Kanwar Yatra: ಕನ್ವರ್ ಯಾತ್ರೆ ವೇಳೆ ಜೀವನದ ಯಾತ್ರೆ ಮುಗಿಸಿದ 9 ಮಂದಿ: ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸುತ್ತಿದ್ದಾಗ ಎರಗಿದ ಮರಣ !
Kanwar Yatra: ಇದೀಗ ಶ್ರಾವಣ ಮಾಸ. ಈ ಮಾಸದಿಂದ ಹಬ್ಬ ಹರಿದಿನಗಳು ಆರಂಭಗೊಳ್ಳುತ್ತವೆ. ಇದು ದೇವರ ಮಾಸ ಎಂದು ಹೇಳಲಾಗುತ್ತದೆ. ಅದರಲ್ಲೂ ಉತ್ತರಭಾರತದಲ್ಲಿ ಹಬ್ಬ-ಹರಿದಿನಗಳ ಸಂಭ್ರಮ ಜೋರಾಗಿ ನಡೆಯುತ್ತದೆ. ಅವರು ಆಚರಿಸುವ ಹಬ್ಬಗಳಲ್ಲಿ ಕನ್ವರ್ ಯಾತ್ರಾ (Kanwar Yatra) ಕೂಡ ಒಂದು. ಈ ಬಾರಿ ಶ್ರಾವಣ ಮಾಸದಲ್ಲಿ ವಿಶೇಷ ಐದು ಸೋಮವಾರಗಳಿವೆ. ಈ ದಿನಗಳಲ್ಲಿ ಶಿವನ ವ್ರತವನ್ನು ಆಚರಿಸಲಾಗುತ್ತದೆ. ಹಾಗೆ ಕನ್ವರ್ ಯಾತ್ರೆ ಮೂಲಕ ಶಿವನ (Shiva) ಭಕ್ತರು ಪವಿತ್ರ ಹಿಂದೂ ಯಾತ್ರಾ ಸ್ಥಳಗಳಿಂದ ನೀರನ್ನು ತಂದು ಶಿವನಿಗೆ ಅಭಿಷೇಕ ಮಾಡುತ್ತಾರೆ. ಉತ್ತರಾಖಂಡದ ಹರಿದ್ವಾರ, ಗೌಮುಖ ಮತ್ತು ಗಂಗೋತ್ರಿ ಮತ್ತು ಭಾಗಲ್ಪುರದ ಅಜ್‌ಗಯನಾಥ್, ಬಿಹಾರದ ಸುಲ್ತಂಗಂಜ್ ಗಂಗಾ ನದಿಯ ಪವಿತ್ರ ನೀರನ್ನು ಅದ್ದೂರಿಯಾಗಿ ಮೆರವಣಿಗೆ ಮೂಲಕ ಡಿಜೆ ಹಾಕಿ ಕುಣಿದು ಕುಪ್ಪಳಿಸುತ್ತಾ ತರಲಾಗುತ್ತದೆ.
ಬಿಹಾರದ (Bihar) ವೈಶಾಲಿಯಲ್ಲಿ ಎಂದಿನಂತೆ ಕನ್ವರ್ ಯಾತ್ರೆ (Kanwar Yatra) ಮೂಲಕ ಗಂಗಾ ನೀರನ್ನು ತರುವ ವೇಳೆ ವಾಹನದಲ್ಲಿ ಡಿಜೆ (DJ Vehicle) ಹಾಕಿ ಕುಣಿಯುತ್ತಾ ಮೆರವಣಿಗೆ ಮೂಲಕ ಗಂಗಾ ನೀರನ್ನು ತರಲಾಗುತ್ತಿತ್ತು. ಇಲ್ಲೆ ನೋಡಿ ನಡೆದದ್ದು ಎಡವಟ್ಟು. ಡಿಜೆ ಇದ್ದ ವಾಹನ ಹಾಜಿಪುರ ಕೈಗಾರಿಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುತ್ತಿದ್ದಂತೆ 11,000 ವೋಲ್ಟ್ನ ಹೈಟೆನ್ಷನ್ ತಂತಿಗೆ ಡಿಜೆ ವಾಹನದ ಮೇಲ್ಭಾಗ ತಾಗಿದೆ. ಇದರ ಪರಿಣಾಮ ಕರೆಂಟ್ ಶಾಕ್ (Electrocuted) ಹೊಡೆದು 9 ಮಂದಿ ಕನ್ವರ್ ಯಾತ್ರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಷ್ಟೆ ಅಲ್ಲದೆ ಘಟನೆಯಲ್ಲಿ ಆರು ಮಂದಿಗೆ ಗಾಯಗಳಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಹಾಜಿಪುರದ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಾಜಿಪುರ ಉಪವಿಭಾಗೀಯ ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ಮಾಹಿತಿ ನೀಡಿದ್ದಾರೆ.