Haj Yatra 2024: ಕೇಂದ್ರದಿಂದ 2025ರ ಹೊಸ ಹಜ್ ನೀತಿ ಬಿಡುಗಡೆ

Haj Yatra: ಪ್ರಪಂಚದಾದ್ಯಂತ ಬರುತ್ತಿರುವ ಯಾತ್ರಿಕ ಸಂಖ್ಯೆ ಹೆಚ್ಚಿರುವ ಕಾರಣ ಕೇಂದ್ರ ಸರ್ಕಾರವು 2025ರ ಹೊಸ ಹಜ್ ನೀತಿ ಬಿಡುಗಡೆ ಮಾಡಿದೆ. ಸಾಮಾನ್ಯವಾಗಿ ಸೌದಿ ಅರೇಬಿಯಾದ ಮೆಕ್ಕಾದ ಹಜ್ ಯಾತ್ರೆ (Haj Yatra) ಕೈಗೊಳ್ಳಲು ಪ್ರತಿಯೊಬ್ಬ ಮುಸ್ಲಿಂ ಯಾತ್ರಿಕನ ಕನಸು ಆಗಿರುತ್ತೆ. ಪ್ರತಿವರ್ಷದಂತೆ ಸೀಮಿತ ಸಂಖ್ಯೆಯ ಜನರಿಗೆ ಮಾತ್ರ ಹಜ್ ಯಾತ್ರೆಗೆ ಅವಕಾಶ ನೀಡಲಾಗುತ್ತದೆ. ಅಂತೆಯೇ ಕೇಂದ್ರ ಸರ್ಕಾರವು 2025ರ ಹೊಸ ಹಜ್ ನೀತಿ ಬಿಡುಗಡೆ ಮಾಡಿದೆ. ಮುಖ್ಯವಾಗಿ 2025ರ ಹೊಸ ಹಜ್ ನೀತಿಯಲ್ಲಿ ಸರ್ಕಾರಿ ಕೋಟಾದ ಅಡಿ ಮೆಕ್ಕಾದ ಹಜ್ ಯಾತ್ರೆ ಕೈಗೊಳ್ಳುವವರ ಸಂಖ್ಯೆಯನ್ನು ಕಡಿಮೆ ಮಾಡಲಾಗಿದ್ದು, ಖಾಸಗಿ ಕೋಟಾದಡಿ ಯಾತ್ರಿಕರ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.
ಸರ್ಕಾರಿ ಕೋಟಾ ಶೇಕಡಾ ಹತ್ತರಷ್ಟು ಇಳಿಕೆ:
2025ರ ಹೊಸ ಹಜ್ ನೀತಿ ಪ್ರಕಾರ, ಭಾರತೀಯ ಹಜ್ ಸಮಿತಿಯ ಕೋಟಾವನ್ನು ಶೇಕಡಾ 70ಕ್ಕೆ ಇಳಿಸಿದ್ದು, ಹೊಸ ನೀತಿಯ ಪ್ರಕಾರ, ಭಾರತಕ್ಕೆ ನಿಗದಿಪಡಿಸಲಾದ ಹಜ್ ಯಾತ್ರಿಕರ ಒಟ್ಟು ಕೋಟಾದ 70 ಪ್ರತಿಶತವನ್ನು ಭಾರತದ ಹಜ್ ಸಮಿತಿ ನಿರ್ವಹಿಸುತ್ತದೆ. ಇನ್ನು 30 ಪ್ರತಿಶತ ಕೋಟಾವನ್ನು ಖಾಸಗಿ ಹಜ್ ಗುಂಪು ಸಂಘಟಕರಿಗೆ ನೀಡಲಾಗುತ್ತದೆ. ಕಳೆದ ವರ್ಷದ ಹಜ್ ನೀತಿಯಲ್ಲಿ ಈ ಕೋಟಾ 80- 20 ಆಗಿತ್ತು. ಹಜ್ ಯಾತ್ರೆಯನ್ನು ಇನ್ನಷ್ಟು ಸುಧಾರಿಸಲು ಸರ್ಕಾರ ನೀತಿ ರೂಪಿಸಿದೆ ಎಂದು ಉತ್ತರ ಪ್ರದೇಶ ಹಜ್ ಸಮಿತಿ ಕಾರ್ಯದರ್ಶಿ ಎಸ್.ಪಿ. ತಿವಾರಿ ಹೇಳಿದ್ದಾರೆ. ಈ ನೀತಿಯ ಅನುಸಾರ ಸರ್ಕಾರಿ ಕೋಟಾವನ್ನು ಕಡಿಮೆ ಮಾಡಲಾಗಿದೆ. ಇದರಿಂದಾಗಿ ರಾಜ್ಯದಿಂದ ಹೋಗುವ ಹಜ್ ಯಾತ್ರಿಕರ ಸಂಖ್ಯೆಯೂ ಕಡಿಮೆಯಾಗಬಹುದು ಎನ್ನಲಾಗಿದೆ.
70 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳಿಗೆ ಆದ್ಯತೆ:
2024ರ ಹಜ್ ನೀತಿಯಲ್ಲಿ ಆದ್ಯತೆಯ ಕ್ರಮವು 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ , ಮೆಹ್ರಮ್ ಇಲ್ಲದೇ ಪ್ರಯಾಣಿಸುವ ಮಹಿಳೆಯರಿಗೆ (LWM) ಮತ್ತು ಸಾಮಾನ್ಯ ವರ್ಗಕ್ಕೆ ಒತ್ತು ನೀಡಲಾಗಿದೆ. ಆದರೆ ಈಗ 2025ಕ್ಕೆ ನೀಡಲಾದ ಹೊಸ ನೀತಿಯಲ್ಲಿ, ಆದ್ಯತೆಯ ಕ್ರಮವನ್ನು 65 ವರ್ಷಕ್ಕಿಂತ ಮೇಲ್ಪಟ್ಟ ಅರ್ಜಿದಾರರು, ಮೆಹ್ರಾಮ್ ಇಲ್ಲದ ಮಹಿಳೆಯರು ಮತ್ತು ನಂತರ ಸಾಮಾನ್ಯ ವರ್ಗಕ್ಕೆ ಬದಲಾಯಿಸಲಾಗಿದೆ.
2024ರಲ್ಲಿ ಹಜ್ ಯಾತ್ರಿಗಳಿಗೆ ಭಾರತದ ಕೋಟಾ 1,75,025 ಆಗಿತ್ತು. ಇದರಲ್ಲಿ ಈಗ ಹತ್ತು ಪ್ರತಿಶತದಷ್ಟು ಕಡಿಮೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸುಮಾರು 17,500 ಯಾತ್ರಾರ್ಥಿಗಳು ಸರ್ಕಾರಿ ಕೋಟಾದಿಂದ ಹಜ್ ಮಾಡಲು ಸಾಧ್ಯವಾಗುವುದಿಲ್ಲ ಎನ್ನಲಾಗುತ್ತಿದೆ.