West Bengal: ಕೊನೆಗೂ ವಿವಾದಿತ ಸಿಂಹಗಳಿಗೆ ಹೊಸ ಹೆಸರಿಟ್ಟ ದೀದಿ ಗೌರ್ಮೆಂಟ್, ಅಕ್ಬರ್-ಸೀತಾ ಈಗ ಸೂರಜ್-ಸುಕನ್ಯಾ !!

West Bengal: ಪಶ್ಚಿಮ ಬಂಗಾಳದ ಸಿಲಿಗುರಿ ಸಫಾರಿ(Siliguri Safari) ಕೇಂದ್ರದಲ್ಲಿ ಅಕ್ಬರ್ ಹಾಗೂ ಸೀತಾ(Akhbar and Seeta) ಸಿಂಹದ ಜೋಡಿಯನ್ನು ಒಂದೇ ಕಡೆ ಬಿಟ್ಟು ವಿವಾದ ಸೃಷ್ಟಿಸಿಕೊಂಡಿದ್ದ ದೀದಿ ಸರ್ಕಾರ ಇದೀಗ ಹೈಕೋರ್ಟ್(High Court) ಆದೇಶದಂತೆ ಈ ಎರಡು ಸಿಂಹಗಳಿಗೆ ಹೊಸದಾಗಿ ಬೇರೆ, ಬೇರೆ ಹೆಸರನ್ನಿಟ್ಟಿವೆ.

ಹೌದು, ಸಿಂಹಗಳ ಹೆಸರು ಬದಲಿಸಬೇಕು ಎಂದು ಹೇಳಿ ಹೈಕೋರ್ಟ್ ಮೆಟ್ಟಿಲೇರಿದ್ದ ವಿಶ್ವಹಿಂದೂ ಪರಿಷತ್ ಗೆ ಕಡೆಗೂ ಜಯ ಸಿಕ್ಕಿದೆ. ಹೈಕೋರ್ಟ್ ಚಾಟಿ ಬೀಸಿದ ಬಳಿಕ ಎಚ್ಚೆತ್ತ ಟಿಎಂಸಿ ಸರ್ಕಾರ ಅಕ್ಬರ್ ಸಿಂಹಕ್ಕೆ ಸೂರಜ್(Sooraj) ಎಂದೂ, ಸೀತಾ ಸಿಂಹಿಣಿಗೆ ಸುಕನ್ಯಾ(Sukhanya) ಎಂದು ನಾಮಕರಣ ಮಾಡಿದೆ.
ಏನಿದು ಪ್ರಕರಣ?
ಈ ಸಿಂಹ ಹಾಗೂ ಸಿಂಹಿಣಿ ಜೋಡಿಯನ್ನು ತ್ರಿಪುರದಿಂದ ಸಿಲಿಗುರಿಯಲ್ಲಿರುವ ಬೆಂಗಾಲಿ ಸಫಾರಿ ಪಾರ್ಕ್‌ಗೆ ಕಳೆದ ವರ್ಷ ಫೆಬ್ರವರಿಯಲ್ಲಿ ಕರೆತರಲಾಗಿತ್ತು. ಆದರೆ ಈ ಸಿಂಹದ ಜೋಡಿಗೆ ದೀದಿ ಸರ್ಕಾರ ಇಟ್ಟ ಹೆಸರು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವಂತಿದೆ ಎಂದು ವಿಶ್ವಹಿಂದೂ ಪರಿಷತ್ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ವಿವಾದ ದೇಶದಾದ್ಯಂತ ಸುದ್ದಿಯಾಗಿತ್ತು. ಅಲ್ಲದೇ ವಿಹೆಚ್‌ಪಿ ಈ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿ ಅಚ್ಚರಿಗೆ ಕಾರಣವಾಗಿತ್ತು. ಆದರೆ ಈಗ ಹೈಕೋರ್ಟ್ ಆದೇಶದಂತೆ ಪಶ್ಚಿಮ ಬಂಗಾಳ ಸರ್ಕಾರ ಸಿಂಹಗಳ ಹೆಸರನ್ನು ಸೂರಜ್ ಹಾಗೂ ತಾನ್ಯಾ ಎಂದು ಬದಲಾಯಿಸಿ ಈ ಪ್ರಕರಣಕ್ಕೆ ತೆರೆ ಎಳೆದಿದೆ.