Electric Car: ಎಲೆಕ್ಟ್ರಿಕ್‌ ಕಾರು ಖರೀದಿಸಿದ ಗ್ರಾಹಕರಿಗೆ ಮತ್ತೆ ಪೆಟ್ರೋಲ್, ಡೀಸೆಲ್‌ ಕಾರಿಗೆ ಹಿಂತಿರುಗುವ ಬಯಕೆ !! ಕಾರಣ ಏನು?

Electric Car: ಜಗತ್ತು ಬದಲಾವಣೆಗೆ ಒಗ್ಗಿಕೊಳ್ಳುತ್ತಾ ಎಲ್ಲವನ್ನೂ ತಾಂತ್ರಿಕಮಯವಾಗಿಸಿಕೊಂಡಿದೆ. ಇದರ ಪ್ರಮುಖ ಅಂಶವೆಂದರೆ ಹೆಚ್ಚಿನ ವಾಹನಗಳು ಎಲೆಕ್ಟ್ರಿಕ್ ಮಯವಾಗುತ್ತಿವೆ. ಒಟ್ಟಿನಲ್ಲಿ ಈಗ ಎಲೆಕ್ಟ್ರಿಕ್ ಪರ್ವ ಶುರುವಾಗಿದೆ. ಅಂತೆಯೇ ಕಳೆದ ಕೆಲವು ವರ್ಷಗಳಿಂದ ಭಾರತ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುತ್ತಿದೆ. ಆದರೆ ಇದೀಗ ಎಲೆಕ್ಟ್ರಿಕ್ ಕಾರು(Electric Car) ಗಳನ್ನು ಖರೀದಿಸಿದ ಅರ್ಧಕ್ಕಿಂತ ಹೆಚ್ಚು ಜನರು ಮತ್ತೆ ಪೆಟ್ರೋಲ್, ಡೀಸೆಲ್ ಕಾರಿನತ್ತ ಹೊರಳುವ ಇಚ್ಛೆ ಹೊಂದಿದ್ದಾರಂತೆ.

ಹೌದು, ಎಲೆಕ್ಟ್ರಿಕ್ ಕಾರು ಖರೀದಿಸಿದ ಅರ್ಧಕ್ಕಿಂತ ಹೆಚ್ಚಿನವರು ತಮ್ಮ ನಿರ್ಧಾರದಿಂದ ಸಂತುಷ್ಟರಾಗಿಲ್ಲ ಎಂಬುದಾಗಿ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಇದಕ್ಕೆ ಕಾರಣ ಏನು ಅನ್ನುವುದೂ ಬಹಿರಂಗವಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಶೇ. 51ರಷ್ಟು ಎಲೆಕ್ಟ್ರಿಕ್ ಕಾರು ಮಾಲೀಕರು ಮತ್ತೊಂದು ಇವಿ ಖರೀದಿಸಲು ಇಷ್ಟಪಡುವುದಿಲ್ಲ. ಬದಲಿಗೆ ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಬದಲಾಯಿಸಲು ಆದ್ಯತೆ ನೀಡುತ್ತಾರೆ. ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿ ಗ್ರಾಹಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಸಮೀಕ್ಷೆ ತಿಳಿಸಿದೆ. ಎಲೆಕ್ಟ್ರಿಕ್ ವಾಹನಗಳಲ್ಲಿ ಕಂಡು ಬರುವ ತೊಂದರೆಗಳು ಗ್ರಾಹಕರಿಗೆ ದೈನಂದಿನ ಕಾರ್ಯಕ್ಕೆ ಅಡ್ಡಿಯನ್ನು ಉಂಟು ಮಾಡುತ್ತದೆ. ಸಾಕಷ್ಟು ಚಾರ್ಜಿಂಗ್ ಸ್ಟೇಷನ್‌ಗಳ ಕೊರತೆ, ನಿಯಮಿತ ನಿರ್ವಹಣೆಯ ತೊಂದರೆಗಳು ಮತ್ತು ಕಡಿಮೆ ಮರುಮಾರಾಟ ಮೌಲ್ಯವು ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವುದು ಸೂಕ್ತವಲ್ಲ ಎಂದು ಇವಿ ಮಾಲೀಕರು ಭಾವಿಸುವಂತೆ ಮಾಡಿದೆ ಎಂಬುದಾಗಿ ಸಮೀಕ್ಷೆಯಿಂದ ತಿಳಿದು ಬಂದಿದೆ.

ಅಂದಹಾಗೆ ದೆಹಲಿ(Delhi), ಎನ್‌ಸಿಆರ್(NCR), ಮುಂಬಯಿ(Mumbai) ಮತ್ತು ಬೆಂಗಳೂರಿನ(Bengaluru) ಲ್ಲಿ 500 ಎಲೆಕ್ಟ್ರಿಕ್ ಕಾರು ಮಾಲೀಕರನ್ನು ಗುರಿಯಾಗಿಟ್ಟುಕೊಂಡು ಪಾರ್ಕ್ ಪ್ಲಸ್ ಈ ಸಮೀಕ್ಷೆ ನಡೆಸಿದೆ. ಸಮೀಕ್ಷೆಯ ಪ್ರಕಾರ ಶೇ. 88ರಷ್ಟು ಎಲೆಕ್ಟ್ರಿಕ್ ವಾಹನ ಮಾಲೀಕರು ಚಾರ್ಜಿಂಗ್ ಸ್ಟೇಷನ್‌ಗಳ ಕೊರತೆಯನ್ನು ಉಲ್ಲೇಖಿಸಿದ್ದಾರೆ. ಭಾರತದಲ್ಲಿ 20,000ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿದ್ದರೂ ಈ ನಿಲ್ದಾಣಗಳ ಗೋಚರತೆ ತುಂಬಾ ಕಳಪೆಯಾಗಿದೆ. ಇದರಿಂದಾಗಿ ಅವುಗಳನ್ನು ಪತ್ತೆಹಚ್ಚಲು ಕಷ್ಟವಾಗುತ್ತದೆ ಎಂದು ಹೇಳಿರುವ ಹೆಚ್ಚಿನ ಇವಿ ಮಾಲೀಕರು 50 ಕಿ.ಮೀ.ಗಿಂತ ಕಡಿಮೆ ದೂರದ ಸಣ್ಣ ನಗರ ಪ್ರವಾಸಗಳಿಗೆ ಆದ್ಯತೆ ನೀಡಿರುವುದಾಗಿ ತಿಳಿಸಿದ್ದಾರೆ.

ಅಲ್ಲದೆ ಶೇ. 73ರಷ್ಟು ಇವಿ ಮಾಲೀಕರು ತಮ್ಮ ಎಲೆಕ್ಟ್ರಿಕ್ ಕಾರುಗಳು “ಕಪ್ಪು ಪೆಟ್ಟಿಗೆ” ಯಂತೆ ಭಾಸವಾಗುತ್ತಿದೆ ಎಂದು ಹೇಳಿದ್ದಾರೆ. ಸಾಕಷ್ಟು ಮಂದಿಗೆ ನಿರ್ವಹಣೆ ಒಂದು ಪ್ರಮುಖ ಸಮಸ್ಯೆಯಾಗಿದೆ. ಸ್ಥಳೀಯ ಮೆಕ್ಯಾನಿಕ್ಸ್‌ಗಳಿಗೆ ಸಣ್ಣ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಕಾರನ್ನು ಅಧಿಕೃತ ವಿತರಕರ ಬಳಿಯೇ ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದು ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.