Mysore Chalo: ಭ್ರಷ್ಟ ಸರ್ಕಾರದ ವಿರುದ್ಧ ದೋಸ್ತಿಗಳ ರಣ ಕಹಳೆ : ಸಿಎಂ ಸಿದ್ದರಾಮಯ್ಯ ರಾಜಿನಾಮೆಗೆ ಆಗ್ರಹಿಸಿ ಮೈಸೂರು ಚಲೋ ಪಾದಯಾತ್ರೆಗೆ ಚಾಲನೆ
Mysore Chalo: ಇಂದಿನಿಂದ ರಾಜ್ಯ ರಾಜಕಾರಣದಲ್ಲಿ ಕಾವು ಏರಲಿದೆ. ಮುಡಾ ಹಗರಣ (MUDA Scam) ಹಾಗೂ ವಾಲ್ಮಿಕಿ ನಿಗಮ ಹಗರಣ ಎರಡರಲ್ಲಿ ನೇರ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಮೇಲೆ ಆರೋಪ ಬಂದಿರುವ ಹಿನ್ನೆಲೆ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಜಂಟಿಯಾಗಿ ಮೈಸೂರು ಚಲೋ (Mysuru Chalo) ಪಾದಯಾತ್ರೆಗೆ ಚಾಲನೆ ನೀಡಿದೆ. ಇಂದು ಬೆಳಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy), ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ (Yediyurappa) ಜಂಟಿಯಾಗಿ ಕೆಂಗೇರಿಯ ಕೆಂಪಮ್ಮ ದೇವಾಲಯದಲ್ಲಿ ಚಾಲನೆ ನೀಡಲಿದ್ದಾರೆ.
ಆಗಸ್ಟ್ 10ರ ವರೆಗೆ 140 ಕಿಲೋಮೀಟರ್ ಪಾದಯಾತ್ರೆ ನಡೆಸಲು ವಿವಿಧ ಪ್ಲಾನ್‌ಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಪಾದಯಾತ್ರೆಗೆ ಸರ್ಕಾರ ಅನುಮತಿ ನೀಡುವುದಿಲ್ಲ ಎಂಮದು ಮೊದಲು ಹೇಳಿಕೊಂಡಿತ್ತು. ಆದರೆ ಆಮೇಲೆ ಕೋರ್ಟ್ ಮುಖಾಂತರವೇ ವಿರೋಧ ಪಕ್ಷಗಳು ಪಾದಯಾತ್ರೆಗೆ ಅನುಮತಿ ತೆಗೆದುಕೊಂಡಿವೆ. ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಬಿಜೆಪಿ ಜೆಡಿಎಸ್ ದೋಸ್ತಿಗಳ ಜಂಟಿಯಾಗಿ ಈ ‘ಮೈಸೂರು ಚಲೋ’ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಇಂದು ಈ ಪಾದಯಾತ್ರೆ ಬಿಡದಿವರೆಗೆ ಸಾಗಲಿದೆ. ಅಲ್ಲಿ ಇಂದು ವಾಸ್ತವ್ಯ ಹೂಡಲಿದ್ದಾರೆ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಕರ್ನಾಟಕ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್, ಮಾಜಿ ಸಿಎಂ ಸದಾನಂದ ಗೌಡ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಜೆಡಿಎಸ್ ಮುಖಂಡರಾದ ಬಂಡೆಪ್ಪ ಕಾಶಂಪೂರ, ಬೋಜೇಗೌಡ, ಜಿಟಿ ದೇವೇಗೌಡ ಉಪಸ್ಥಿತರಿದ್ದಾರೆ.
ಪಾದಯಾತ್ರೆಯ ಕಾರ್ಯಕ್ರಮದಲ್ಲಿ ಎರಡು ಪಕ್ಷಗಳ ಕೋರ್ ಕಮಿಟಿ ಸದಸ್ಯರು, ಸಂಸದರು ಸೇರಿ ಸುಮಾರು 45 ನಾಯಕರು ಭಾಗಿಯಾಗಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ ಸೋಮಣ್ಣ ಕೂಡ ಉಪಸ್ಥಿತಿಯಿದ್ದರು. ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಅಶ್ವತ್ಥ್ ನಾರಾಯಣ್, ಸಂಸದ ಗೋವಿಂದ ಕಾರಜೋಳ, ಸಂಸದ ಯಧುವೀರ್, ವಿಶ್ವೇಶ್ವರ್ ಹೆಗಡೆ ಕಾಗೇರಿ, ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಸುನಿಲ್ ಕುಮಾರ್, ಜನಾರ್ದನ ರೆಡ್ಡಿ ಉಪಸ್ಥಿತರಿದ್ದಾರೆ.
ಪ್ರತಿ ವಿಧಾನ ಸಭೆಯ 200 ಮಂದಿ ಸೇರಿ ಪಾದೆಯಾತ್ರೆಯ ಉದ್ದಕ್ಕೂ 5-6 ಸಾವಿರ ಜನರು ಭಾಗವಹಿಸಲಿದ್ದಾರೆ. ಅಲ್ಲದೆ ವಿಧಾನಸಭೆ, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಮುಖಂಡರು, ಪದಾಧಿಕಾರಿಗಳು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆಯ ನಿರ್ವಹಣೆಗಾಗಿ ಸುಮಾರು 22 ವಿಭಾಗಗಳನ್ನು ರಚನೆ ಮಾಡಲಾಗಿದೆ. ಆಗಸ್ಟ್ 10ರಂದು ಬೆಳಗ್ಗೆ 10.30ಕ್ಕೆ ಮೈಸೂರಿನಲ್ಲಿ ದೇಶದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಸಮ್ಮುಖದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.