Life: ಭ್ರಮೆಯ ಬದುಕಲ್ಲೊಂದು ಬೆಳಕು ಭ್ರಮೆಗಳ ಮುಸುಕನ್ನು ಹೋಗಲಾಡಿಸಿ, ನಿಜವಾದ ಬೆಳಕಿನತ್ತ ಸಾಗಿ

Life: ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ
ಸಂಗಾತ್ಸಂಜಾಯತೇ ಕಾಮಃ ಕಾಮಾತ್ಕ್ರೋಧೋsಭಿಜಾಯತೇ||
ಕ್ರೋಧಾದ್ಭವತಿ ಸಮ್ಮೋಹಃ ಸಮ್ಮೋಹಾತ್ಸ್ಮೃತಿವಿಭ್ರಮಃ|
ಸ್ಮೃತಿಭ್ರಂಶಾದ್ಬುದ್ಧಿನಾಶೋ ಬುದ್ಧಿನಾಶಾತ್ಪ್ರಣಶ್ಯತಿ||

 

ಇಂದ್ರಿಯ ವಸ್ತುಗಳನ್ನು ಕುರಿತು ಚಿಂತಿಸುವ ಮನುಜನು ಅವುಗಳ ಮೇಲಿನ ಆಸಕ್ತಿಯಿಂದ ಬಾಂಧವ್ಯವನ್ನು ಹುಟ್ಟುಹಾಕುತ್ತಾನೆ. ಆ ಆಸಕ್ತಿಯಿಂದ ಕಾಮವು ಜನಿಸುತ್ತದೆ; ಕಾಮದಿಂದ ಕ್ರೋಧವು ಉದ್ಭವಿಸುತ್ತದೆ. ಕ್ರೋಧದಿಂದ ಮೋಹ ಪ್ರಬಲವಾಗುತ್ತದೆ, ಮೋಹದಿಂದ ಸ್ಮೃತಿಯ ಭ್ರಮೆಯು ರೂಪು ಪಡೆಯುತ್ತದೆ. ಸ್ಮೃತಿಭ್ರಮೆಯಿಂದ ಬುದ್ಧಿಯು ಹಾಳಾಗುತ್ತದೆ. ಬುದ್ಧಿ ಹಾಳಾದಾಗ ಮನುಜನು ಮತ್ತೆ ಐಹಿಕ ಪ್ರಪಂಚದಲ್ಲಿ ತೇಲುತ್ತಾನೆ ಎಂಬುದಾಗಿ ಭಗವದ್ಗೀತೆಯಲ್ಲಿ ಉಲ್ಲೇಖವಾಗಿದೆ.

ಮಾನವನು ತನ್ನ ಇಂದ್ರಿಯಗಳನ್ನು ನಿಯಂತ್ರಿಸದೆ, ಲೌಕಿಕ ಜಗತ್ತಿಗೆ ಬಾಂಧವ್ಯವನ್ನು ಬೆಳೆಸಿ, ಮಾಯಾಜಾಲದಲ್ಲಿ ಮುಳುಗುತ್ತಾನೆ. ಮುಳುಗುವ ವಿಧಾನ ಸರಾಗವಾಗಿದ್ದರೂ, ಪರಬ್ರಹ್ಮ ಸ್ವರೂಪರಾದ ಗುರುಗಳ ಅನುಗ್ರಹವಿಲ್ಲದೆ ಇಂತಹ ಆಳವಾದ ಪ್ರಾಪಂಚಿಕ ಸಮುದ್ರದಿಂದ ಹೊರಬರಲು ಅಸಾಧ್ಯ. ಹಿಂದಿನ ಲೇಖನದಲ್ಲಿ ಸತ್ಯವೆಂಬ ವಾಸ್ತವದ ಬಗ್ಗೆ ತಿಳಿದೆವು. ಇಂದಿನ ಲೇಖನದಲ್ಲಿ ಮೋಹವೆಂಬ ಭ್ರಮೆಯ ಬಗ್ಗೆ, ಗುರುಗಳ ನುಡಿಗಳಿಂದಲೇ ತಿಳಿಯೋಣ.

“ನಾವು ಆಧ್ಯಾತ್ಮಿಕತೆ ಮತ್ತು ಯೋಗಿಯ ಜೀವನವನ್ನು ಹೆಚ್ಚು ಆಳವಾಗಿ ಅರ್ಥಮಾಡಿಕೊಂಡಾಗ, 72,000 ನಾಡಿಗಳಲ್ಲಿ ಪ್ರಮುಖವಾಗಿ, ಸುಷುಮ್ನಾ ನಾಡಿ; ಇಡಾ ನಾಡಿ; ಮತ್ತು ಪಿಂಗಲಾ ನಾಡಿ ಎಂಬ ತ್ರಿನಾಡಿಗಳು ನಮ್ಮ ದೇಹದಲ್ಲಿ ಶಕ್ತಿ ಚಾಲನಗಳಾಗಿ ಹರಿಯುತ್ತವೆ ಎಂದು ತಿಳಿದುಬರುತ್ತದೆ. ಇದರಲ್ಲಿ ಸುಷುಮ್ನಾ ನಾಡಿ ಅಗ್ನಿ ಕಲೆಯಾಗಿದ್ದು, ದೇಹವನ್ನು ಸಮತೋಲನದಲ್ಲಿಡುತ್ತದೆ. ಹಾಗು ಪಿಂಗಳ ನಾಡಿಯು ಸೂರ್ಯ ಕಲೆಯಾಗಿದ್ದು, ಕ್ರೋಧ, ಅಹಂಕಾರ ಮುಂತಾದವುಗಳನ್ನು ಸೂಚಿಸುತ್ತದೆ.

ಹಾಗೆಯೇ ಇಡಾ ನಾಡಿ ಚಂದ್ರನ ಕಲೆಯಾಗಿದ್ದು, ಭಾವನಾಮಯತೆ ವ್ಯಾಮೋಹ, ಬಾಂಧವ್ಯ ಇತ್ಯಾದಿಗಳನ್ನು ಸೂಚಿಸುತ್ತದೆ. ಹುಟ್ಟಿನಿಂದಲೇ ಈ ಭಾವಗಳೆಲ್ಲವೂ ನಮ್ಮಲ್ಲಿ ಅಂತರ್ಗತವಾಗಿರುತ್ತದೆ. ಇವುಗಳನ್ನುನಿಯಂತ್ರಿಸಲು ಸಾಧ್ಯವಿಲ್ಲ ಬದಲಿಗೆ ನಾವು ಅವಗಳ ದಿಕ್ಕನ್ನು ಬದಲಾಯಿಸಬಹುದು. ಆದರೆ ಈ ಭಾವನೆಗಳ ಉತ್ಪತ್ತಿಗೆ ಕಾರಣವೇನು? ಹೇಗೆ ಹುಟ್ಟುತ್ತವೆ? ಎಲ್ಲಿಯವರೆಗೆ ಈ ಪ್ರಪಂಚವನ್ನು ನಾವು ಮನಸ್ಸಿನ ದೃಷ್ಟಿಯಿಂದ ನೋಡುತ್ತೇವೊ, ಅಲ್ಲಿಯವರೆಗೆ ಭಾವನೆಗಳು ಹುಟ್ಟುತ್ತಲೇ ಇರುತ್ತವೆ, ಮನಸ್ಸಿನಿಂದ ಭಾವನೆಗಳೇ ಹೊರತು ಆತ್ಮಕ್ಕೆ ಭಾವನೆಯಿಲ್ಲ. ಆದರೆ ಈ ಮನಸ್ಸೆಂದರೆ ಏನು? ಮನಸ್ಸು ಮೆದುಳಿನ ವ್ಯಾಖ್ಯಾನವಾಗಿದೆ.

ಆದ್ದರಿಂದ ಮನಸ್ಸನ್ನು ಅಳಿಸಲಾಗುವುದಿಲ್ಲ ಬದಲಿಗೆ ಅದನ್ನು ಅತಿಕ್ರಮಿಸಬಹುದು. ‘ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ’ ಎಂಬಂತೆ ಬಾಂಧವ್ಯಕ್ಕೂ ಮೋಹ ಕ್ಷಯಕ್ಕೂ ಕಾರಣವಾದದ್ದು ಮನಸ್ಸು. ಈ ಬಾಂಧವ್ಯವೂ ಆಧ್ಯಾತ್ಮಿಕ ಜಗತ್ತಿನೆಡೆ ಇರುವ ಕುರುಡುತನದಿಂದ ಬರುತ್ತದೆ. ಹೆಚ್ಚಿನ ಬಾರಿ, ಇದು ಸರಿಯಲ್ಲ ಎಂದು ನಮಗೆ ತಿಳಿದಿದ್ದರೂ, ನಮ್ಮ ಅರಿವು ಅಥವಾ ಅಂಗೀಕಾರವಿಲ್ಲದೆ, ನಾವು ಬಂಧನದ ಬಲೆಗೆ ಬೀಳುತ್ತೇವೆ. ತನ್ನನ್ನು ತಾನು ಪರಿವರ್ತಿಸಬೇಕೆಂಬ ಸಂಕಲ್ಪವಿದ್ದರೂ ಮನುಷ್ಯನು ತಪ್ಪನ್ನು ಮಾಡುತ್ತಾನೆ.

ಎಷ್ಟೋ ಬಾರಿ ಸಂಕಲ್ಪ ಮಾಡಿದ ಮರುಕ್ಷಣವೇ ಆ ಸಂಕಲ್ಪವನ್ನು ಮರೆಯುತ್ತಾನೆ. ಮೋಹಕ್ಕೆ ಒಳಗಾಗುತ್ತಾನೆ.
ಮನುಷ್ಯನು ಕಾಲ್ಪನಿಕ ಲೋಕದಲ್ಲಿ ಬಾಳುತ್ತಾನೆ. ಇದರ ಕಾರಣವೇ ಮಾಯೆಯ ಮೂಲವಾದ “ಗುರುತ್ವಾಕರ್ಷಣೆ.” ಈ ಆಕರ್ಷಣೆಗೆ ಒಳಗಾದವರು ಎಂದಿಗೂ ಮೋಹದಿಂದ ಹೊರಬರಲು ಸಾಧ್ಯವಿಲ್ಲ. ಗುರುತ್ವಾಕರ್ಷಣೆಯ ವಿರುದ್ಧ ಹಾರಲು ನಮಗೆ ಸಾಧ್ಯವಿಲ್ಲ. ಒಂದು ಮಹಡಿಯಿಂದ ಮತ್ತೊಂದು ಮಹಡಿಗೆ ಹೋಗಲು ಏಣಿಯ ಅಗತ್ಯವಿರುವಂತೆ, ಮಾಯೆಯಿಂದ ಹೊರಬರಲು ಮನುಷ್ಯನಿಗೆ ಆತ್ಮವಿಶ್ವಾಸ, ಏಕಾಗ್ರತೆ, ಹಾಗೂ ದೃಢ ಸ್ವಭಾವ ಎಂಬ ಏಣಿಗಳು ಇರಬೇಕು.

ಉದಾಹರಣೆಗೆ ನೀವು ಒಂದು ಭತ್ತದ ಗದ್ದೆಯನ್ನು ಖರೀದಿಸಿದ್ದೀರಿ ಮತ್ತು ಅದನ್ನು ಉಳುಮೆ ಮಾಡಿದ್ದೀರಿ. ನೀವು ಅದರೊಳಗೆ ಕಾಲಿಟ್ಟ ತಕ್ಷಣ, ನಿಮ್ಮ ಕಾಲು ಕೆಸರಿನಲ್ಲಿ ಸಿಲುಕಿಕೊಳ್ಳುತ್ತದೆ. ಆದರೆ ಕೆಸರಿದ್ದರೂ ಅದರ ಮೇಲಿರುವ ಗಟ್ಟಿಯಾದ ಹುಲ್ಲಿನ ಮೇಲೆ ಹೆಜ್ಜೆ ಇಟ್ಟರೆ, ನಿಮ್ಮ ಕಾಲು ಕೆಸರಿನಲ್ಲಿ ಮತ್ತೆ ಮುಳುಗುವುದಿಲ್ಲ. ಇಲ್ಲಿ, ಭತ್ತದ ಗದ್ದೆಯಲ್ಲಿರುವ ಕೆಸರು ನಿಮ್ಮ ಜೀವನದ ಭ್ರಮೆಯಾಗಿದೆ ಹಾಗೂ ಹುಲ್ಲು ಭ್ರಮೆಯಿಂದ ಹೊರಬರಲು ಸಾಧನವಾಗಿದೆ. ಹುಲ್ಲು, ಮನುಷ್ಯನು ಅನುಸರಿಸುವಂತಹ ದಿನಚರಿ ಹಾಗೂ ಯೋಚಿಸುವ ರೀತಿಗಳನ್ನು ಒಳಗೊಂಡಿದೆ. ನಾನು ಏಕೆ ಮಾತನಾಡುತ್ತಿದ್ದೇನೆ? ಮಾತನಾಡುವುದು ಅಗತ್ಯವೇ? ಎಂದು ಪ್ರತಿಕ್ಷಣವೂ ಆಲೋಚಿಸಬೇಕು. ಇಂತಹ ವಿವೇಚನೆ ಇದ್ದವರು ಕೆಸರಿನಲ್ಲಿ ಬೀಳುವುದಿಲ್ಲ.

ಬರಹ: ಸೌಧಾಮಿನಿ ಎಂ ವಿ

Leave A Reply

Your email address will not be published.