ್ ಅವರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ(Prosecution) ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಸಲ್ಲಿಸಿರುವ ಅರ್ಜಿಯ ಮುಂದುವರೆದ ವಿಚಾರಣೆಯನ್ನು ಹೈಕೋರ್ಟ್(High court) ಇಂದು ಕೈಗೆತ್ತಿಕೊಳ್ಳಲಿದೆ. ನ್ಯಾಯಾಲಯ ಯಾವ ತೀರ್ಪು ನೀಡಲಿದೆ ಎಂಬುದರ ಬಗ್ಗೆ ಇಡೀ ರಾಜ್ಯವೇ ತೀವ್ರ ಕುತೂಹಲದಿಂದ ನೋಡುತ್ತಿದೆ. ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ(Congress) ಏನಾಗುತ್ತದೆಯೋ ಎಂಬ ಆತಂಕ ಕಾಡಿದೆ.

 

ತೀರ್ಪು ಮುಖ್ಯಮಂತ್ರಿ ವಿರುದ್ಧ ಬಂದರೆ ಅದನ್ನು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ದರಾಮಯ್ಯ ಪರ ವಕೀಲರು ಸಿದ್ಧತೆಯನ್ನು ಮಾಡಿಕೊಂಡಿದ್ದಾರಂತೆ. ಮತ್ತೊಂದೆಡೆ ಕಾಂಗ್ರೆಸ್ ವರಿಷ್ಠರು ಪಕ್ಷದ ಸರ್ಕಾರವನ್ನು ಉಳಿಸಿಕೊಳ್ಳಲು ಒಂದೆಡೆ ಕಾನೂನು ಹೋರಾಟದ ಜೊತೆಗೆ ಪರ್ಯಾಯ ನಾಯಕತ್ವದ ಬಗ್ಗೆಯೂ ಕಸರತ್ತು ಆರಂಭಿಸಿದೆ. ನ್ಯಾಯಾಲಯದ ಮುಂದುವರೆದ ವಿಚಾರಣೆಗೂ ಮುನ್ನವೇ ಎಐಸಿಸಿ ವರಿಷ್ಠರು ಮುಖ್ಯಮಂತ್ರಿ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನು ಕರೆಸಿ ಸಮಾಲೋಚನೆ ಮಾಡಿದೆ. ನೀವು ನಡೆಸುವ ಕಾನೂನು ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದೆಯಾದರೂ ಸಂಕಷ್ಟ ಸ್ಥಿತಿ ಎದುರಾದರೆ ಸರ್ಕಾರವನ್ನು ಉಳಿಸಿಕೊಳ್ಳಲು ಪರ್ಯಾಯ ಮಾರ್ಗದ ಬಗ್ಗೆ ಯೋಚನೆ ಮಾಡಿದೆ.

ಈ ಉದ್ದೇಶದಿಂದಲ್ಲೇ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ವರಿಷ್ಠರು ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದಾರೆ. ದೆಹಲಿಯ ಭೇಟಿಯ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಪರಮೇಶ್ವರ್, ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಅವರು ಪ್ರತ್ಯೇಕವಾಗಿ ಹಲವು ವಿಚಾರಗಳ
ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ಪಕ್ಷ ಸಂಘಟನೆ ವಿಚಾರವೂ ಪ್ರಸ್ತಾಪವಾಗಿದೆ.

ರಾಜ್ಯಪಾಲರ ನಿರ್ಣಯದ ವಿರುದ್ಧ ವರಿಷ್ಠರು ಮುಖ್ಯಮಂತ್ರಿ ಪರ ನಿಂತಿದ್ದಾರೆ. ನಾನು ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿ. ಪಕ್ಷದಲ್ಲಿ ಯಾವುದೇ ಕೆಲಸಕಾರ್ಯ ವಹಿಸಿದರೂ ಪ್ರಾಮಾಣಿಕವಾಗಿ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ. ನಮ್ಮ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಿರುವ ಎಲ್ಲಾ ವಿಚಾರವನ್ನು ಬಹಿರಂಗವಾಗಿ ಹೇಳಲಾಗದು. ಅದು ಪಕ್ಷದ ಆಂತರಿಕ ವಿಚಾರ ಎಂದು ಹೇಳಿ ಮುನ್ನಡೆದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ತಮ್ಮ ಕುಟುಂಬಕ್ಕೆ 14 ನಿವೇಶನ ಪಡೆದಿರುವುದು ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರ ಕಾಯ್ದೆಯಡಿ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರ ನೀಡಿರುವ ಅಭಿಯೋಜನೆಯನ್ನು ಪ್ರಶ್ನಿಸಿರುವ ಅರ್ಜಿಯು ಹೈಕೋರ್ಟ್ ನ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಮುಂದಿದೆ. ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ಹಿರಿಯ ವಕೀಲರ ಜೊತೆಗೆ ರಾಜ್ಯದ ಘಟಾನುಘಟಿ ನ್ಯಾಯವಾದಿಗಳು ಮುಖ್ಯಮಂತ್ರಿಗಳ ಪರ ಮತ್ತು ವಿರೋಧವಾಗಿ ವಾದ ಮಾಡಿದ್ದಾರೆ.

ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರವಾಗಿ ಸಾಲಿಸಿಟರ್ ಜನರ್ ತುಷಾರ್ ಮೆಹ್ತಾ ಅವರು ಇನ್ನೂ ವಾದ ಮಾಡಬೇಕಿದೆ. ಮುಖ್ಯಮಂತ್ರಿ ಅವರ ಪರ ಸುಪ್ರೀಂ ಕೋರ್ಟಿನ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಅವರು ತಮ್ಮ ಪ್ರಾಸ್ತಾವಿಕ ವಾದ ಮಂಡಿಸಿದ್ದಾರೆ. ಇವರ ಜೊತೆಗೆ ಅರ್ಜಿದಾರರ ಪರವಾಗಿ ಮಾಜಿ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಲಕ್ಷ್ಮೀ ಅಯ್ಯಂಗಾರ್, ರಂಗನಾಥರೆಡ್ಡಿ ಅವರು ವಾದ ಮಾಡಬೇಕಿದೆ.

ವಾದ ಮತ್ತು ಪ್ರತಿ ವಾದವು ಇಂದಿನ ವಿಚಾರಣೆ ಸಂದರ್ಭದಲ್ಲಿ ಮುಗಿದರೆ ನ್ಯಾಯಮೂರ್ತಿಗಳು ಅಂದೇ ತೀರ್ಪು ಪ್ರಕಟಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಒಂದು ವೇಳೆ ವಾದ ಮತ್ತು ಪ್ರತಿವಾದಗಳು ಮುಗಿಯದಿದ್ದರೆ, ನ್ಯಾಯಮೂರ್ತಿಗಳು ಮತ್ತೆ ಮುಂದೂಡುವ ಸಾಧ್ಯತೆ ಇರುತ್ತದೆ. ತೀರ್ಪು ಹೊರ ಬರುವ ಮುನ್ನವೇ ಪ್ರದೇಶ ಕಾಂಗ್ರೆಸ್ ತಮ್ಮ ಪಕ್ಷದ ಶಾಸಕರು, ಸಂಸದರು, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಆ.31ಕ್ಕೆ ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದೆ.

Leave A Reply

Your email address will not be published.