Skeleton: 3 ವರ್ಷಗಳ ಹಿಂದೆ ನಾಪತ್ತೆಯಾದ ವ್ಯಕ್ತಿ: ಅಸ್ಥಿಪಂಜರವಾಗಿ ಸಿಕ್ಕಿದ್ದು ಎಲ್ಲಿ?

Skeleton: ಕಳೆದ ಮೂರು ವರ್ಷಗಳ ಹಿಂದೆ ನಾಪತ್ತೆಯಾದ ವ್ಯಕ್ತಿಯೊಬ್ಬರು ಎಲ್ಲಿ ಹೋದರೆಂದು ಯಾರಿಗೂ ಸುಳಿವು ಸಿಗಲಿಲ್ಲ. ಇವರು ನಾಪತ್ತೆಯಾದಾಗ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು. ಎಲ್ಲೂ ಸುಳಿವು ಸಿಕ್ಕಿರಲಿಲ್ಲ. ಇದೀಗ ಆಶ್ಚರ್ಯ ಎನ್ನುವಂತೆ ಕೇವಲ ಅವರ ಅಸ್ಥಿಪಂಜರ ಮಾತ್ರ ಪತ್ತೆಯಾಗಿದೆ. ನಿಜಕ್ಕೂ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಈ ಆಶ್ಚರ್ಯಕ್ಕೆ ಕಾರಣ ಏನೆಂದರೆ ಅವರ ಅಸ್ಥಿಪಂಜರ ಸಿಕ್ಕಿದ್ದು ಅವರ ಮನೆಯಲ್ಲೇ.

ಧಾರವಾಡ(Dharawada)ದಲ್ಲಿರುವ ಮಾಳಮಡ್ಡಿ ಬಡಾವಣೆಯ ಹತ್ತಿರ ಇರುವ ಕೆನರಾ ಬ್ಯಾಂಕ್ ಬಳಿ ಘಟನೆ ನಡೆದಿದೆ. ನಾಪತ್ತೆಯಾದವರು ಚಂದ್ರಶೇಖರ ಎಂಬುವವರು. ಕಳೆದ ಮೂರು ವರ್ಷಗಳಿಂದ ನಾಪತ್ತೆಯಾಗಿದ್ದಾರೆ ಎಂದು ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ದೂರು ನೀಡಿದ್ದರು. ಚಂದ್ರಶೇಖರ್ ಅವರನ್ನು ಅನೇಕ ಕಡೆ ಹುಡುಕಲಾಗಿತ್ತು. ಇದೀಗ ಪೊಲೀಸರು ಅವರನ್ನು ಹುಡುಕಿಕೊಂಡು ಅವರ ಮನೆಗೆ ಹೋಗಿದ್ದಾರೆ. ಅಲ್ಲಿ ಹೋದ ಪೊಲೀಸರಿಗೆ ಶಾಕ್‌ ಆಗಿದೆ. ಚಂದ್ರಶೇಖರ ಅವರ ಮನೆಯಲ್ಲೇ ಅವರ ಹೆಣ ಕೊಳೆತು ಕೇವಲ ಅಸ್ಥಿಪಂಜರ ಮಾತ್ರ ಉಳಿದಿತ್ತು.

ಹಲವು ವರ್ಷಗಳ ಹಿಂದೆ ಅವರ ಪತ್ನಿ ಸಾವನ್ನಪ್ಪಿದ್ದರು. ಇದರಿಂದ ನೊಂದ ಚಂದ್ರಶೇಖರ ಅವರು ಒಂಟಿಯಾಗಿ ಮನೆಯಲ್ಲಿ ಬದುಕುತ್ತಿದ್ದರು. ಅದು ಕೋವಿಡ್ ಸಮಯ. ಯಾರಿಗೂ ಯಾರನ್ನೂ ವಿಚಾರಿಸುವಷ್ಟು ಧೈರ್ಯ ಇರಲಿಲ್ಲ. ಆ ವೇಳೆಯಲ್ಲಿ ಒಂಟಿಯಾಗಿದ್ದ ಚಂದ್ರಶೇಖರ್‌ ಅವರಿಗೆ ಕೋವಿಡ್‌ ಬಂದಿರಬಹುದು ಎಂದು ಶಂಕಿಸಲಾಗಿದೆ. ಅದೇ ವೇಳೆ ಅವರು ಸಾವನ್ನಪ್ಪಿರಬಹುದು ಎಂದು ಅನುಮಾನಿಸಲಾಗಿದೆ. ಇವರ ಸಂಬಂಧಿಕರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಇರೋದು ಎಂದು ಮಾಹಿತಿ ಲಭ್ಯವಾಗಿದೆ. ಈವರ ಬಗ್ಗೆ ಯಾರೂ ಹೆಚ್ಚಾಗಿ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ತಿಳಿದುಬಂದಿದೆ.

ಇವರು ಮನೆಗೆ ಹಾಲು, ಪೇಪ‌ರ್ ಏನು ಹಾಕಿಸಿಕೊಳ್ಳುತ್ತಿರಲಿಲ್ಲ. ಹಾಗಾಗಿ ಇವರ ಸಂಪರ್ಕದಲ್ಲಿ ಯಾರೂ ಇಲ್ಲದ ಕಾರಣ ಇವರು ಸತ್ತದ್ದು ಯಾರಿಗೂ ಗೊತ್ತಾಗಲಿಲ್ಲ. ಸುತ್ತಮುತ್ತ ಮನೆಗಳಿವೆ. ಅವರು ಯಾರೂ ಇವರ ಬಗ್ಗೆ ಗಮನ ಹರಿಸಲಿಲ್ಲ. ಸತ್ತರೂ ಯಾರಿಗೂ ತಿಳಿಯದೆ ಇರೋದೇ ವಿಶೇಷ. ಇದೀಗ ಅವರ ಅಸ್ಥಿಪಂಜರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡು ಇದು ಚಂದ್ರಶೇಖರ್‌ ಅವರ ಹೆಣವೇ ಎಂದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ತಪಾಸಣೆಗೆ ಕಳುಹಿಸಲಾಗಿದೆ.

Leave A Reply

Your email address will not be published.