Anna Bhagya: ರಾಜ್ಯದ ಜನತೆಗೆ ಗುಡ್ ನ್ಯೂಸ್ – ಕರ್ನಾಟಕದ ‘ಅನ್ನಭಾಗ್ಯ’ ಯೋಜನೆಗೆ ಅಗತ್ಯವಿರುವ ಅಕ್ಕಿ ಪೂರೈಸಲು ಒಪ್ಪಿದ ಕೇಂದ್ರ!!
Anna Bhagya: ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು(Congress Guarantees) ಜಾರಿಯಾಗಿ ಒಂದು ವರ್ಷಗಳ ನಂತರ ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವಿನ ಅಕ್ಕಿ ಬಿಕ್ಕಟ್ಟು ಬಗೆಹರಿದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅನ್ನಭಾಗ್ಯ(Anna Bhagya) ಯೋಜನೆಗೆ ಅಗತ್ಯವಿರುವ ಅಕ್ಕಿಯನ್ನು ಪೂರೈಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಹೌದು, ಕೇಂದ್ರ ಸರ್ಕಾರ(Central Government) ಅನ್ನಭಾಗ್ಯ ಯೋಜನೆಗೆ ಬೇಕಿರುವಂತ ಅಕ್ಕಿ ಕೊಡುತ್ತಿಲ್ಲ ಎನ್ನುವ ಕಾರಣಕ್ಕಾಗಿ ಪಡಿತರ ಚೀಟಿದಾರರಿಗೆ ಅಕ್ಕಿ ಬದಲಾಗಿ ಹಣವನ್ನೇ ನೀಡಲಾಗುತ್ತಿತ್ತು. ಆದರೇ ಈಗ ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆಗೆ ಅಗತ್ಯವಿರುವಂತ ಅಕ್ಕಿ ನೀಡಲು ಮುಂದಾಗಿದೆ ಎಂಬುದಾಗಿ ತಿಳಿದು ಬಂದಿದೆ. ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸರ್ಕಾರವು ಆದೇಶ ನೀಡಿದ ತಕ್ಷಣ ಕೇಂದ್ರವು ಅಗತ್ಯ ಪ್ರಮಾಣದ ಅಕ್ಕಿಯನ್ನು ನೀಡುತ್ತದೆ ಎಂದು ಖಚಿತಪಡಿಸಿದ್ದಾರೆ.
ಕಳೆದ ವಾರ ದೆಹಲಿಯಲ್ಲಿ ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಮತ್ತು ಜೋಶಿ ಇಬ್ಬರೂ ಮಾತುಕತೆ ನಡೆಸಿದ್ದರು. ಈ ಸಭೆಯ ನಂತರ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ(ಒಎಂಎಸ್‌ಎಸ್) ಅಡಿಯಲ್ಲಿ ಅಕ್ಕಿಯನ್ನು ಪೂರೈಸಲು ಕೇಂದ್ರವು ಒಪ್ಪಿಗೆ ನೀಡಿದೆ.
ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಾತನಾಡಿ ಕರ್ನಾಟಕದ ಅನ್ನ ಭಾಗ್ಯ ಯೋಜನೆಗೆ ಅಗತ್ಯವಾದ ಅಕ್ಕಿಯ ದಾಸ್ತಾನನ್ನು ನಾವು ಖಚಿತಪಡಿಸಿದ್ದೇವೆ ಮತ್ತು ರಾಜ್ಯ ಸರ್ಕಾರ ಆದೇಶ ನೀಡಿದರೆ ಅದನ್ನು ಪೂರೈಸಲು ಸಿದ್ಧರಿದ್ದೇವೆ. ಇತರ ರಾಜ್ಯಗಳಲ್ಲೂ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ಸಾಕಷ್ಟು ದಾಸ್ತಾನು ಇದೆ” ಎಂದು ಜೋಶಿ ಹೇಳಿದರು. ಒಎಂಎಸ್‌ಎಸ್ ಅಡಿಯಲ್ಲಿ ಕೇಂದ್ರವು ಅಕ್ಕಿಯ ಬೆಲೆಯನ್ನು ಪ್ರತಿ ಕೆ.ಜಿ.ಗೆ 29 ರೂ.ಗಳಿಂದ 28 ರೂ.ಗೆ ಇಳಿಸಿದೆ. ಈ ಬೆಲೆ ಕಡಿತವು ಆಯಾ ಕಲ್ಯಾಣ ಯೋಜನೆಗಳಿಗಾಗಿ ಅಕ್ಕಿಯನ್ನು ಸಂಗ್ರಹಿಸುವ ಎಲ್ಲಾ ರಾಜ್ಯಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.
ಅಂದಹಾಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ನೀಡುವುದಾಗಿ ಹೇಳಲಾಗಿತ್ತು. ಆದರೆ, ಕೇಂದ್ರದಿಂದ ಹೆಚ್ಚುವರಿ 5 ಕೆಜಿ ಸಿಗದ ಕಾರಣ ಹೊರ ರಾಜ್ಯಗಳಿಂದ ಅಕ್ಕಿ ಖರೀದಿಸುವ ಪ್ರಯತ್ನ ನಡೆದಿತ್ತು, ನಂತರದಲ್ಲಿ ಹೆಚ್ಚುವರಿ 5ಕೆಜಿ ಅಕ್ಕಿ ಹಣವನ್ನು ಖಾತೆಗೆ ಜಮಾ ಮಾಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಮಾಸಿಕ 5 ಕೆಜಿ ಉಚಿತ ಅಕ್ಕಿ ನೀಡುವ ಭರವಸೆ ನೀಡುವ ಅನ್ನ ಭಾಗ್ಯ ಯೋಜನೆಯನ್ನು ಪೂರೈಸಲು ಕರ್ನಾಟಕಕ್ಕೆ 2,36,000 ಟನ್ ಅಕ್ಕಿ ಅಗತ್ಯವಿದೆ.