TB Dam: ತುಂಗಾಭದ್ರಾ ಡ್ಯಾಮ್ ಗೇಟ್ ಕಟ್ ನಿಂದ ಭಾರೀ ಪ್ರಮಾಣದ ನೀರು ಪೋಲು – ಮುಂದಾಗೋ ಸಂಕಷ್ಟಗಳೇನು?
TB Dam: ನಾಡಿನ ಅತೀ ದೊಡ್ಡ ಅಣೆಕಟ್ಟುಗಳಲ್ಲಿ ಒಂದಾದ, 2 ಲಕ್ಷ ಹೆಕ್ಟೇರ್ ಗಿಂತಲೂ ಹೆಚ್ಚಿಗೆ ಜಮೀನುಗಳಿಗೆ ನೀರುಣಿಸುವ ಹೊಸಪೇಟೆಯ (Hospete) ತುಂಗಭದ್ರಾ ಅಣೆಕಟ್ಟೆಯ(TB Dam) 19ನೇ ಗೇಟ್ ಲಿಂಕ್ ಮುರಿದು ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ. ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದೆ. ಈಗಾಗಲೇ ಡ್ಯಾಂ ನಿಂದ ಸುಮಾರು 14ಕ್ಕೂ ಹೆಚ್ಚು ಟಿಎಂಸಿ ನೀರನ್ನು ಹೊರಬಿಡಲಾಗಿದೆ. ನದಿ ಬಳಿಯ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ತಜ್ಞರ ತಂಡ ಬಂದು ಕಾರ್ಯಾಚರಣೆಯನ್ನು ಶುರುಮಾಡಿದೆ. ಕೆಲವೇ ದಿನಗಳಲ್ಲಿ ಗೇಟ್ ಸರಿಮಾಡೋ ಭರವಸೆಯನ್ನು ಸರ್ಕಾರ ನೀಡಿದೆ. ಆದರೆ ದೊಡ್ಡ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವ ಕಾರಣ ಮುಂದೆ ಸಾಕಷ್ಟು ಸಮಸ್ಯೆಗಳು ಎದುರಾಗಲಿವೆ. ಹಾಗಿದ್ರೆ ಏನು ಆ ಸಮಸ್ಯೆಗಳು ?
ಕೃಷಿಗೆ ಭಾರೀ ಹೊಡೆತ:
ತುಂಗಭದ್ರಾ ಜಲಾಶಯದಿಂದ ಒಟ್ಟು ಹನ್ನೆರಡು ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಆ ಪೈಕಿ ಕರ್ನಾಟಕದ, ಕೊಪ್ಪಳ,ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿಯೇ ಸರಿಸುಮಾರು ಏಳು ಲಕ್ಷ ಎಕರೆ ಪ್ರದೇಶದಲ್ಲಿ ಡ್ಯಾಂ ನೀರನ್ನು ನಂಬಿ ರೈತರು ಕೃಷಿ ಮಾಡುತ್ತಾರೆ. ಇನ್ನು ತುಂಗಭದ್ರಾ ಜಲಾಶಯದ ನೀರನ್ನು ಬಳಸಿಕೊಂಡು ಹೆಚ್ಚಿನ ರೈತರು ಭತ್ತವನ್ನು ಬೆಳೆಯುತ್ತಾರೆ. ವರ್ಷಕ್ಕೆ ಎರಡೆರಡು ಬೆಳೆ ಬೆಳೆಯುತ್ತಾರೆ ಇದೇ ಕಾರಣಕ್ಕೆ ಕೊಪ್ಪಳ,ರಾಯಚೂರು ಜಿಲ್ಲೆಗಳನ್ನು ಭತ್ತದ ಕಣಜ ಅಂತ ಕೂಡಾ ಕರೆಯುತ್ತಾರೆ.
ಕಳೆದ ವರ್ಷ ಬರಗಾಲದಿಂದ ಡ್ಯಾಂ ತುಂಬಿರಲಿಲ್ಲ. ಹೀಗಾಗಿ ರೈತರಿಗೆ ಎರಡನೇ ಬೆಳೆಗೆ ಕೂಡಾ ನೀರು ಬಿಟ್ಟಿರಲಿಲ್ಲ. ಇದರಿಂದ ರೈತರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಆದರೆ ಈ ವರ್ಷ ಉತ್ತಮ ಮಳೆ ಆದ ಕಾರಣ ಎರಡನೇ ಬೆಳೆಯ ಕನಸು ಕಂಡ ರೈತರಿಗೆ ಇದೀಗ ಆಘಾತ ಎದುರಾಗಿದೆ. ಎರಡನೇ ಬೆಳೆಯ ಕನಸು ಡ್ಯಾಮ್ ಅವಘಡದಿಂದ ಕಮರುವಂತಾಗಿದೆ.
ಅಲ್ಲದೆ ಜುಲೈ ಮೊದಲ ವಾರದಲ್ಲಿ ಕೂಡಾ ಡ್ಯಾಂ ನಲ್ಲಿ ನೀರಿರಲಿಲ್ಲಾ. ಡ್ಯಾಂ ಡೆಡ್ ಸ್ಟೋರೆಜ್ ತಲುಪಿತ್ತು. ಹೀಗಾಗಿ ಜೂನ್, ಜುಲೈ ತಿಂಗಳಲ್ಲಿ ಕೂಡ ಡ್ಯಾಂ ಕೆಳಬಾಗದ ಜನರು ಭತ್ತವನ್ನು ನಾಟಿ ಮಾಡಿರಲಿಲ್ಲಾ. ಆದ್ರೆ ಜುಲೈ ಮೊದಲ ವಾರದ ನಂತರ ಮಲೆನಾಡ ಮಳೆಗೆ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿತ್ತು. ಹೀಗಾಗಿ ಜುಲೈ ತಿಂಗಳ ಅಂತ್ಯಕ್ಕೆ ಡ್ಯಾಂ ತುಂಬಿತ್ತು. ಡ್ಯಾಂಗೆ ನೀರು ಬರ್ತಾಯಿದ್ದಂತೆ, ಕೃಷಿಕರ ಮೊಗದಲ್ಲಿ ಮಂದಹಾಸ ಹೆಚ್ಚಾಗಿತ್ತು. ರೈತರು ಸಂತಸದಿಂದ ಭತ್ತ ನಾಟಿ ಆರಂಭಿಸಿದ್ದರು. ಆದ್ರೆ ಇದೀಗ ಮತ್ತೆ ಡ್ಯಾಂ ನಲ್ಲಿನ ನೀರು ಖಾಲಿ ಮಾಡುತ್ತಿರುವದರಿಂದ ಕೃಷಿಕರಿಗೆ ಸಂಕಷ್ಟ ಆರಂಭವಾಗುತ್ತದೆ. ಎರಡನೇ ಬೆಳೆಗಿಂತ ಮೊದಲ ಬೆಳೆಗೆ ಸರಿಯಾಗಿ ನೀರು ಸಿಗುತ್ತಾ ಅನ್ನೋ ಆತಂಕ ರೈತರನ್ನು ಕಾಡುತ್ತಿದೆ.
ಕುಡಿಯುವ ನೀರಿಗೂ ಕಂಟಕ:
ಇನ್ನು ತುಂಗಭದ್ರಾ ಜಲಾಶಯದ ನೀರಿನ ಮೇಲೆಯ ನಾಲ್ಕು ಜಿಲ್ಲೆಗಳ ಅನೇಕ ಪಟ್ಟಣ,ಮತ್ತು ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತದೆ. ಆದ್ರೆ ಇದೀಗ ಡ್ಯಾಂ ನಲ್ಲಿರೋ ನೀರು ಖಾಲಿಯಾದ್ರೆ ಕುಡಿಯುವ ನೀರಿಗೆ ಕೂಡಾ ತತ್ವಾರವಾಗುತ್ತದೆ. ಕಳೆದ ಬೇಸಿಗೆಯಲ್ಲಿ ಅನೇಕ ಕಡೆ ಕುಡಿಯಲು ಕೂಡಾ ನೀರು ಬಿಡದ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಮತ್ತೆ ಡ್ಯಾಂ ಖಾಲಿಯಾಗುತ್ತಿರವುದರಿಂದ ಬೇಸಿಗೆಯಲ್ಲಿ ಈ ಬಾರಿ ಕೂಡಾ ತತ್ವಾರವಾಗೋ ಸಾಧ್ಯತೆ ಹೆಚ್ಚಾಗಿದೆ.
ಜಲಚರಗಳಿಗೂ ತಪ್ಪಿಲ್ಲ ಸಮಸ್ಯೆ:
ತುಂಗಭದ್ರಾ ಜಲಾಶಯದ ಕೆಳಬಾಗವನ್ನು ನೀರುನಾಯಿ ಸಂರಕ್ಷಿತ ಪ್ರದೇಶ ಅಂತ ಘೋಷಣೆ ಮಾಡಲಾಗಿದೆ. ಈ ಬಾಗದಲ್ಲಿ ನೀರುನಾಯಿ ಸೇರಿದಂತೆ ಅನೇಕ ಜಲಚರಗಳಿವೆ. ಕಳೆದ ಬಾರಿ ಬೇಸಿಗೆಯಲ್ಲಿ ನದಿ ಸಂಪೂರ್ಣವಾಗಿ ಬತ್ತಿತ್ತು. ಹೀಗಾಗಿ ನೀರುನಾಯಿಗಳು ಸೇರಿದಂತೆ ಅನೇಕ ಜಲಚರಗಳು ಕೂಡಾ ಸಾಕಷ್ಟು ತೊಂದರೆ ಅನುಭವಿಸಿದ್ದವು. ಡ್ಯಾಂ ನಿಂದ ಮೊನ್ನೆ ನೀರನ್ನು ಬಿಟ್ಟ ನಂತರ, ನೀರುನಾಯಿಗಳು ಪ್ರತ್ಯಕ್ಷವಾಗಿದ್ದವು. ಬೇಸಿಗೆಯಲ್ಲಿ ನೀರು ಖಾಲಿಯಾದ್ರೆ ಮತ್ತೆ ಬೇಸಿಗೆಯಲ್ಲಿ ಜಲಚರಗಳು ತೊಂದರೆ ಅನುಭವಿಸುತ್ತವೆ.