PSI Parashuram Case: ಪರಶುರಾಮ್ ಸಾವಿನ ರಹಸ್ಯ ಡೈರಿಯಲ್ಲಿ ಅಡಕ ?! CID ಕೈ ಸೇರಿದ ಆ ಕೆಂಪು ಡೈರಿಯಲ್ಲಿ ಇರೋದೇನು?

PSI Parashuram Case: ಯಾದಗಿರಿ ಪಿಎಸ್​ಐ ಪರಶುರಾಮ (PSI Parashuram) ಅನುಮಾನಸ್ಪದವಾಗಿ ಮೃತಪಟ್ಟು ಒಂದು ವಾರ ಕಳೆದಿದೆ. ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಆಡಳಿತಾರೂಢ ಕಾಂಗ್ರೆಸ್​ ಮತ್ತು ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಈ ನಡುವೆ ಪರಶುರಾಮ್ ಸಾವಿನ ರಹಸ್ಯ ಕೆಂಪು ಡೈರಿಯಲ್ಲಿ ಅಡಗಿದೆಯೇ? ಸಿಐಡಿ(CID) ಅಧಿಕಾರಿಗಳ ತಂಡಕ್ಕೆ ಸಿಕ್ಕ ಡೈರಿಯಲ್ಲಿ ಪರಶುರಾಮ್ ಅವರು ಬರೆದಿರುವ ಎನ್ನಲಾದ ಹಣಕಾಸಿನ ಲೆಕ್ಕಾಚಾರಗಳು ಪತ್ತೆಯಾಗಿದೆ ಎನ್ನಲಾಗಿದೆ.

 

ಹೌದು, ಆ.8ರಂದು ಸಿಐಡಿ ಅಧಿಕಾರಿಗಳ ತಂಡ ಯಾದಗಿರಿ ಎಸ್‌ಪಿ ನಿವಾಸದ ಸಮೀಪದಲ್ಲಿರುವ ಪೊಲೀಸ್ ವಸತಿ ನಿಲಯದಲ್ಲಿರುವ ಪರಶುರಾಮ್ ಮನೆಗೆ ಸ್ಥಳ ಪರಿಶೀಲನೆ ಮಹಜರಿಗೆಂದು ತೆರಳಿತ್ತು. ಈ ವೇಳೆ ಅವರ ತಂದೆ, ಸಹೋದರ, ಮಾವ ಹಾಗೂ ಸ್ನೇಹಿತರು ಜೊತೆಯಲ್ಲಿದ್ದರು. ಆಗ 7.33 ಲಕ್ಷ ರು.ನಗದು ಹಣ, ಶಾಸಕ ಚೆನ್ನಾರೆಡ್ಡಿ: ರೆಡ್ಡಿ ತುನ್ನೂರು ಅವರ ಹೆಸರಿನ ಖಾಲಿ ಲೆಟರ್ ಹೆಡ್, 6 ಲಕ್ಷ ರು.ಹಣ ಬ್ಯಾಂಕಿಗೆ ಜಮೆ ಮಾಡಿದ ಬಗ್ಗೆ ರಸೀದಿಗಳು, ಇಲಾಖೆ ರಿವಾಲ್ವರ್, ವಾಕಿಟಾಕಿ ಸ್ಥಳದಲ್ಲಿ ಕಂಡು ಬಂದಾಗ, ಸಿಐಡಿ ಅಧಿಕಾರಿಗಳು ಅವುಗಳನ್ನು ತಮ್ಮ ವಶಕ್ಕೆ ಪಡೆದು ಜೊತೆಗೆ ಕೆಂಪು ಡೈರಿ ಯನ್ನೂ ಸಹ ತೆಗೆದುಕೊಂಡು ಹೋದರು.

ಪರಶುರಾಮ್ ಅವರು ಎಂದಿನಂತೆ ವಿಷಯಗಳು ಹಾಗೂ ಹಣಕಾಸಿನ ದೈನಂದಿನ ಲೆಕ್ಕಾಚಾರಗಳನ್ನು ಡೈರಿಯಲ್ಲಿ ಬರೆದಿಡುತ್ತಿದ್ದರು. ಇದರ ಬಹಳಷ್ಟು ಕಡೆಗಳಲ್ಲಿ ಲೆಕ್ಕಾಚಾರದ ಬಗ್ಗೆ ಬರೆದಿರುವುದು ಕಂಡು ಬಂದಿದೆ. ಒಂದು ವೇಳೆ, ಈ ಮಾಹಿತಿಯ ಬಗ್ಗೆಯೂ ತನಿಖೆಯಾದಲ್ಲಿ ಅಕ್ರಮದ ಇನ್ನೂ ಹೆಚ್ಚಿನ ಮುಖವಾಡಗಳು ಬಯಲಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಅಂದಹಾಗೆ ಪರಶುರಾಮ್ ಸಹೋದರ ಹನುಮಂತ ಅವರು ಈ ಕುರಿತು ಮಾಹಿತಿ ನೀಡಿದ್ದು, ಡೈರಿಯ ಒಂದಿಷ್ಟು ಪುಟಗಳಲ್ಲಿ ಹೆಸರುಗಳ ಸಮೇತ ಹಣದ ಲೆಕ್ಕಾಚಾರ ಬರೆದಿಟ್ಟಿದ್ದರೆ, ಇನ್ನೊಂದೆಡೆ ಹೆಸರುಗಳಿಲ್ಲದೆ ಲೆಕ್ಕಗಳನ್ನು ಬರೆದಿಟ್ಟಿರುವುದು ಕಂಡುಬಂದಿತ್ತು. ಹೀಗಾಗಿ ಬೇರೆ ಏನು ಬರೆದಿದ್ದಾರೆ ಎಂದು ನೋಡಬೇಕೆನ್ನುವಷ್ಟರಲ್ಲಿ, ಅದನ್ನು ತನಿಖೆಗೆ ಬಂದ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದರು ಎಂದು ಹೇಳಿದ್ದಾರೆ. ಸದ್ಯ ಆ ಡೈರಿಯಲ್ಲಿ ಏನಿದೆ? ಎನ್ನುವುದು ಕುತೂಹಲದ ವಿಚಾರವಾಗಿದೆ.

Leave A Reply

Your email address will not be published.