Koragajja Swamy Temple: ಮೈಸೂರಲ್ಲಿ ಪ್ರಸಿದ್ಧವಾಗಿದ್ದ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಗುಡಿಯ ನೆಲಸಮ

Koragajja Swamy Temple: ತುಳುನಾಡಿನ ಕಾರಣಿಕ ದೈವವಾಗಿರುವ ಕೊರಗಜ್ಜ ಸ್ವಾಮಿಯ ಗುಡಿಯನ್ನು ಕೆಡವಿರುವ ಮಾಹಿತಿಯೊಂದು ಮೈಸೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಹೌದು, ಮೈಸೂರು ನಗರದ ಹೊರವಲಯದಲ್ಲಿರುವ ಕೇರ್ಗಳ್ಳಿ ಗ್ರಾಮದಲ್ಲಿ ಕಳೆದ ಕೆಲ ವರ್ಷಗಳಿಂದ ನೆಲೆ ಆಗಿದ್ದ ಕೊರಗಜ್ಜನ ಗುಡಿಯನ್ನು (Koragajja Swamy Temple)  ಕೆಡವಲಾಗಿದೆ. ಮೂಲತಃ 60ರ ದಶಕದಲ್ಲಿ ಇಲ್ಲಿ ಹಾದುಹೋಗಿದ್ದ ರಾಜಕಾಲುವೆಯನ್ನು ಒತ್ತುವರಿ ಮಾಡಿ ಇಲ್ಲಿ ಅಕ್ರಮವಾಗಿ ಗುಡಿ ನಿರ್ಮಿಸಲಾಗಿದೆ ಎಂಬ ದೂರು ಕೇಳಿ ಬಂದಿತ್ತು.

ಈ ಸಂಬಂಧದ ದಾಖಲೆಗಳನ್ನು ಪರಿಶೀಲಿಸಿದ್ದ ಉಪವಿಭಾಗಾಧಿಕಾರಿ ಕೆ.ಆರ್.ರಕ್ಷಿತ್ ಅವರ ಆದೇಶದಂತೆ ತಹಸೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ಅವರು ಜಯಪುರ ಠಾಣೆ ಪೊಲೀಸರ ಭದ್ರತೆಯೊಂದಿಗೆ ಕಾರ್ಯಾಚರಣೆ ಮಾಡಿ ರಾಜ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಕೊರಗಜ್ಜ ದೈವಸ್ಥಾನವನ್ನು ನೆಲಸಮಗೊಳಿಸಿ ತೆರವುಗೊಳಿಸಿದ್ದಾರೆ.

ಈ ಮೊದಲು ಮೈಸೂರಿನ ಹೊರವಲಯದ ಕೇರ್ಗಳ್ಳಿ ಗ್ರಾಮದ ಸರ್ವೆ ನಂಬರ್ 60ರಲ್ಲಿ ಹಾದುಹೋಗಿದ್ದ ರಾಜ ಕಾಲುವೆ ಒತ್ತುವರಿ ಆಗಿದೆ ಎಂಬ ದೂರು ತಾಲೂಕು ಆಡಳಿತಕ್ಕೆ ಬಂದಿತ್ತು. ಅಕ್ರಮವಾಗಿ ದೇವಾಲಯ ನಿರ್ಮಿಸಲಾಗಿದೆ ಎಂಬ ಬಗ್ಗೆ ಸಹ ದೂರು ಇತ್ತು. ಅದರಂತೆ ರಾಜ ಕಾಲುವೆ ಒತ್ತುವರಿ  ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ ಉಪವಿಭಾಗಾಧಿಕಾರಿ ರಕ್ಷಿತ್ ಒತ್ತುವರಿಯಾಗಿರುವ ಬಗ್ಗೆ ಖಚಿತಪಡಿಸಿಕೊಂಡ ನಂತರ ಒತ್ತುವರಿ ತೆರುವುಗೊಳಿಸುವಂತೆ ಆದೇಶಿಸಿದ್ದರು.

ಈ ಕಾರ್ಯಾಚರಣೆಯಲ್ಲಿ ಜಯಪುರ ಹೋಬಳಿ ಉಪ ತಹಸೀಲ್ದಾರ್ ನಿಂಗಪ್ಪ, ರಾಜಸ್ವ ನಿರೀಕ್ಷ ಲೋಹಿತ್, ಹೋಬಳಿಯ ಗ್ರಾಮ ಆಡಳಿತ ಅಧಿಕಾರಿಗಳು, ಬೋಗಾದಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ವರ್ಗ, ನಗರಮಾಪನ ಯೋಜನಾಧಿಕಾರಿಗಳ ಕಚೇರಿ ಸಿಬ್ಬಂದಿ ಹಾಗೂ ಸ್ಥಳೀಯ ಜಯಪುರ ಪೋಲೀಸ್ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.

Leave A Reply

Your email address will not be published.