Anna malai: ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್ ಗೆ ಹಾರಿದ ಅಣ್ಣಾಮಲೈ !! ತಮಿಳುನಾಡು ಬಿಜೆಪಿ ಅಧ್ಯಕ್ಷ ಪಟ್ಟ ಯಾರಿಗೆ?

Anna Malai: ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ(Anna Malai) ಅವರು ತಮ್ಮ ಉನ್ನತ ಶಿಕ್ಷಣಕ್ಕಾಗಿ ಬ್ರಿಟನ್​ನ ಆಕ್ಸ್​ಫರ್ಡ್ ವಿಶ್ವವಿದ್ಯಾಲಯದಲ್ಲಿ(Oxford University) ನಡೆಯಲಿರುವ ಫೆಲೋಶಿಪ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಬದಲಾವಣೆ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಹೌದು, ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ‘ಅಂತರರಾಷ್ಟ್ರೀಯ ರಾಜಕಾರಣ’ದ ಕುರಿತು ಪ್ರತಿ ವರ್ಷ ನೀಡುವ ಪ್ರಮಾಣಪತ್ರ ಕೋರ್ಸ್‌ಗೆ ಬಿಜೆಪಿ(Tamilunadu BJP) ರಾಜ್ಯಾಧ್ಯಕ್ಷ ಅಣ್ಣಾಮಲೈ ಆಯ್ಕೆಯಾಗಿದ್ದಾರೆ. ಈ ಕೋರ್ಸ್‌ಗಾಗಿ ಇಂದು ಮಧ್ಯರಾತ್ರಿ ಲಂಡನ್‌ಗೆ ತೆರಳುತ್ತಿರುವ ಅಣ್ಣಾಮಲೈ ಜನವರಿ ತಿಂಗಳವರೆಗೆ ಅಲ್ಲಿಯೇ ತಂಗಿ ಓದಲಿದ್ದಾರೆ. ಇದರಿಂದಾಗಿ ಸುಮಾರು 4 ತಿಂಗಳು ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಇಲ್ಲದಂತಾಗಿದೆ. ಹೀಗಾಗಿ ತಮಿಳುನಾಡು ಬಿಜೆಪಿಗೆ ಹಂಗಾಮಿ ಅಧ್ಯಕ್ಷರಾಗಿ ಯಾರನ್ನು ನೇಮಿಸಬಹುದು ಎಂದು ಬಿಜೆಪಿ ರಾಷ್ಟ್ರೀಯ ನಾಯಕತ್ವ ಚಿಂತನೆ ನಡೆಸಿದೆ.

ಅಂದಹಾಗೆ ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳಾದ ಡಿಎಂಕೆ-ಎಐಎಡಿಎಂಕೆಗೆ ಪರ್ಯಾಯವಾಗಿ ಬಿಜೆಪಿಯನ್ನು ಬೆಳೆಸಲು ರಾಷ್ಟ್ರೀಯ ನಾಯಕತ್ವವು ಶ್ರಮಿಸುತ್ತಿದೆ. ಹಲವು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ತಮಿಳುನಾಡಿನಲ್ಲಿ ಗರಿಷ್ಠ 4 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತಿಲ್ಲ. ಅದೂ ಕೂಡ ಡಿಎಂಕೆ, ಎಐಎಡಿಎಂಕೆಯ ಮೈತ್ರಿ ಅಗತ್ಯ ಎನ್ನುವ ಪರಿಸ್ಥಿತಿ ಇದೆ. 2014 ರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಬಿಜೆಪಿ ದಕ್ಷಿಣ ಭಾರತದತ್ತ ಚಿತ್ತ ನೆಟ್ಟಿತು. ಹೀಗಾಗಿ ಬೇರೆ ಬೇರೆ ನಾಯಕರನ್ನು ಅಧ್ಯಕ್ಷಗಾದಿಗೆ ಏರಿಸಿದ ಬಳಿಕ 2021ರಲ್ಲಿ ಬಿಜೆಪಿ ಮಾಜಿ ಪೋಲೀಸ್ ಅಧಿಕಾರಿ ಅಣ್ಣಾ ಮಲೈ ಅವರನ್ನು ಭಾರೀ ಭರವಸೆಯ ಮೇರೆಗೆ ತಮಿಳು ನಾಡಿನ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿತ್ತು. ಹೀಗಾಗಿ ಅವರ ಆಕ್ರಮಣಕಾರಿ ರಾಜಕಾರಣದಿಂದಾಗಿ ಯುವಕರಲ್ಲಿ ಬಿಜೆಪಿಯ ಬಗ್ಗೆ ಆಸಕ್ತಿ ಹೆಚ್ಚಾಯಿತು. ತಮ್ಮ ಆಕ್ರಮಣಕಾರಿ ಭಾಷಣಗಳಿಂದಾಗಿ ಡಿಎಂಕೆ-ಎಐಎಡಿಎಂಕೆ ಎಂಬ ಎರಡೂ ಪಕ್ಷಗಳಿಗೆ ಟಕ್ಕರ್ ಕೊಟ್ಟರು.

2026 ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಅಣ್ಣಾಮಲೈ ಕೆಲಸ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ರಾಜಕಾರಣಕ್ಕೆ ತಾತ್ಕಾಲಿಕ ಬ್ರೇಕ್ ನೀಡಿ ಲಂಡನ್‌ನಲ್ಲಿ ಓದಲು ತೆರಳುತ್ತಿದ್ದಾರೆ.

ಏನಿದು ಅಣ್ಣಾ ಮಲೈ ಮಾಡುತ್ತಿರುವ ಹೊಸ ಕೋರ್ಸ್?!
ಯುಕೆ ವಿದೇಶಾಂಗ ಕಚೇರಿಯು 20 ವರ್ಷಗಳಿಗೂ ಹೆಚ್ಚು ಕಾಲ ಫೆಲೋಶಿಪ್ ಕಾರ್ಯಕ್ರಮವನ್ನು ನಡೆಸುತ್ತಿದೆ. ಪ್ರತಿ ವರ್ಷವೂ ಭಾರತದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಕೋರ್ಸ್​ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ರಾಜಕೀಯ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ವಿಭಾಗದಲ್ಲಿ ನಡೆಯಲಿದೆ.

ಮೂರು ತಿಂಗಳ ಕಾಲ ಫೆಲೋಶಿಪ್ ಮುಂದುವರಿಸಲು ಮತ್ತು ಈ ಅವಧಿಯಲ್ಲಿ ಪಕ್ಷದ ಚಟುವಟಿಕೆಗಳಿಂದ ತಾತ್ಕಾಲಿಕ ವಿರಾಮವನ್ನು ತೆಗೆದುಕೊಳ್ಳುವಂತೆ ಅಣ್ಣಾಮಲೈ ಅವರ ಮನವಿಯನ್ನು ಪಕ್ಷದ ಹೈಕಮಾಂಡ್ ಒಪ್ಪಿಕೊಂಡಿದೆ ಎಂದು ಮೂಲವೊಂದು ದಿ ಪ್ರಿಂಟ್​ಗೆ ತಿಳಿಸಿದೆ. ಅಲ್ಲದೆ ಬದಲೀ ಅಧ್ಯಕ್ಷರ ಆಯ್ಕೆಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.

Leave A Reply

Your email address will not be published.