Kerala: ವಯನಾಡು ಭೀಕರ ಗುಡ್ಡಕುಸಿತದ ಸೂಚನೆ ನೀಡಿ ನಾಲ್ಕೈದು ಕುಟುಂಬಗಳ ಬದುಕಿಸಿದ ಗಿಳಿ !!
Kerala: ವಯನಾಡು ಭೂಕುಸಿತದಿಂದ ಉಂಟಾದ ಪ್ರವಾಹದಲ್ಲಿ ಸಿಲುಕಿ ಜೀವ ಉಳಿಸಿಕೊಳ್ಳಲು ಕಾಡಿಗೆ ತೆರಳಿ ಕಾಡಾನೆಗಳ ಆಶ್ರಯ ಪಡೆದ ಅಜ್ಜಿ ಮೊಮ್ಮಗಳ ಕಥೆ ನಿನ್ನೆ, ಮೊನ್ನೆ ಇಡೀ ದೇಶದ ಅತ್ಯಂತ ಭಾರಿ ಸುದ್ದಿಯಾಗಿತ್ತು. ಈ ಬೆನ್ನೆಲ್ಲೇ ಇದೀಗ ಗಿಳಿಯೊಂದು ಇದೇ ದುರಂತದಿಂದ ಸುಮಾರು ನಾಲ್ಕೈದು ಕುಟುಂಬಗಳ ಪ್ರಾಣ ಉಳಿಸಿರುವಂತಹ ಒಂದು ವಿಶಿಷ್ಟ ಪ್ರಸಂಗವೊಂದು ಬೆಳಕಿಗೆ ಬಂದಿದೆ.
ವಯನಾಡ್‌ನ(Wayanad) ಮೇಪ್ಪಾಡಿ ಎಂಬ ಊರಿನಲ್ಲಿ ನಡೆದ ಭೂಕುಸಿತದಲ್ಲಿ 350 ಕ್ಕೂ ಹೆಚ್ಚು ಮಂದಿ ದಾರುಣ ಸಾವನ್ನಪ್ಪಿದ್ದು, ಇನ್ನೂ ನೂರಾರು ಮಂದಿ ಕಣ್ಮರೆಯಾಗಿದ್ದಾರೆ. ಅದೆಷ್ಟೋ ಮಂದಿಯ ಕುರುಹು ಇನ್ನೂ ಸಿಕ್ಕಿಲ್ಲ. ಭೀಕರ ದುರಂತದಲ್ಲಿ ಸಾವನ್ನಪ್ಪಿದವರ ದೇಹದ ಒಂದೊಂದು ಭಾಗ ಪ್ರತ್ಯೇಕವಾಗಿ ಸಿಗುತ್ತಿರೋವಾಗ ಕಲ್ಲು ಹೃದಯವೂ ಕರಗುವಂತೆ ಭಾಸವಾಗುತ್ತಿದೆ. ಈ ನಡುವೆ ಕೆಲವು ಮನ ಮಿಡಿಯುವ ಪ್ರಸಂಗಗಳು ಹೊರಬರುತ್ತಿದೆ. ಅಂತೆಯೇ ದುರಂತ ಸಂಭವಿಸಿದ ಜಾಗದಲ್ಲೇ ಇದ್ದ ಕುಟುಂಬ ಮಾತ್ರವಲ್ಲದೇ ಅವರ ಸ್ನೇಹಿತರು ಪವಾಡ ಸದೃಶವಾಗಿ ಬದುಕಿರುವ ಘಟನೆ ನಡೆದಿದೆ. ಸಾಕು ಗಿಣಿಯೊಂದು ಅವರೆಲ್ಲರನ್ನೂ ಬದುಕಿಸಿದೆ.
ಏನಿದು ಪವಾಡ ಸದೃಶ ಘಟನೆ?
ಚುರಲ್ಮಳದ ಕೆ.ಎಂ.ವಿನೋದ್ ಎಂಬುವರ ಮನೆ ಇದೇ ಭೂಕುಸಿತ ನಡೆದ ಜಾಗದಲ್ಲಿತ್ತು. ಆದರೆ ಅವರು ದುರಂತ ಸಂಭವಿಸುವ ಮುನ್ನ ಸಂಜೆ ವಿನೋದ್ ಮತ್ತು ಅವರ ಕುಟುಂಬ ಕಾಲೋನಿ ರಸ್ತೆಯಲ್ಲಿರುವ ತನ್ನ ಸಹೋದರಿ ನಂದಾ ಅವರ ಮನೆಗೆ ತೆರಳಿದ್ದರು. ಸದ್ಯ ಅವರ ಮನೆ ಕುರುಹೇ ಸಿಗದಂತೆ ಕೊಚ್ಚಿಕೊಂಡು ಹೋಗಿದೆ. ತನ್ನ ಮನೆಯಲ್ಲಿ ಅರುಮ ಎಂಬ ‘ಕಿಂಗಿಣಿ’ ಗಿಳಿಯನ್ನು ಸಾಕುತ್ತಿದ್ದ ವಿನೋದ್ ಅವರು ತಾನು ಅಕ್ಕನ ಮನೆಗೆ ಹೋದಾಗ ಆ ಗಿಣಿಯನ್ನೂ ಪಂಜರ ಸಮೇತ ಕರೆದುಕೊಂಡು ಹೋಗಿದ್ದರು.
ಅಂದು ಬೆಳಗ್ಗಿನಿಂದಲೇ ಧಾರಾಕಾರ ಮಳೆ ಸುರಿಯುತ್ತಿದ್ದರಿಂದ ಸಂಜೆ ವೇಳೆಗೆ ಮಳೆಯ ಪ್ರಮಾಣ ಹೇರಳವಾಗಿ ಹೆಚ್ಚಳವಾಗಿದೆ. ಹೀಗಾಗಿ ಅಂದು ಸಹೋದರಿ ನಂದಾ ಮನೆಯಲ್ಲಿಯೇ ಉಳಿದ ವಿನೋದ್ ಅವರು ರಾತ್ರಿ ಊಟ ಮಾಡಿ ಮಲಗಿದ್ದರು. ಮಧ್ಯರಾತ್ರಿ ಭೂಕುಸಿತ ಸಂಭವಿಸುವ ಕೆಲವೇ ಕ್ಷಣಗಳ ಹಿಂದೆ ಮನೆಯವರಿಗೆ ಗಿಣಿ ಭೂಕುಸಿತದ ಬಗ್ಗೆ ಎಚ್ಚರಿಕೆಯ ಕರೆ ಕೊಟ್ಟಿದೆ. ಪಂಜರದಲ್ಲಿದ್ದ ಗಿಣಿ ತನ್ನ ರೆಕ್ಕೆ ಬಡಿಯುತ್ತಾ ನಿರಂತರವಾಗಿ ಕೂಗುತ್ತಾ ತನ್ನ ಮಾಲೀಕನನ್ನು ಕರೆದಿದೆ. ನಿದ್ದೆಯ ಮಂಪರಿನಲ್ಲಿದ್ದ ವಿನೋದ್ ಮತ್ತು ಮನೆಯವರು ಸ್ವಲ್ಪ ಸಮಯ ಸುಮ್ಮನಾಗಿದ್ದಾರೆ. ಆದರೆ ಗಿಣಿ ಒಂದೇ ಸಮನೇ ಕೂಗಿದ್ದರಿಂದ ಮನೆಯ ಹೊರಗೆ ಬಂದು ನೋಡಿದಾಗ ವಿನೋದ್ ಅಚ್ಚರಿ ಕಾದಿತ್ತು.
ಯಾಕೆಂದರೆ ಗಿಣಿ ಕೂಗೋದನ್ನು ನೋಡಲು ಬಂದಿದ್ದ ವಿನೋದ್‌ಗೆ ಮನೆಯ ಅಂಗಳದಲ್ಲಿ ಕೆಸರು ನೀರು ಕಂಡಿದೆ. ಕ್ಷಣ ಕ್ಷಣಕ್ಕೂ ಕೆಸರು ಮತ್ತು ನೀರು ಹೆಚ್ಚಾಗುತ್ತಿರುವುದನ್ನು ಗಮನಿಸಿದಾಗ ಇವರಿಗೆ ಭೂಕುಸಿತದ ಬಗ್ಗೆ ಆತಂಕ ಉಂಟಾಗಿದೆ. ತಕ್ಷಣ ವಿನೋದ್ ಅವರು ಮನೆಯವರನ್ನೆಲ್ಲ ಎಬ್ಬಿಸಿದ್ದು ಮಾತ್ರವಲ್ಲದೇ, ತನ್ನ ಸ್ನೇಹಿತರಾದ ಚುರಲ್‌ಮಲಾ ನಿವಾಸಿಗಳು ಜಿಜಿನ್, ಪ್ರಶಾಂತ್ ಮತ್ತು ಅಶ್ಕರ್ ಅವರಿಗೆ ಕರೆ ಮಾಡಿ ಅಪಾಯದ ಮುನ್ಸೂಚನೆ ನೀಡಿದ್ದಾರೆ. ಅವರಿಗೂ ಮನೆ ಖಾಲಿ ಮಾಡಿ ತಕ್ಷಣವೇ ಅಲ್ಲಿಂದ ಸುರಕ್ಷಿತ ಜಾಗಕ್ಕೆ ಹೋಗಲು ಸೂಚಿಸಿ ತಾವು ಕೂಡ ಮನೆಯವರ ಸಹಿತ ಅಲ್ಲಿಂದ ಹೊರಗೆ ಹೋಗಿದ್ದಾರೆ.
ಅವರು ಅಲ್ಲಿಂದ ಜಾಗ ಖಾಲಿ ಮಾಡಿದ ಕೇವಲ ಅರ್ಧ ಮುಕ್ಕಾಲು ಗಂಟೆಯಲ್ಲಿ ಭೂಕುಸಿತದ ಮಣ್ಣು ಮನೆಯೊಳಗೆ ತಲುಪಿ ಮನೆ ನೆಲಸಮವಾಗಿದೆ. ವಿನೋದ್ ಮತ್ತು ಅವರ ಸ್ನೇಹಿತ ಜಿಜಿಯ ಮನೆ ಇಲ್ಲೊಂದು ಮನೆ ಇತ್ತು ಅನ್ನೋ ಕುರುಹು ಸಿಗದಂತೆ ಸಂಪೂರ್ಣವಾಗಿ ನಾಶವಾಗಿದೆ; ಅಶ್ಕರ್ ಮತ್ತು ಪ್ರಶಾಂತ್ ಅವರ ಮನೆ ಭಾಗಶಃ ನಾಶವಾಗಿದೆ. ಪ್ರಸ್ತುತ ವಿನೋದ್ ಮತ್ತು ಅವರ ಕುಟುಂಬವು ಮೇಪ್ಪಾಡಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಿಬಿರದಲ್ಲಿದೆ