Naada Kovi: ಮನೆಯಲ್ಲೇ ತಯಾರಾಗುತ್ತಿತ್ತು ನಾಡ ಕೋವಿ: ಅಕ್ರಮ ಬಂದೂಕು ಎಲ್ಲಿ ಹೋಗುತ್ತಿತ್ತು?

Naada Kovi: ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಪೊಲೀಸರು, ಈ ದಂಧೆಯಲ್ಲಿ ತೊಡಗಿದ್ದ ಕೇರಳ ಮೂಲದ ಓರ್ವ ಆರೋಪಿಯನ್ನು ಮತ್ತು ಈತನಿಂದ ಅಕ್ರಮ ನಾಡ ಬಂದೂಕುಗಳನ್ನು ಖರೀದಿಸಿದ್ದ ಮೂವರನ್ನು ಬಂಧಿಸಿದ್ದಾರೆ.

 

ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಸಣ್ಣಪುಲಿಕೋಟು ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರ ಹಾಗೂ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡವು ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಇಂದು(ಆ.15) ರಂದು ಸಣ್ಣಪುಲಿಕೋಟು ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದ ಕೇರಳ ರಾಜ್ಯ ಇಡುಕ್ಕಿ ಜಿಲ್ಲೆ ಮೂಲದ ಸುರೇಶ್ ಎಂಬಾತನ ಮನೆಯ ಮೇಲೆ ದಾಳಿ ನಡೆಸಿದೆ.
ಈ ಸಂದರ್ಭ, ಅಕ್ರಮವಾಗಿ ನಾಡ ಬಂದೂಕು ತಯಾರಿಸಲು ಬಳಸುತ್ತಿದ್ದ ಸಾಮಾಗ್ರಿಗಳು ಮತ್ತು 02 – ನಾಡ ಬಂದೂಕು (ಎಸ್.ಬಿ.ಬಿ.ಎಲ್) ಹಾಗೂ 01 ನಾಡ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಕಲಂ: 3, 25 Indian Arms Act ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಸುರೇಶ್, 52 ವರ್ಷ ಎಂಬಾತನನ್ನು ಬಂಧಿಸಲಾಗಿದೆ. ಅಲ್ಲದೇ ಆರೋಪಿ ಸುರೇಶ್ ಅಕ್ರಮವಾಗಿ ತಯಾರಿಸಿರುವ ನಾಡ ಬಂದೂಕುಗಳನ್ನು ಖರೀದಿ ಮಾಡಿದ್ದ 1) ಎನ್.ಜೆ.ಶಿವರಾಮ, 45 ವರ್ಷ, ಚೇತುಕಾಯ ಗ್ರಾಮ, ಕರಿಕೆ, 2) ಎಸ್.ರವಿ, 35 ವರ್ಷ, ಮಾಗಳಿ ಗ್ರಾಮ, ಪಿರಿಯಾಪಟ್ಟಣ, ಮತ್ತು 3) ಕೋಟಿ, 55 ವರ್ಷ, ದೊಡ್ಡಪುಲಿಕೋಟು, ಭಾಗಮಂಡಲ ಇ ವರುಗಳಿಂದ ತಲಾ ಒಂದು ನಾಡ ಬಂದೂಕು (ಎಸ್.ಬಿ.ಬಿ.ಎಲ್) ಅನ್ನು ವಶಪಡಿಸಿಕೊಂಡು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಒಟ್ಟು 05 – ನಾಡ ಬಂದೂಕು (ಎಸ್.ಬಿ.ಬಿ.ಎಲ್) ಹಾಗೂ 01 – ನಾಡ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಸದರಿ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ. ರಾಮರಾಜನ್, ಅಭಿನಂದಿಸಿದ್ದಾರೆ.

Leave A Reply

Your email address will not be published.