U T Khadar: ಈ ನಾಗಬನಕ್ಕೂ ಯು ಟಿ ಖಾದರ್‌ಗೂ ಏನು ಸಂಬಂಧ? : ನಾಗಬನಕ್ಕೆ 20 ಸೆಂಟ್ಸ್ ಜಾಗ ಕೊಟ್ಟಿದ್ದ ವಿಧಾನಸಭೆ ಸ್ಪೀಕರ್
U T Khadar: ದಕ್ಷಿಣ ಕನ್ನಡ ಜಿಲ್ಲೆ ಕೋಮುವಾದಕ್ಕೆ ಎಷ್ಟು ಹೆಸರುವಾಸಿಯೋ ಅಷ್ಟೇ ಹೆಸರುವಾಸಿ ಕೋಮು ಸೌಹಾರ್ದತೆಗೆ ಕೂಡ. ಹಬ್ಬ ಹರಿದಿನಗಳು ಬಂದರೆ ಹಿಂದು- ಮುಸ್ಲಿಂ ಬಾಂಧವರು ಒಂದುಗೂಡಿ ಆಚರಿಸುತ್ತಾರೆ. ಮನೆಯ ನೆರೆಕೆರೆಯಲ್ಲಿ ಸಹಬಾಳ್ವೆಯಿಂದ ಜೀವನ ನಡೆಸುತ್ತಾರೆ. ಇನ್ನು ನಮ್ಮ ಜಿಲ್ಲೆಯ ದೈವ ದೇವರುಗಳ ವಿಚಾರಕ್ಕೆ ಬಂದರೆ ಮುಸ್ಲಿಂ ಬಾಂಧವರು, ಕ್ರೈಸ್ತರು ನಂಬುವ ಉದಾಹರಣೆಯನ್ನು ನೋಡಿದ್ದೇವೆ. ಅದರಲ್ಲೂ ದೈವದ ವಿಚಾರಕ್ಕೆ ಬಂದರೆ ಹಿಂದುಗಳಷ್ಟೇ ನಂಬಿಕೆಯಿಂದ ಅವರು ನಡೆದುಕೊಳ್ಳುತ್ತಾರೆ. ದೇವಸ್ಥಾನ, ಗುಡಿ ಕಟ್ಟಲು ಅನೇಕ ಮುಸಲ್ಮಾನರು ಜಾಗ ಬಿಟ್ಟುಕೊಟ್ಟ ಉದಾಹರಣೆಯಿದೆ. ಇದೀಗ ನಮ್ಮ ವಿಧಾನ ಸಭೆ ಸ್ಪೀಕರ್ ಯು ಟಿ ಖಾದರ್ ಅವರು ಅದೇ ಕೆಲಸವನ್ನು ಮಾಡಿದ್ದಾರೆ. ಅವರು ಹಿಂದೂ ದೈವಗಳ ಭೂತ ಕೋಲದಲ್ಲಿ ಭಾಗವಹಿಸಿದ್ದು, ಹರಕೆ ಸಲ್ಲಿಸಿದ್ದು ಇದೆ. ಈಗ ತುಳುನಾಡಿನ ನಾಗಾರಾಧನೆ ಬಗ್ಗೆ ವಿಶೇಷ ನಂಬಿಕೆ ಇರುವ ಅವರು ನಾಗಬನಕ್ಕಾಗಿ 20 ಸೆಂಟ್ಸ್ ಜಾಗವನ್ನೇ ಬಿಟ್ಟುಕೊಟ್ಟು ಸೌಹಾರ್ದತೆ ಮೆರೆದಿದ್ದಾರೆ.
ಬಂಟ್ವಾಳ ತಾಲೂಕಿನ ವಿಟ್ಲದ ಪುಣಚ ಎಂಬಲ್ಲಿ ಕಳೆದ ಹಲವು ವರ್ಷಗಳಿಂದ ಹಿಂದೂ ಕುಟುಂಬವೊಂದು ನಾಗಾರಾಧನೆ ಮಾಡಿಕೊಂಡು ಬರುತ್ತಿದೆ. ಈ ಪುಣಚ ಗ್ರಾಮದಲ್ಲಿ ಖಾದರ್ ಅವರಿಗೆ ಸೇರಿದ ತಮ್ಮ ಹಿರಿಯರಿಂದ ಬಂದ ಪಿತ್ರಾರ್ಜಿತ ಆಸ್ತಿ ಇದೆ. ಈ ಜಾಗವನ್ನು ಅವರ ಸಂಬಂಧಿ ರಹ್ಮಾನ್ ಅವರು ನೋಡಿಕೊಳ್ಳುತ್ತಿದ್ದಾರೆ. ಈ ಜಾಗದಲ್ಲಿ ಎರಡು ಕಡೆ ನಾಗಬನ ಇತ್ತು. ಆದರೆ ಅದಕ್ಕೆ ಯಾವುದೇ ಪೂಜೆ ಮಾಡದೆ ಹಾಗೆ ಖಾಲಿ ಬಿಡಲಾಗಿತ್ತು. ಈ ಮಧ್ಯೆ ರಾಮಕ್ಷತ್ರೀಯ ಜಾತಿಯ ಮನೆತನವೊಂದು ಅನೇಕ ತೊಂದರೆಗಳನ್ನು ಅನುಭವಿಸುತ್ತಿತ್ತು. ಹಾಗಾಗಿ ಈ ಕುಟುಂಬ ಅಷ್ಟಮಂಗಲವ ಪ್ರಶ್ನೆಯನ್ನು ಇಟ್ಟಿತ್ತು. ಆಗ ಅವರ ಕುಟುಂಬಕ್ಕೆ ಸಂಬಂಧ ಪಟ್ಟ ನಾಗಬನವೊಂದು ಪುಣಚದಲ್ಲಿ ಇದೆ ಅನ್ನೋದು ಕಾಣಿಸಿಕೊಳ್ತು. ಆಮೇಲೆ ಈ ಕುರಿತು ವಿಚಾರಿಸಿದಾಗ ಈ ಬನ ಇರುವ ಜಾಗ ಖಾದರ್ ಅವರದ್ದು ಎಂದು ತಿಳಿದುಬಂದಿದೆ.
ಈ ಮನೆತನದ ಹಿರಿಯರು ಮಾಜಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿರಾಜ್ ಮುಖಾಂತರ ಈ ವಿಚಾರವನ್ನು ಖಾದರ್ ಅವರಿಗೆ ಮುಟ್ಟಿಸಿದ್ದಾರೆ. ಈ ಬಗ್ಗೆ ಅರಿತ ಸ್ಪೀಕರ್ ಅವರು ಒಂದು ಮರು ಮಾತಾಡದೇ ಆ ಜಾಗವನ್ನು ಉಚಿತವಾಗಿ ಬಿಟ್ಟುಕೊಟ್ಟಿದ್ದಾರೆ. ಈ ಘಟನೆ ನಡೆದು ಈ ನಾಗರ ಪಂಚಮಿಗೆ 12 ವರ್ಷಗಳಾಯ್ತು. ಅಂದಿನಿಂದ ಆ ದೊಡ್ಡಮನೆ ಕುಟುಂಬದವರು ಆ ಬನಕ್ಕೆ ಬಂದು ನಾಗನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ. ಅದನ್ನು ಅಭಿವೃದ್ದಿ ಕೂಡ ಮಾಡಲಾಗಿದೆ. ನಿಜಕ್ಕೂ ಯು ಟಿ ಖಾದರ್ ಅವರ ಈ ಸೌಹಾರ್ಧತೆಯನ್ನು ಮೆಚ್ಚಲೇ ಬೇಕು. ಓರ್ವ ರಾಜಕಾರಣಿಯಾಗಿ ಅವರು ಅನೇಕರಿಗೆ ಈ ವಿಚಾರದಲ್ಲಿ ಮಾದರಿ ಅನ್ನಿಸಿಕೊಳ್ಳುತ್ತಾರೆ.