Shivamogga: ಶಿವಮೊಗ್ಗ: ಮಾಲೀಕ ಸಾವನ್ನಪ್ಪಿ 15 ದಿನ: ಇನ್ನೂ ಆಸ್ಪತ್ರೆಯ ಮುಂದೆಯೇ ಬೊಗಳುತ್ತಾ ಕಾದು ಕುಳಿತ ನಾಯಿ !

Shivamogga: ನಾಯಿ ನಿಯತ್ತಿನ ಬಗ್ಗೆ ಆಗಾಗ ಕೇಳುತ್ತಲೇ ಇರುತ್ತೇವೆ. ಮನೆಯ ಎಲ್ಲೋ ಮೂಲೆಯಲ್ಲಿ ಒಂದು ಹೊತ್ತಿನ ಹಳಸಲು ಅನ್ನ ಹಾಕಿದರೂ ಸಾಕು: ಆ ಮನೆಗೆ, ಅದರ ಯಜಮಾನನಿಗೆ ನಾಯಿ ಯಾವತ್ತೂ ಮೋಸ ಮಾಡಲ್ಲ. ಕನಿಷ್ಠ ಪ್ರೀತಿ ತೋರಿದ ಮಾಲೀಕನಿಗೆ ತನ್ನ ಜೀವ ತೆತ್ತಾದರೂ ಸರಿ ಗರಿಷ್ಠ ಕಂಫರ್ಟ್ ಒದಗಿಸಬೇಕು ಅನ್ನೋದು ನಾಯಿ ಎಂಬ ಪ್ರಾಣಿಯ ಜನ್ಮದತ್ತ ಪಾಲಿಸಿ. ಪ್ರೀತಿ ಕೊಟ್ಟವನಿಗೆ, ತನ್ನ ಕಷ್ಟವಾದಾಗ ಕುಟುಂಬದವರು ಕಣ್ಣೀರು ಹಾಕುತ್ತಾರೋ ಗೊತ್ತಿಲ್ಲ, ಆದರೆ ನಾಯಿಗಳು ಮಾತ್ರ ಮರುಗುತ್ತವೆ, ಬಾಧೆ ಪಡುತ್ತವೆ, ಮನದಲ್ಲೇ ಬಿಕ್ಕುತ್ತವೆ. ಅದಕ್ಕೆ ಬೆಸ್ಟ್ ಉದಾಹರಣೆಯೊಂದು ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ನಾಯಿ ನಿಯತ್ತು ಮತ್ತೊಮ್ಮೆ ಜಾಹೀರು !

 

ಶಿವಮೊಗ್ಗದ ಹೊಳೆಹೊನ್ನೂರು ಪಟ್ಟಣದ ಕನ್ನೆಕೊಪ್ಪ ನಿವಾಸಿ ಪಾಲಾಕ್ಷಪ್ಪ ಎಂಬವರು 15 ದಿನಗಳ ಹಿಂದೆ ನಿಧನರಾಗಿದ್ದಾರೆ. ಎದೆನೋವಿನ ಕಾರಣ ಪ್ರಾಥಮಿಕ ಆರೋಗ್ಯದಲ್ಲಿ ದಾಖಲಾಗಿದ್ದ ಅವರನ್ನು ಆರೋಗ್ಯ ಸ್ಥಿತಿ ಗಮನಿಸಿ, ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರಿಗೆ ಚಿಕಿತ್ಸೆ ಫಲಿಸದೆ ಪಾಲಾಕ್ಷಪ್ಪ ನಿಧನರಾಗಿದ್ದಾರೆ.

ಆದರೆ ಪಾಲಾಕ್ಷಪ್ಪ ಸಾವನ್ನಪ್ಪಿದ್ದರೂ, ಅವರು ಸಾಕಿದ್ದ ನಾಯಿ ಮಾತ್ರ ಇನ್ನೂ ತನ್ನ ಮಾಲೀಕ ಬದುಕಿದ್ದಾನೆಂದು ಹೊಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಿದೆ. ಮಾಲೀಕ ದಾಖಲಾಗಿದ್ದ ವಾರ್ಡ್ ಬಳಿ ಬಂದು ಅವರಿಗಾಗಿ ಕಾಯುತ್ತಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಆಯಾ ದೃಶ್ಯ ಜನರ ಕಣ್ಣಲ್ಲಿ ನೀರು ಜಿನುಗಿಸಿದೆ.

ಮೊದಮೊದಲು ಆಸ್ಪತ್ರೆಯ ಸಿಬ್ಬಂದಿ ಯಾವುದೋ ಬೀದಿ ನಾಯಿ ಎಂದು ಓಡಿಸುತ್ತಿದ್ದರು. ಆದರೆ ಪಾಲಕ್ಷಪ್ಪ ರ ನಾಯಿ ವಾರ್ಡ್ ಬಳಿ ಬಂದು ಬೊಗಳುತ್ತಿತ್ತಂತೆ. ಹೀಗೆ ದಿನಾಲೂ ಆಸ್ಪತ್ರೆಗೆ ಬರುತ್ತಿದ್ದ ಶ್ವಾನ ಯಾಕೆ ಬರುತ್ತಿದೆ ಅನ್ನುವ ಅನುಮಾನ ಕಾಡಿದೆ. ಯಾವುದಾದ್ರೂ ಮಾಂಸದಂಗಡಿ ಅಥವಾ ಊಟದ ಹೊಟೇಲ್ ಗೆ ನಾಯಿ ಹೋಗಿದ್ದರೆ ಆಹಾರ ಅರಸಿ ಬಂದಿತ್ತು ಎನ್ನಬಹುದಿತ್ತು. ಹಾಗಾಗಿ ಆಸ್ಪತ್ರೆ ಮುಂದೆ ಪದೇಪದೇ ಬಂದು ಬೊಗಳುತ್ತಿದ್ದ ಈ ನಾಯಿ ಬಗ್ಗೆ ವಿಚಾರಿಸ್ದಾ ನಿಜ ಸಂಗತಿ ಬೆಳಕಿಗೆ ಬಂದಿದೆ. ಇನ್ನಿಲ್ಲದ ತನ್ನ ಮಾಲೀಕ ಬರುವಿಕೆಗಾಗಿ ಮೂಕ ಶ್ವಾನ ಕಾಯುತ್ತಿದೆ ಎಂಬುದು ಅರಿವಿಗೆ ಬಂದಿದೆ.

ಆದರೀಗ ಆಸ್ಪತ್ರೆಗೆ ಬರುತ್ತಿರುವ ಈ ನಾಯಿ ಯಾರಿಗಾದರು ಕಚ್ಚಬಹುದು ಎಂದು ಪಟ್ಟಣ 5 ಪಂಚಾಯಿತಿ ಸಿಬ್ಬಂದಿಗೆ ವಿಚಾರ ತಿಳಿಸಲಾಗಿದ್ದು ನಾಯಿಯನ್ನು ಬೇರೆಡೆಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಇದೆ. ಇದೀಗ ಶಿವಮೊಗ್ಗದಲ್ಲಿ ಈ ನಿಯತ್ತಿನ ನಾಯಿಯದೇ ಮಾತು.

Leave A Reply

Your email address will not be published.