CM Post: ಕೈ ಪಾಳೆಯದಲ್ಲಿ ಕುರ್ಚಿಗಾಗಿ ತೆರೆಮರೆಯಲ್ಲಿ ಕಸರತ್ತು: ಹಾಗಾದರೆ ಸಿಎಂ ಸಿದ್ದು ರಾಜೀನಾಮೆ ಕೊಡ್ತಾರಾ..?
CM Post: ಮೈಸೂರು ಮುಡಾ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೇಲ್ನೋಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿರುವ ಕೆಲ ಸಚಿವರು ಮತ್ತು ಮುಖಂಡರೇ ತೆರೆಮರೆಯಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ನಡೆಸಿದ್ದಾರೆ. ಈ ಒಳೇಟು ಮತ್ತು ಒಳಸಂಚಿನ ಕುರಿತು ಕೈ ಪಾಳೆಯದಲ್ಲೇ ಆಕ್ರೋಶ ಭುಗಿಲೆದ್ದಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಿಡಿ ನಿವೇಶನಗಳ ಹಂಚಿಕೆ ಹಗರಣದ ತನಿಖೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಆದೇಶ ನೀಡುತ್ತಿದ್ದಂತೆಯೇ ಕುರ್ಚಿ ಆಸೆಗೆ ಬಿದ್ದವರ ಅಂತರಾಳ ಮತ್ತು ಅವರು ನಡೆಸುತ್ತಿರುವ ತೆರೆಮರೆಯ ಕಸರತ್ತು ತೀವ್ರ ಕುತೂಹಲಕ್ಕೆಡೆ ಮಾಡಿಕೊಟ್ಟಿದೆ. ಯಡಿಯೂರಪ್ಪ ಅವರ ರೀತಿಯಲ್ಲೇ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾದರೆ, ಅಂತಹ ಸನ್ನಿವೇಶದಲ್ಲಿ ಆ ಸ್ಥಾನ ಗಿಟ್ಟಿಸಿಕೊಳ್ಳಬೇಕೆಂದು ಪ್ರಭಾವಿ ಸಚಿವರು ಹಾಗೂ ಹಿರಿಯ ಶಾಸಕರು ಹೈಕಮಾಂಡ್ ಕದ ತಟ್ಟಿದ್ದಾರೆ. ಇನ್ನೊಂದೆಡೆ, ಸಿಎಂ ಕುರ್ಚಿ ತಮ್ಮದೇ ಎನ್ನುವ ಆತ್ಮವಿಶ್ವಾಸದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಒಳಗೊಳಗೇ ಬೀಗುತ್ತಿದ್ದಾರೆ.
ಶಿವಕುಮಾರ್ ಜೊತೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್, ಪಕ್ಷದ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಮುಂಚೂಣಿಯಲ್ಲಿದ್ದಾರೆ. ಲಿಂಗಾಯತ ಕೋಟಾದಡಿ ತಾವೂ ಒಂದು ಕೈ ನೋಡಿಯೇ ಬಿಡಬೇಕು ಎನ್ನುವ ಉಮೇದಿಯಲ್ಲಿ ಸಚಿವ ಎಂ.ಬಿ.ಪಾಟೀಲ್ ಕುರ್ಚಿಗೆ ಟವೆಲ್ ಎಸೆಯುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಡಿಕೆಶಿ, ಜಾರಕಿಹೊಳಿ ಚರ್ಚೆ:
ಸತೀಶ್ ಜಾರಕಿಹೊಳಿ ಅವರೇನಾದರೂ ತಮ್ಮ ಕುರ್ಚಿ ಆಸೆಗೆ ಆಗಬಹುದೆನ್ನುವ ಡಿ.ಕೆ.ಶಿವಕುಮಾರ್ ಅಡ್ಡಗಾಲು ಕಳವಳ ಡಿಸಿಎಂ ಅವರನ್ನು ಸಹಹಜವಾಗಿಯೇ ಕಾಡುತ್ತಿದೆ. ಅದಕ್ಕಾಗಿಯೇ ಶಿವಕುಮಾರ್ ಅವರು ನಿನ್ನೆಯಷ್ಟೇ ತಮ್ಮ ನಿವಾಸಕ್ಕೆ ಸತೀಶ್ ಜಾರಕಿಹೊಳಿ ಅವರನ್ನು ಕರೆಸಿಕೊಂಡು ಸುಮಾರು ೯೦ ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ.
ಈ ಮಾತುಕತೆ ಸ್ವತಃ ಕೈ ಪಾಳೆಯಕ್ಕೇ ಕಸಿವಿಸಿ ಜತೆಗೆ ಕಳವಳ ಮೂಡಿಸಿದೆ. ಕಾನೂನಿನ ಕುಣಿಕೆಯಲ್ಲಿ ಸಿಲುಕಿ ಅಧಿಕಾರ ತ್ಯಾಗ ಮಾಡುವ ಸ್ಥಿತಿಯೇನಾದರೂ ಸಿದ್ದರಾಮಯ್ಯ ಅವರಿಗೆ ಎದುರಾದರೆ, ಬೆಂಬಲಿಸಬೇಕು. ಮುಂದೆ ನಿಮಗೆ ಪಕ್ಷದಲ್ಲಿ ಒಳ್ಳೆಯ ಅವಕಾಶಗಳಿವೆ. ದುಡುಕಿ ತೀರ್ಮಾನ ತೆಗೆದುಕೊಳ್ಳಬೇಡಿ ಎಂದು ಶಿವಕುಮಾರ್ ಅವರು ಸತೀಶ್ ಜಾರಕಿಹೊಳಿ ಅವರಿಗೆ ಮನವಿಯೊಟ್ಟಿಗೆ ಒಂದಷ್ಟು ಸಲಹೆಗಳನ್ನು ನೀಡಿಸುವ ಸಾಧ್ಯತೆ ಇದೆ.
ಜಾರಕಿಹೊಳಿ ಮತ್ತು ಅವರ ಸಹೋದರರು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಪಕ್ಷ ಮತ್ತು ಸರ್ಕಾರ ಉಳಿಸಿಕೊಳ್ಳುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇಬ್ಬರ ಭೇಟಿಯಲ್ಲಿ ಸಿಎಂ ಕುರ್ಚಿ ಬಗ್ಗೆ ಚರ್ಚೆ ನಡೆದಿಲ್ಲ ಎನ್ನುವುದು ಕಾಂಗ್ರೆಸ್ ಪಾಳೆಯದ ಅಭಿಪ್ರಾಯವಾಗಿದೆ.
ಆಪ್ತ ಪಾಳೆಯದಲ್ಲಿರುವವರ ಪ್ರಯತ್ನ, ತಂತ್ರಗಾರಿಕೆ ಮತ್ತು ಸ್ವಪಕ್ಷೀಯರ ಸಂಚಿನ ವಿಚಾರವೆಲ್ಲವೂ ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿಲ್ಲವೆಂದೇನಲ್ಲ. ಆದರೆ, ಇದ್ಯಾವುದಕ್ಕೂ ಅವರು ತಲೆಕೆಡಿಸಿಕೊಳ್ಳಲು ಹೋಗಿಲ್ಲ. ಸದ್ಯ ಅವರ ಮುಂದಿರುವುದು ಕಾನೂನು ಹೋರಾಟದ ಸಂಕಷ್ಟದಿಂದ ಪಾರಾಗುವುದಷ್ಟೇ ಮೂಲಕ ಆಗಿದೆ. ಅವರೀಗ ಕಾನೂನಿನ ಹೋರಾಟ ಮಾಡಿ ಅಧಿಕಾರ ಉಳಿಸಿಕೊಳ್ಳಲು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರ ಮೊರೆ ಹೋಗಿದ್ದಾರೆ. ಒಂದು ವೇಳೆ ತಾವು ಅಧಿಕಾರದಿಂದ ಇಳಿಯಲೇಬೇಕಾದ ಪರಿಸ್ಥಿತಿ ಎದುರಾದರೆ, ತಮಗೆ ಅತ್ಯಾಪ್ತರಾಗಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರುವ ಚಿಂತನೆಯಲಿದ್ದಾರೆ ಎನ್ನಲಾಗಿದೆ.
ತೆರೆಮರೆಯ ಪರಿಸ್ಥಿತಿಗಳು, ಬೆಂಬಲ ಘೋಷಿಸಿಕೊಂಡೇ ಸ್ವಪಕ್ಷೀಯರು ಕುರ್ಚಿ ಪೈಪೋಟಿಗೆ ಇಳಿದಿರುವುದು, ದಿಲ್ಲಿ ನಾಯಕರೊಟ್ಟಿಗೆ ಗೌಪ್ಯ ಮಾತುಕತೆಯನ್ನೆಲ್ಲಾ ಸೂಕ್ಷ್ಮವಾಗಿ ಅವಲೋಕಿಸಿದರೆ, ಸಿದ್ದರಾಮಯ್ಯ ಅಧಿಕಾರದಿಂದ ಇಳಿಯುವ ಕಾಲ ಸನ್ನಿಹಿತವಾದಂತೆ ಭಾಸವಾಗುತ್ತಿದೆ.
ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರು ಉಳಿದವರಿಗಿಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ನೀವು ರಾಜ್ಯ ರಾಜಕಾರಣಕ್ಕೆ ಬರುತ್ತೀರಾ, ಬರುವುದಾದರೆ, ನಾವು ನಿಮ್ಮ ಹಿಂದೆ ಇರುತ್ತೇವೆ. ನೀವು ಬರದಿದ್ದರೆ. ನನಗೆ ಮುಖ್ಯಮಂತ್ರಿ ಆಗುವ ಅವಕಾಶ ಮಾಡಿಕೊಡಿ. ನಿಮ್ಮ ನೆರಳಿನಲ್ಲಿ ಒಳ್ಳೆಯ ಸರ್ಕಾರ ಕೊಡುತ್ತೇನೆ ಎಂದು ನೇರವಾಗಿ ಕೇಳಿದ್ದಾರೆನ್ನುವುದು ಚರ್ಚೆಗೆ ಗ್ರಾಸವಾಗಿದೆ. ಇದೇ ರೀತಿ ಮತ್ತೊಬ್ಬ ಹಿರಿಯ ಆ ಸದಸ್ಯ ಟಿ.ಬಿ.ಜಯಚಂದ್ರ ಅವರು ಖರ್ಗೆ ಅವರನ್ನ ಭೇಟಿ ಮಾಡಿ ನೀವು ಮತ್ತೆ ರಾಜ್ಯ ರಾಜಕಾರಣಕ್ಕೆ ಬಂದು ಮುಖ್ಯಮಂತ್ರಿಯಾಗಬೇಕು ಎಂದು ಕೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ರಾಜಕೀಯ ಪ್ರಸಂಗ ಜೋರಾಗಿ ನಡೆಯುತ್ತಿದೆ.