Western Ghat: ಪಶ್ಚಿಮ ಘಟ್ಟ ಅರಣ್ಯ ಪ್ರದೇಶ ಒತ್ತುವರಿ ಮಾಡಿದವರಿಗೆ ಶಾಕ್‌ : ಸರ್ಕಾರ ರಚಿಸಿದ ಕಾರ್ಯಪಡೆ ಏನು ಮಾಡುತ್ತೆ..?

Western Ghat: ಇಂದಿನಿಂದ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಒತ್ತುವರಿ ತೆರವು ಕಾರ್ಯಕ್ಕೆ ಚಾಲನೆ ದೊರೆಯಲಿದೆ. ರಾಜ್ಯಸರ್ಕಾರ ಇದಕ್ಕೆಂದೇ ವಿಶೇಷ ಕಾರ್ಯಪಡೆ ರಚಿಸಿದೆ. ಕಳೆದ ಹಲವು ದಿನಗಳಿಂದ ಪಶ್ಚಿಮ ಘಟ್ಟಗಳ ಪ್ರದೇಶಗಳಲ್ಲಿ ನಡೆಯುತ್ತಿರುವ ಭೂ ಕುಸಿತ ದುರಂತಗಳಿಂದ ಎಚ್ಚೆತ್ತ ರಾಜ್ಯ ಸರ್ಕಾರ ಅರಣ್ಯ ಒತ್ತುವರಿ ತೆರವು ಕಾರ್ಯಕ್ಕೆ ಮತ್ತು ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸರ್ವ ಸನ್ನದ್ಧವಾಗಿದೆ. ಇಂದಿನಿಂದ ಅಂದರೆ ಆ.5ರಿಂದ ರಾಜ್ಯದ ಪಶ್ಚಿಮಘಟ್ಟ ಪ್ರದೇಶಗಳ ಅರಣ್ಯ ಒತ್ತುವರಿ, ಅಕ್ರಮ ತೋಟಗಳು, ಅನಧಿಕೃತ ರೆಸಾರ್ಟ್‌ಗಳು ಮತ್ತು ಇತರ ನಿರ್ಮಾಣಗಳ ತೆರವು ಕಾರ್ಯವನ್ನು ಕಾರ್ಯಪಡೆ ಆರಂಭಿಸಲಿದೆ.

ಪಶ್ಚಿಮಘಟ್ಟ ಪ್ರದೇಶಗಳ ಅರಣ್ಯ ಒತ್ತುವರಿ ಮತ್ತು ಅನಧಿಕೃತ ನಿರ್ಮಾಣಗಳ ತೆರವಿಗೆ 2023ರಲ್ಲೇ ಅರಣ್ಯ ಇಲಾಖೆ ಆದೇಶ ಹೊರಡಿಸಿತ್ತು. ಆದರೆ, ಮತ್ತೆ ಮುಂದಿನ ಕಾರ್ಯವಾಗಿ ಕಾರ್ಯಪಡೆ ರಚನೆ ಮಾಡಿರಲಿಲ್ಲ. ಈ ವರ್ಷ ಮಳೆ ಆರಂಭವಾಗುತ್ತಿದ್ದಂತೆ ಶಿರಾಡಿ, ಚಾರ್ಮಾಡಿ ಘಾಟ್‌ಗಳು, ಶಿರೂರು, ಸಕಲೇಶಪುರ ಸೇರಿದಂತೆ ವಿವಿದೆಡೆ ಭೂಕುಸಿತ ನಡೆದಿದೆ. ಇನ್ನು ವಯನಾಡ್‌ನಲ್ಲಿ ರಣಭೀಕರ ದುರಂತವೇ ನಡೆಡು ಹೋಗಿದೆ. ಇದರಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಒತ್ತುವರಿ ತೆರವಿಗೆ ಮುಂದಾಗಿದ್ದು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ.

2015ರ ನಂತರ ನಡೆದ ಒತ್ತುವರಿ ಪ್ರಕರಣಗಳ ಪೈಕಿ, ಒತ್ತುವರಿ ಸಾಬೀತಾಗಿರುವ ಪ್ರಕರಣಗಳ ತೆರವು ಕಾರ್ಯಾಚರಣೆಯನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು. ಇನ್ನು ನ್ಯಾಯಾಲಯದಲ್ಲಿರುವ ಪ್ರಕರಣಗಳ ಇತ್ಯರ್ಥಗೊಳಿಸಲು ಅಡ್ವೋಕೇಟ್ ಜನರಲ್ ಜೊತೆ ಚರ್ಚಿಸಿ ಕಾರ್ಯಪ್ರವೃತ್ತರಾಗಬೇಕು. ಹಾಗೂ ಈ ಪ್ರಕರಣಗಳ ತ್ವರಿತ ವಿಲೇವಾರಿಗೆ ವಾರದಲ್ಲಿ ಎರಡು ದಿನ ವಿಶೇಷವಾಗಿ ಮೀಸಲಿಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಖಡಕ್ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.

ಇದೀಗ ವಯನಾಡ್ ದುರಂತ ನಂತರ ಇಡೀ ವಯನಾಡು ಪರಿಸರವನ್ನು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸ ಬೇಕೆಂದು ಒತ್ತಾಯ ಕೇಳಿಬರುತ್ತಿದೆ. ಮಾಧವ ಗಾಡ್ಗೀಳ್ ಸಮಿತಿಯ ವರದಿಯ ಅನುಷ್ಠಾನಕ್ಕೆ ತರಬೇಕು. ಹಾಗೆ ಇತ್ತೀಚೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಅಧ್ಯಯನ ವರದಿಯು ಇಡೀ ವಯನಾಡ್ ಜಿಲ್ಲೆಯನ್ನೇ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿರುವುದಾಗಿ ವರದಿಯಾಗಿತ್ತು. ಅದರ ಜೊತೆಗೆ ವಯನಾಡ್‌ನಲ್ಲಿ ದುರಂತ ಸಂಭವಿಸಿದ ನಂತರ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟಗಳ 56,826 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿತ್ತು. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಕೂಡ ಇದೀಗ ಮತ್ತೊಮ್ಮೆ ಕರಡು ಅಧಿಸೂಚನೆ ಹೊರಡಿಸಿದೆ

Leave A Reply

Your email address will not be published.