Charmadi Ghat: ಚಾರ್ಮಾಡಿಯಲ್ಲೂ ನಡೆಯುತ್ತಿತ್ತು ವಯನಾಡಿನಂತೆ ಜಲಸ್ಫೋಟ: ಆತಂಕದಲ್ಲಿದ್ದವರನ್ನು ಕಾಪಾಡಿದ ಮುಳುಗು ತಜ್ಞ ಈಶ್ವರ್‌ ಮಲ್ಪೆ!

ಜುಲೈ ತಿಂಗಳಲ್ಲಿ ಮುಂಗಾರು ಅಬ್ಬರಿಸಿ ಬೊಬ್ಬಿರಿದಿತ್ತು. ಕೆರೆ ಕೋಡಿ, ಹಳ್ಳ-ಕೊಳ್ಳ, ಕೆರೆ-ಕಟ್ಟೆ, ನದಿ-ತೊರೆಗಳು ತುಂಬಿ ತುಳುಕುತ್ತಿವೆ. ಆದರೆ ಆ ಗ್ರಾಮದ ಕೆರೆ ಭಾರಿ ಬೇಗ ತುಂಬಿದ ಪರಿಣಾಮ ಕೆರೆಯ ಗೇಟ್ ತೆರೆಯಲಾಗಲಿಲ್ಲ. ಇದು ಊರವರ ನಿದ್ದೆಗೆಡಿಸಿತ್ತು. ಒಂದು ವೇಳೆ ಕೆರೆ ತುಂಬಿ ಒಡೆದರೆ ಜಲಸ್ಫೋಟವೆ ಸಂಭವಿಸಿ ಇಡೀ ಊರಿಗೆ ಊರೇ ಕೊಚ್ಚಿ ಹೋಗುವ ಸಾಧ್ಯತೆ ಇತ್ತು. ಆಗ ಈ ಊರಿಗೆ ಅಪತ್ಭಾಂಧವನಾಗಿ ಬಂದವರು ಮುಳುಗು ತಜ್ಞ ಈಶ್ವರ್ ಮಲ್ಪೆ (Eshwar Malpe). ಸುಮಾರು 20 ಅಡಿ ಆಳಕ್ಕೆ ಧುಮುಕಿ, ಊರ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ಅದು ತೋಟತ್ತಾಡಿ ಗ್ರಾಮ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಚಾರ್ಮಾಡಿಯ ಅರಣ್ಯ ತಪ್ಪಲಲ್ಲಿದೆ. ಇಲ್ಲಿ ಸುಮಾರು 27.42 ಎಕರೆ ವಿಸ್ತೀರ್ಣದಲ್ಲಿ ಪೆರ್ನಾಳೆ ಕೆರೆಯಿದೆ. ಇದುವೇ ಈ ಊರಿನ ಜನರ ಜೀವಜಲ. ಇದು ಬ್ರಿಟೀಷರ ಕಾಲದಲ್ಲಿ ಕಟ್ಟಿದ ಕೆರೆ. ಈ ಕೆರೆಗೆ ನೀರು ಜಾಸ್ತಿ ತುಂಬಿದಾಗ ಹೊರಗೆ ಬಿಡಲು ಗೇಟ್ ವ್ಯವಸ್ಥೆ ಕೂಡ ಇದೆ. ಈ ಕೆರೆಯ ನೀರು ಬೇಸಿಗೆಯಲ್ಲಿ ಹೊರಹೋಗದಂತೆ ಗೇಟ್ ಗೆ ಗೋಣಿ ಚೀಲಗಳನ್ನು ಹಾಕಿ ಭದ್ರವಾಗಿ ಮುಚ್ಚಲಾಗುತ್ತದೆ. ಆದ್ರೆ ಈ ಬಾರಿ ಸುರಿದ ಭಾರೀ ಮಳೆಗೆ ಗೇಟ್ ಓಪನ್ ಮಾಡಲು ಓಡಿ ಬರುವಷ್ಟರಲ್ಲಿ, ಅದಕ್ಕಿಂತ ಮೊದಲೇ ಈ ಕೆರೆ ತುಂಬಿ, ಕೆರೆ ಕಟ್ಟೆ ಒಡೆಯುವ ಭೀತಿ ಊರ ಜನರಿಗೆ ಎದುರಾಗಿತ್ತು. ತೋಟತ್ತಾಡಿ ಗ್ರಾಮದಲ್ಲಿ 300ಕ್ಕೂ ಹೆಚ್ಚು ಕುಟುಂಬಗಳಿದ್ದು ಒಂದು ವೇಳೆ ಕೆರೆ ಕಟ್ಟೆ ಒಡೆದಿದ್ದರೆ ವಯನಾಡಿನ ದುರಂತ ಇಲ್ಲೂ ಮರುಕಳಿಸುವಂತಿತ್ತು.

ಈ ಕೆರೆಯ ಕೆಳಭಾಗದ ನೆಲ್ಲಿಗುಡ್ಡೆ, ಬೆಂದ್ರಾಳ, ಕಂಚಾರಿ ಕಂಡ ಮುಂತಾದ ಊರುಗಳ ಸುತ್ತಮುತ್ತ ಸರ್ವನಾಶವಾಗುತ್ತಿತ್ತು. ಆಗ ಆಪತ್ಭಾಂದವರಾಗಿ ಬಂದದ್ದೇ ಈ ಈಶ್ವರ್‌ ಮಲ್ಪೆ.
ಕೆರೆಯ ಗೇಟ್‌ ತೆಗೆಯದಿದ್ದರೆ ಅಪಾಯ ಖಂಡಿತ ಎಂದು ಅರಿತ ಗ್ರಾಮಸ್ಥರು ಇದನ್ನು ತೆಗೆಯಬೇಕಾದರೆ ಮುಳುಗು ತಜ್ಞರೆ ಪರಿಹಾರ ಎಂದು ನಿರ್ಧರಿಸಿದರು. ಊರ ಜನ ಉಡುಪಿಯ ಈಶ್ವರ್ ಮಲ್ಪೆ ಅವರನ್ನು ಸಂಪರ್ಕಿಸಿದರು. ಕೂಡಲೆ ತನ್ನ ತಂಡದೊಂದಿಗೆ ಓಡಿ ಬಂದು ಕಾರ್ಯ ಪ್ರವೃತ್ತರಾದ ಈಶ್ವರ್‌ ಆಕ್ಸಿಜನ್ ಸಿಲಿಂಡರ್ ಬೆನ್ನಿಗೇರಿಸಿ 20 ಅಡಿ ಆಳಕ್ಕೆ ಇಳಿದೇ ಬಿಟ್ಟರು. ನೀರು ತಡೆಯಲು ಗೇಟ್ ಗೆ ಹಾಕಿದ್ದ ಮರಳಿನ ಚೀಲಗಳನ್ನು ತೆರವುಗೊಳಿಸಿದರು. ನಂತರ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದರು. ಗೇಟ್‌ ಓಪನ್‌ ಆದಾಗ ನೀರಿನ ರಭಸಕ್ಕೆ ಈಶ್ವರ್‌ ಅವರು ಕೊಚ್ಚಿ ಹೋಗುವ ಸಾಧ್ಯತೆ ಇತ್ತು. ಹಾಗಾಗಿ ಮುಂಜಾಗೃತ ಕ್ರಮವಾಗಿ ಏಣಿಯ ಸಹಾಯದಿಂದ ಗೋಣಿಗಳನ್ನು ಆಚೆ ಸರಿಸಿ ತೆಗೆದರು. ಸಾಹಸಕ್ಕೆ ಹೆಸರಾದ ಈಶ್ವರ್ ಮಲ್ಪೆ ಮತ್ತೆ ಸಾಹಸ ಮೆರೆದಿದ್ದರು: ಅವರ ಸಾಹಸದಿಂದ ಇಡೀ ಗ್ರಾಮವೇ ಉಳಿಯಿತು, ವಯನಾಡಿನಲ್ಲಿ ಆಗಿರುವoತಹಾ ದುರಂತ ಸರಿಯಿತು.

Leave A Reply

Your email address will not be published.