Prajwal-Revanna Case: ಪ್ರಜ್ವಲ್ ಅತ್ಯಾಚಾರ ಮಾಡಿದ್ದು, ರೇವಣ್ಣ ಲೈಂಗಿಕ ಕಿರುಕುಳ ನೀಡಿದ್ದು ಎಲ್ಲವೂ ಸತ್ಯ.. ಸತ್ಯ.. ಸತ್ಯ!! SIT ವರದಿಯಲ್ಲಿ ಭಯಾನಕ ವಿಚಾರಗಳು ಬಹಿರಂಗ !!
Prajwal-Revanna Case: ದೇಶಾದ್ಯಂತ ಸಂಚಲನ ಸೃಷ್ಟಿಸಿದ ಹಾಸನದ ಮಾಜಿ ಸಂಸದರ ಲೈಂಗಿಕ ದೌರ್ಜನ್ಯ ಹಾಗೂ ಹೊಳೆನರಸೀಪುರದ ಹಾಲಿ ಶಾಸಕರ ಲೈಂಗಿಕ ಕಿರುಕುಳ ಸತ್ಯ ಎಂಬುದು ಸಾಬೀತಾಗಿದ್ದು SIT ತನಿಖೆಯಲ್ಲಿ ಭಯಾನಕ ಸತ್ಯಗಳು ಹೊರಬಿದ್ದಿವೆ.
ಹೌದು, ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊದಲ ಪ್ರಕರಣದ ಸಂತ್ರಸ್ತೆಗೆ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರು ಲೈಂಗಿಕ ಕಿರುಕುಳ ನೀಡಿರುವುದು ಮತ್ತು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ನಡೆಸಿ, ವಿಡಿಯೊ ಚಿತ್ರೀಕರಿಸಿಕೊಂಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಸಿಐಡಿ ವಿಶೇಷ ತನಿಖಾ ದಳದ (ಎಸ್‌ಐಟಿ) ತನಿಖಾಧಿಕಾರಿ ಬಿ.ಸುಮಾರಾಣಿ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ 2,144 ಪುಟಗಳ ಆರೋಪ ಪಟ್ಟಿ ಸಲ್ಲಿಸಿದರು.
ಈ ವರದಿಯಲ್ಲಿ ರೇವಣ್ಣಅವರು ತಮ್ಮ ಮನೆ ಕೆಲಸದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವುದು ಹಾಗೂ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿರುವುದು ದೃಢಪಟ್ಟಿದೆ ಎಂದು ತಿಳಿಸಿದೆ. ಜೊತೆಗೆ ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿ ಪ್ರಜ್ವಲ್ ರೇವಣ್ಣ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಎಸ್ ಐಟಿ ಹೇಳಿದೆ. ಚಾರ್ಜ್ ಶೀಟ್ ಸಲ್ಲಿಕೆ ವೇಳೆ ಸುಮಾರು 2 ಸಾವಿರ ಪುಟಗಳನ್ನು ಒಳಗೊಂಡಿದ್ದು, 123 ಸಾಕ್ಷ್ಯಗಳನ್ನು ಸಂಗ್ರಹಿಸಿ ಮಾಡಲಾಗಿದೆ ಎನ್ನಲಾಗಿದೆ. ಸದ್ಯ 42 ನೇ ಜನಪ್ರತಿನಿಧಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಮುಂದೆ ನ್ಯಾಯಾಲಯದಲ್ಲಿ ವಾದ ನಡೆಯಲಿದ್ದು, ಆ ಬಳಿಕ ತೀರ್ಪು ಬರಲಿದೆ.
ಏನೆಲ್ಲಾ ಉಲ್ಲೇಖ?
ಪ್ರಮುಖವಾಗಿ ಮನೆ ಕೆಲಸ ಸಂತ್ರಸ್ತ ಮಹಿಳೆಗೆ ರೇವಣ್ಣ ಮನೆಯಲ್ಲಿ ಮೈ ಕೈ ಮುಟ್ಟಿ ದೌರ್ಜನ್ಯ, ಹಣ್ಣುಕೊಡುವ ನೆಪದಲ್ಲಿ ಸೊಂಟ ಚಿವುಟಿ, ಸೀರೆ ಎಳೆದು ದೌರ್ಜನ್ಯ ಮಾಡಿದ್ದಾರೆ. ಪುತ್ರ ಪ್ರಜ್ವಲ್ ಹೊಳೆನರಸೀಪುರ, ಬೆಂಗಳೂರಿನ ಬಸವನಗುಡಿ ಮನೆಗಳಲ್ಲಿ ಅತ್ಯಾಚಾರ ನಡೆಸಿದ್ದಾರೆ. ಹೊತ್ತಿಲ್ಲದ ಹೊತ್ತಿನಲ್ಲಿ ಸಂತ್ರಸ್ತೆಯ ಜೊತೆ ಬೆದರಿಸಿ ನಿರಂತರವಾಗಿ ಲೈಂಗಿಕ ಸಂಪರ್ಕ ಎಂದು ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ.
ಆರೋಪ ಪಟ್ಟಿಯಲ್ಲಿರುವ ಪ್ರಮುಖ ಅಂಶಗಳು:
‘ಹೊಳೆನರಸೀಪುರದಲ್ಲಿ ರೇವಣ್ಣ ಅವರಿಗೆ ಸೇರಿದ ಮನೆಯಿದ್ದು, ಅವರ ಪತ್ನಿ ಭವಾನಿ ರೇವಣ್ಣ ಅವರ ಅನುಮತಿ ಮೇರೆಗೆ ಹಾಸ್ಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು (2019ರಿಂದ 2020ರ ವರೆಗೆ). ಭವಾನಿ ಅವರು ಮನೆಯಲ್ಲಿ ಇಲ್ಲದಿರುವಾಗ ಸಂತ್ರಸ್ತೆಯನ್ನು ಕೊಠಡಿಗೆ ಬಾ… ಏಕೆ ಕೆಳಗೆ ಹೋಗುತ್ತೀಯಾ… ನಾನೇನು ಮಾಡಲ್ಲ’ ಎಂದು ಆಗಾಗ್ಗೆ ಕರೆಯುತ್ತಿದ್ದರು. ಅಲ್ಲದೇ ಅವರ ಮನೆಯ ಮೊದಲ ಮಹಡಿಯಲ್ಲಿದ್ದ ವಸ್ತುಗಳನ್ನು ಇಡುವ ಕೊಠಡಿಗೆ ಎಲ್ಲ ಕಾರ್ಮಿಕರನ್ನು ಕರೆಸಿಕೊಂಡು ಎಲ್ಲರಿಗೂ ಹಣ್ಣು ವಿತರಣೆ ಮಾಡುತ್ತಿದ್ದರು. ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಕೊನೆಯಲ್ಲಿ ಹಣ್ಣು ಕೊಡಲು ಕೊಠಡಿಯಲ್ಲೇ ಇರಿಸಿಕೊಳ್ಳುತ್ತಿದ್ದರು. ಇತರೆ ಕೆಲಸಗಾರರು ಹಣ್ಣು ಪಡೆದು ತೆರಳಿದ ನಂತರ ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಿದ್ದರು’ ಎಂದು ಉಲ್ಲೇಖಿಸಲಾಗಿದೆ.
ಪ್ರಜ್ವಲ್ ಮೇಲಿನ ಭಯಾನಕ ಆರೋಪ:
ಬೆಂಗಳೂರಿನ ಬಸವನಗುಡಿಯ ಮನೆಯ ಸ್ವಚ್ಛತೆ ಕೆಲಸಕ್ಕೆಂದು ಭವಾನಿ ರೇವಣ್ಣ ಅವರು ಅದೇ ಸಂತ್ರಸ್ತೆಯನ್ನು ಒಮ್ಮೆ ಕರೆ ತಂದಿದ್ದರು. ಭವಾನಿ ಅವರು ಖರೀದಿಗೆಂದು ಹೊರಕ್ಕೆ ತೆರಳಿದ್ದ ವೇಳೆ, ಪ್ರಜ್ವಲ್ ಏಕಾಏಕಿ ಮೊಬೈಲ್ ಹಿಡಿದು ಕೊಠಡಿಯ ಒಳಕ್ಕೆ ಪ್ರವೇಶಿಸಿದ್ದರು. ಆಗ ಸಂತ್ರಸ್ತೆ ಹೊರಕ್ಕೆ ಬರಲು ಪ್ರಯತ್ನಿಸಿದ್ದರು.
ಇಷ್ಟು ದಿನ ನನ್ನಿಂದ ತಪ್ಪಿಸಿಕೊಂಡು ಓಡಾಟ ನಡೆಸಿದ್ದೀಯಾ. ಎಣ್ಣೆ ಹಚ್ಚಲು ಬಾ ಎಂದರೆ ಸಬೂಬು ಹೇಳುತ್ತೀಯಾ. ಈಗ ಒಂಟಿಯಾಗಿ ಸಿಕ್ಕಿದ್ದೀಯಾ ಎಂದು ಹೇಳಿ ಬಟ್ಟೆ ಬಿಚ್ಚಲು ಪ್ರಯತ್ನಿಸಿದ್ದರು. ಸಂತ್ರಸ್ತೆ ಬೇಡ ಅಣ್ಣ, ತಪ್ಪಾಯ್ತು ಬಿಟ್ಟುಬಿಡಿ, ಏನೂ ಮಾಡಬೇಡಿ ಎಂದು ಅಂಗಲಾಚಿದ್ದರು. ಆಗ ಆಕೆಯ ಸೀರೆ ಹರಿದು ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಅದನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದರು. ವಿಷಯನ್ನು ಬಹಿರಂಗ ಪಡಿಸಿದರೆ ನಿನ್ನ ಪತಿಯನ್ನು ಜೈಲು ಪಾಲು ಮಾಡುತ್ತೇನೆ. ನಿನ್ನ ಪುತ್ರಿಗೂ ಇದೇ ಗತಿ ಮಾಡುತ್ತೇನೆ. ಏನೇ ಕೆಲಸ ಮಾಡಿದರೂ ಪ್ರಕರಣ ಮುಚ್ಚಿ ಹಾಕಲು ನನಗೆ ಗೊತ್ತಿದೆ. ನಾನು ಸಂಸದನಾಗಿದ್ದು, ಯಾರೂ ಏನೂ ಮಾಡಲು ಆಗುವುದಿಲ್ಲ. ಬಾಯಿ ಬಿಟ್ಟರೆ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂಬುದು ಸಾಬೀತಾಗಿದೆ’ ಎಂದು ವಿವರಿಸಲಾಗಿದೆ.
ಹೊತ್ತಿಲ್ಲದ ಹೊತ್ತಲ್ಲಿ ಅತ್ಯಾಚಾರ:
ಇನ್ನು ಮನೆ ಕೆಲಸ ಮಾಡಿ ಸುಸ್ತಾಗಿ ಮಲಗಿದ್ದರೂ ಹೊತ್ತಿಲ್ಲದ ಹೊತ್ತಿನಲ್ಲಿ ಬಂದು ಸಂತ್ರಸ್ತೆಯನ್ನು ಬೆದರಿಸಿ ನಿರಂತರವಾಗಿ ಲೈಂಗಿಕ ಸಂಪರ್ಕ ಹೊಂದುತ್ತಿದ್ದರು ಎಂಬ ವಿಚಾರವನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಎಸ್‌ಐಟಿ ತಂಡದ ಪೊಲೀಸರು ಈ ಪ್ರಕರಣದ ಬಗ್ಗೆ ಹಾಸನದ ಮನೆ, ಬೆಂಗಳೂರಿನ ಮನೆ ಸೇರಿದಂತೆ ಎಲ್ಲೆಡೆ ಸ್ಥಳ ಮಹಜರು ಮಾಡಿ, ಆರೋಪಿಗಳು ಮತ್ತು ದೂರುದಾರರನ್ನು ಸೂಕ್ತ ವಿಚಾರಣೆ ಮಾಡಿ ತನಿಖೆ ಮುಗಿಸಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.
ಅಂದಹಾಗೆ ಸಂತ್ರಸ್ತ ಮಹಿಳೆಯು ತಂದೆ ಮಗ ಇಬ್ಬರ ವಿರುದ್ಧವೂ ದೂರು ನೀಡಿದ್ದರು. ಹೀಗಾಗಿ, ಒಂದೇ ಪ್ರಕರಣದಲ್ಲಿ ರೇವಣ್ಣ ಹಾಗೂ ಪ್ರಜ್ವಲ್ ವಿರುದ್ಧ ಪ್ರತ್ಯೇಕ ಸೆಕ್ಷನ್ ಅಡಿ ಎಫ್‌ಐಆರ್ ದಾಖಲಾಗಿತ್ತು. ಅಂತೆಯೇ ಚಾರ್ಜ್‌ಶೀಟ್‌ನಲ್ಲಿ ಅಗತ್ಯ ದಾಖಲೆಗಳನ್ನು ಎಸ್‌ಐಟಿ ಸಂಗ್ರಹಿಸಿದೆ.