Sharavana Masa 2024: ಶ್ರಾವಣ ಮಾಸದಲ್ಲಿ ನಾನ್​ವೆಜ್​ ತಿನ್ನಬಾರದು ಅನ್ನಲು ಈ ರಹಸ್ಯವೂ ಕಾರಣವೂ ಇದೆ!

Sharavana Masa 2024: ನಾನ್ವೆಜ್ ಆಹಾರ ಕೆಲವರಿಗೆ ತುಂಬಾ ಇಷ್ಟ. ಎರಡು ದಿವಸ ನಾನ್ವೆಜ್ ಆಹಾರ ಬಿಟ್ಟಿರಲು ಹರಾಸಾಹಸ ಪಡಬೇಕು ಅಂದ್ರೆ ತಪ್ಪಾಗಲಾರದು. ಹಾಗಿರುವಾಗ ಶ್ರಾವಣ ಮಾಸದಲ್ಲಿ ನೀವು ನಾನ್ ವೆಜ್ ಮುಟ್ಟಬಾರದು ಅನ್ನೋದಕ್ಕೆ ನಿಮಗೆ ಸರಿಯಾದ ಕಾರಣ ಬೇಕೇ ಬೇಕು. ಬನ್ನಿ ಆ ಕಾರಣ ಏನೆಂದು ಇಲ್ಲಿ ನೋಡೋಣ.

 

ಹೌದು, ಶ್ರಾವಣ ತಿಂಗಳಲ್ಲಿ (Sharavana Masa 2024) ಹೆಚ್ಚಿನ ಜನರು ಮಾಂಸಾಹಾರದಿಂದ ದೂರವಿರುತ್ತಾರೆ. ಮನೆಯ ಹಿರಿಯರು ತಮ್ಮ ಮನೆ ಮಂದಿಗೆಲ್ಲ ಈ ಒಂದು ತಿಂಗಳು ನಾನ್ ವೆಜ್ ತಿನ್ನಬೇಡಿ ಎಂದು ಸಲಹೆ ನೀಡುತ್ತಾರೆ. ಆದರೆ, ಈ ಸಂಪ್ರದಾಯದ ಹಿಂದೆ ಧಾರ್ಮಿಕ ಮಾತ್ರವಲ್ಲ ವೈಜ್ಞಾನಿಕ ಕಾರಣಗಳಿವೆಯಂತೆ.

ಮುಖ್ಯವಾಗಿ ಹಿಂದೂ ಸಂಪ್ರದಾಯದಲ್ಲಿ ಶ್ರಾವಣ ಮಾಸಕ್ಕೆ ವಿಶೇಷವಾದ ಸ್ಥಾನವಿದೆ. ಈ ಮಾಸವು ಶಿವನಿಗೆ ಸಮರ್ಪಿತವಾಗಿದೆ. ಆಗಸ್ಟ್ 5 ರಿಂದ ಶ್ರಾವಣ ಆರಂಭವಾಗಲಿದ್ದು, ಈ ಮಾಸದಲ್ಲಿ ಶಿವ ಭಕ್ತರು ಅನುಸರಿಸಬೇಕಾದ ಕೆಲವು ನಿಯಮಗಳು ಮತ್ತು ನಿಬಂಧನೆಗಳಿವೆ. ಈ ನಿಯಮಗಳನ್ನು ಭಕ್ತಿಯಿಂದ ಅನುಸರಿಸಿದರೆ ಶಿವನ ಕೃಪೆಗೆ ಪಾತ್ರರಾಗಬಹುದು ಎಂಬ ನಂಬಿಕೆ ಇದೆ.

ಶ್ರಾವಣ ತಿಂಗಳಲ್ಲಿ ಕೆಲವರು ತಮ್ಮ ಮನೆದೇವರ ಹೆಸರಿನಲ್ಲಿ ವರ್ಷಕ್ಕೆ ಒಂದು ತಿಂಗಳು ಶ್ರಾವಣ ಮಾಸದಲ್ಲಿ ಈ ಸಂಪೂರ್ಣ ಸಸ್ಯಾಹಾರ ಅನುಸರಿಸುತ್ತಾರೆ. ಆದರೆ ಇದನ್ನು ಹೊರತು ವೈಜ್ಞಾನಿಕ ಕಾರಣವನ್ನು ಕಂಡುಕೊಂಡಿದ್ದರು ನಮ್ಮ ಹಿರಿಯರು.

ಸಾಮಾನ್ಯವಾಗಿ ಶ್ರಾವಣ ಮಾಸ ಎಂದರೆ ಮಳೆಗಾಲ ಸಮಯ. ಅಂದರೆ ಬಿಸಿಲಿನ ಅಭಾವ ಇರುತ್ತದೆ, ಹೆಚ್ಚು ಬೆಳಕಿರುವುದಿಲ್ಲ. ಹೀಗಾಗಿ ನಮ್ಮ ದೇಹದ ಜೀರ್ಣಕ್ರಿಯೆ ಕೂಡಾ ಹೆಚ್ಚು ಚುರುಕಾಗಿ ಇರುವುದಿಲ್ಲ. ಇದರಿಂದಾಗಿ ಮಾಂಸ ಆಹಾರ ಕಠಿಣ ಪದಾರ್ಥವನ್ನು ದೇಹ ಸರಿಯಾಗಿ ಜೀರ್ಣಿಸುವುದು ಕಷ್ಟ. ಆದ್ದರಿಂದ ಶ್ರಾವಣ ಮಾಸದಲ್ಲಿ ಸಸ್ಯಾಹಾರವನ್ನು ಸೇವಿಸುವುದು ಉತ್ತಮ ಎನ್ನುವ ಲೆಕ್ಕಾಚಾರವಿದೆ.

ಇನ್ನು ಮಳೆಗಾಲದಲ್ಲಿ ನೀರು ಹೆಚ್ಚು ಕಲುಷಿತವಾಗಿರುವ ನೀರಿನಲ್ಲೇ ವಾಸಿಸುವ ಮೀನುಗಳಿಗೆ ನೀರಿನಿಂದ ಬರುವ ನಾನಾ ಖಾಯಿಲೆಗಳು ಬಂದಿರಬಹುದು. ಅದರಿಂದ ರಕ್ಷಣೆಗೆ ಸಸ್ಯಾಹಾರವೇ ಸೂಕ್ತ. ಅದಲ್ಲದೆ ಮಳೆಗಾಲ ಜಲಚರಗಳಿಗೆ ಸಂತಾನೋತ್ಪತ್ತಿಯ ಸಂದರ್ಭ ಕೂಡಾ. ಈ ಸಂದರ್ಭದಲ್ಲಿ ಮನುಷ್ಯರು ತಿನ್ನಲು ಮೀನು ಹಿಡಿದರೆ ಆಗ ಸಂತಾನೋತ್ಪತ್ತಿ ಕ್ರಿಯೆಗೆ ಅಡ್ಡಿ ಪಡಿಸಿದಂತಾಗುತ್ತದೆ. ಅಷ್ಟೇ ಅಲ್ಲ, ಮೀನುಗಳ ಸಂಖ್ಯೆ ಕಡಿಮೆಯಾಗಿ ಅದರಿಂದ ಸೃಷ್ಟಿಯ ಲಯ ತಪ್ಪುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಮೀನುಗಳನ್ನೂ ಸೇರಿದಂತೆ ಬಹುತೇಕ ಮಾಂಸಾಹಾರವನ್ನು ತಿನ್ನುವುದಿಲ್ಲ.

ಒಟ್ಟಾರೆಯಾಗಿ ಹಿಂದಿನ ಕಾಲದಿಂದಲೇ ಮುಂದುವರೆದಿರುವ ಈ ಧರ್ಮ ಆಚರಣೆ ಮತ್ತು ಮನುಷ್ಯನ ದೇಹ ಮತ್ತು ಆರೋಗ್ಯಕ್ಕೂ, ಪ್ರಾಣಿಗಳು ಮತ್ತು ಪ್ರಕೃತಿಯ ಒಳಿತಿಗೂ ಉತ್ತಮವಾದ ದೃಷ್ಟಿಯನ್ನು ಇಟ್ಟುಕೊಂಡೇ ಮಾಡಲಾಗಿದೆ ಎನ್ನಲಾಗಿದೆ.

Leave A Reply

Your email address will not be published.